ನ್ಯೂಜಿಲೆಂಡ್‌ಗೆ ಅಗ್ರಸ್ಥಾನದ ಆಸೆ; ಆಫ್ರಿಕಾ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಬಯಕೆ

ಶನಿವಾರ, ಜೂಲೈ 20, 2019
26 °C
ವಿಶ್ವಕಪ್‌ 2019

ನ್ಯೂಜಿಲೆಂಡ್‌ಗೆ ಅಗ್ರಸ್ಥಾನದ ಆಸೆ; ಆಫ್ರಿಕಾ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಬಯಕೆ

Published:
Updated:

ಬರ್ಮಿಂಗಂ: ಈ ಹಿಂದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಕೈಲಿ ದಕ್ಷಿಣ ಆಫ್ರಿಕಾ ಸೋಲನುಭವಿಸಿತ್ತು. ನಾಲ್ಕು ವರ್ಷಗಳ ನಂತರ ಬುಧವಾರ ಈ ಎರಡು ತಂಡಗಳು ಮತ್ತೊಂದು ವಿಶ್ವಕಪ್‌ ಸೆಣಸಾಟದಲ್ಲಿ  ಮುಖಾಮುಖಿಯಾಗಲಿದ್ದು, ಹಿಂದಿನ ಸೋಲಿಗೆ ಮುಯ್ಯಿ ತೀರಿಸಲು ದಕ್ಷಿಣ ಆಫ್ರಿಕ ಕಾತರದಲ್ಲಿದೆ.

ಡಕ್‌ವರ್ತ್‌ ಲೂಯಿಸ್‌ ನಿಯಮದಡಿ, ನ್ಯೂಜಿಲೆಂಡ್‌ ಒಂದು ಎಸೆತ ಉಳಿದಿರುವಂತೆ 298 ರನ್‌ಗಳ ಗುರಿಯನ್ನು ನಾಲ್ಕು ವಿಕೆಟ್‌ ನಷ್ಟದಲ್ಲಿ ಸಾಧಿಸಿದ್ದನ್ನು ಹರಿಣಗಳ ತಂಡ ಇನ್ನೂ ಮರೆತಿಲ್ಲ.

ಈಗಿನ ದಕ್ಷಿಣ ಆಫ್ರಿಕ ತಂಡ ಆರಂಭದಲ್ಲೇ ಸೋಲುಗಳಿಂದ ಜರ್ಜರಿತವಾಗಿದೆ. ತಳದಲ್ಲಿರುವ ಅಪಘಾನಿಸ್ತಾನ ತಂಡವನ್ನು ತನ್ನ ಕೊನೆಯ ಪಂದ್ಯದಲ್ಲಿ ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ್ದು ಸದ್ಯಕ್ಕೆ ಸಮಾಧಾನಕರ ಅಂಶ. ಇನ್ನೊಂದು ಕಡೆ ನ್ಯೂಜಿಲೆಂಡ್‌ ಎರಡನೇ ಸ್ಥಾನದಲ್ಲಿದ್ದು, ಅಜೇಯವಾಗುಳಿದಿದೆ. ಕಿವೀಸ್‌ ಮೂರು ಪಂದ್ಯ ಗೆದ್ದುಕೊಂಡಿದ್ದು, ಭಾರತ ವಿರುದ್ಧ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು.

ಡೇಲ್‌ ಸ್ಟೇನ್‌ ಗಾಯಾಳಾಗಿ ಟೂರ್ನಿಯಿಂದ ಹೊರಬಿದ್ದಿರುವುದು ದಕ್ಷಿಣ ಆಫ್ರಿಕ ತಂಡಕ್ಕೆ ಹೊಡೆತ ನೀಡಿದೆ. ಆದರೆ ಇನ್ನೊಬ್ಬ ವೇಗಿ ಲುಂಗಿ ಗಿಡಿ ಚೇತರಿಸಿಕೊಂಡಿದ್ದು, ಬುಧವಾರದ ಪಂದ್ಯಕ್ಕೆ ಫಿಟ್‌ ಆಗಿರುವುದು, ನಾಯಕ ಫಾಫ್‌ ಡುಪ್ಲೆಸಿ ಅವರು ನಿಟ್ಟುಸಿರು ಬಿಡುವಂತೆ ಮಾಡಿದೆ.

‘ಈ ಗೆಲುವು ತಂಡದ ವಿಶ್ವಾಸ ವೃದ್ಧಿಸಲಿದೆ. ಏನಾದರೂ ಸೆಮಿಫೈನಲ್‌ ಆಸೆ ಉಳಿಸಿಕೊಳ್ಳಬೇಕಾದರೆ ನಾವು ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ’ ಎಂದು ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ನಂತರ ಡುಪ್ಲೆಸಿ ಹೇಳಿದ್ದರು.

ಈಗ ತಂಡದ ಆಸೆ ಜೀವಂತವಾಗಿರಬೇಕಾದರೆ, ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅನುಭವಿ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರನ್ನು ತಂಡ ಹೆಚ್ಚು ಅವಲಂಬಿಸಿದೆ. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕ ಬ್ಯಾಟ್ಸ್‌ಮನ್ನರು  ಸ್ಥಿರ ಪ್ರದರ್ಶನ ನೀಡಿಲ್ಲ. ಕೊನೆಯ ಪಂದ್ಯದಲ್ಲಿ ಆರಂಭ ಆಟಗಾರರಾದ ಹಾಶಿಂ ಆಮ್ಲಾ ಮತ್ತು ಕ್ವಿಂಟನ್‌ ಡಿಕಾಕ್‌ ಲಯ ಕಂಡುಕೊಂಡಿದ್ದು ತಂಡಕ್ಕೆ ನೆಮ್ಮದಿ ಮೂಡಿಸಿದೆ. ಟ್ರೆಂಟ್‌ ಬೌಲ್ಟ್‌ ಪಡೆಯ ದಾಳಿಯನ್ನು ನಿಭಾಯಿಸುವುದರಲ್ಲಿ ದಕ್ಷಿಣ ಆಫ್ರಿಕದ ಯಶಸ್ಸು ಆಡಲಿದೆ.

ಸ್ಪಿನ್ ಎದುರು ದಕ್ಷಿಣ ಆಫ್ರಿಕ ದಾಖಲೆ ದುರ್ಬಲವಾಗಿರುವುದು, ಎಜ್ಬಾಸ್ಟನ್‌ ವಿಕೆಟ್‌ ಸ್ಪಿನ್‌ಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ನ್ಯೂಜಿಲೆಂಡ್‌ ತಂಡ ಮಿಷೆಲ್‌ ಸ್ಯಾಂಟ್ನರ್‌ ಜೊತೆಗೆ ಲೆಗ್‌ ಸ್ಪಿನ್ನರ್ ಈಶ್‌ ಸೋಧಿ ಅವರನ್ಹು ಆಡಿಸುವ ಯೋಚನೆಯಲ್ಲಿದೆ.

ಕಿವೀಸ್‌ ತಂಡ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿದೆ. ಬಾಂಗ್ಲಾದೇಶ ಮತ್ತು ಅಫ್ಗಾನಿಸ್ಥಾನ ವಿರುದ್ಧ ನಾಯಕ ಕೇನ್ಸ್‌ ವಿಲಿಯಮ್ಸನ್‌ ಇನಿಂಗ್ಸ್‌ಗೆ ಲಂಗರುಹಾಕಿದ್ದರು. ರಾಸ್‌ ಟೇಲರ್‌ ಯಶಸ್ಸು ಕಾಣುತ್ತಿದ್ದಾರೆ. ಆರಂಭ ಆಟಗಾರರಾದ ಕಾಲಿನ್‌ ಮನ್ರೊ ಮತ್ತು ಮಾರ್ಟಿನ್‌ ಗಪ್ಟಿಲ್‌ ಅವರಿಂದ ತಂಡ ಉತ್ತಮ ಬುನಾದಿ ನಿರೀಕ್ಷಿಸುತ್ತಿದೆ. ಜಿಮ್ಮಿ ನೀಶಮ್‌ ಮತ್ತು ಕಾಲಿನ್‌ ಡಿ ಗ್ರಾಂಡೋಮ್‌ ಉಪಯುಕ್ತ ಆಲ್‌ರೌಂಡರ್‌ಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !