ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023 | IND Vs ENG: ಅಜೇಯ ಓಟದತ್ತ ಭಾರತ ಚಿತ್ತ

Published 28 ಅಕ್ಟೋಬರ್ 2023, 18:33 IST
Last Updated 28 ಅಕ್ಟೋಬರ್ 2023, 18:33 IST
ಅಕ್ಷರ ಗಾತ್ರ

ಲಖನೌ: ಆಡಿದ ಐದು ಪಂದ್ಯಗಳನ್ನೂ ಗೆದ್ದು  ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಭಾರತ ತಂಡವು ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಂದು ವಾರದ ವಿಶ್ರಾಂತಿಯ ಬಳಿಕ ಕಣಕ್ಕಿಳಿಯುತ್ತಿದೆ.

ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ರೋಹಿತ್ ಶರ್ಮಾ ಬಳಗವು ಸೆಣಸಲಿದೆ. ಭಾರತ ತಂಡವು ಸೆಮಿಫೈನಲ್ ಪ್ರವೇಶದ ಹೊಸ್ತಿಲಿಗೆ ಬಂದು ನಿಂತಿದ್ದರೆ, ಇಂಗ್ಲೆಂಡ್ ಹೊರಬೀಳುವ ಹಾದಿಯಲ್ಲಿದೆ. 

ಈಚೆಗೆ ಬೆಂಗಳೂರಿನಲ್ಲಿ  ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಬಟ್ಲರ್ ಬಳಗದ ಅವಕಾಶವು ಕ್ಷೀಣವಾಗಿದೆ. ಒಂದೊಮ್ಮೆ ಭಾರತದ ವಿರುದ್ಧವೂ ಸೋತರೆ ನಾಲ್ಕರ ಘಟ್ಟದ ಕನಸು ನುಚ್ಚುನೂರಾಗುವುದು ಖಚಿತ.

ವಿಶ್ವಕಪ್‌ ಟೂರ್ನಿಗೂ ಮುನ್ನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನ ಬೀಸಾಟದ ಶೈಲಿಯ ಬ್ಯಾಟಿಂಗ್ ಮೂಲಕ ಎಲ್ಲ ತಂಡಗಳಿಗೂ ನಡುಕ ಮೂಡಿಸಿದ್ದ ಇಂಗ್ಲೆಂಡ್ ಇಲ್ಲಿ ಪೇಲವವಾಗಿದೆ. ಅಫ್ಗಾನಿಸ್ತಾನದ ಎದುರು ಕೂಡ ಆಘಾತ ಅನುಭವಿಸಿದೆ.

ಅನುಭವಿ ಮತ್ತು ಉತ್ತಮ ದಾಖಲೆಗಳನ್ನು ಹೊಂದಿರುವ ಆಟಗಾರರಿದ್ದರೂ ಇಂಗ್ಲೆಂಡ್ ಈಗ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ.

ಆದರೆ ಇನ್ನೊಂದೆಡೆ ತವರಿನಂಗಳದಲ್ಲಿ ರೋಹಿತ್ ಬಳಗವು ಅಮೋಘ ಆಟವಾಡುತ್ತಿದೆ. ಮೊದಲ ಪಂದ್ಯದಿಂದಲೂ ತನ್ನ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುತ್ತಿದೆ.

ರೋಹಿತ್ ಶರ್ಮಾ ಲಯಕ್ಕೆ ಮರಳಿರುವುದು ಉತ್ತಮ ಆರಂಭ ದೊರೆಯುತ್ತಿದೆ. ಯುವ ಆಟಗಾರ ಶುಭಮನ್ ಗಿಲ್ ತಮ್ಮ ನೈಜ ಆಟಕ್ಕೆ ಮರಳಿದರೆ ಬೌಲರ್‌ಗಳು ಪರದಾಡಬೇಕಾಗಬಹುದು. 

ಇಂಗ್ಲೆಂಡ್ ತಂಡದ ಬೌಲರ್‌ಗಳಿಗೆ ನಿಜಕ್ಕೂ ದೊಡ್ಡ ಸವಾಲೆಂದರೆ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕುವುದು. ಸಚಿನ್ ತೆಂಡೂಲ್ಕರ್ (49 ಶತಕ) ಅವರ ದಾಖಲೆಯನ್ನು ಸರಿಗಟ್ಟುವುದರ ಮೇಲೆ ಕಣ್ಣಿಟ್ಟಿರುವ ‘ಚೇಸಿಂಗ್ ಮಾಸ್ಟರ್‌‘  ವಿರಾಟ್ ಇದುವರೆಗೆ ಒಟ್ಟು 354 ರನ್‌ಗಳನ್ನು ಪೇರಿಸಿದ್ದಾರೆ. ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ವಿರಾಟ್ 95 ರನ್‌ ಗಳಿಸಿದ್ದರು. ಇನ್ನೈದು ರನ್‌ ಹೊಡದಿದ್ದರೆ ಸಚಿನ್‌ ದಾಖಲೆಯನ್ನು ಮುಟ್ಟುತ್ತಿದ್ದರು.

ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ  ಸೂರ್ಯಕುಮಾರ್ ಯಾದವ್ ಅವರಿಗೆ ತಮ್ಮ ವೈಫಲ್ಯದ ಪೊರೆಯನ್ನು ಕಳಚಿಕೊಳ್ಳಲು ಇಲ್ಲೊಂದು ಅವಕಾಶ ಸಿಗಲಿದೆ. ಕಳೆದ ಪಂದ್ಯದಲ್ಲಿ ಅವರು ಕೇವಲ 2 ರನ್ ಗಳಿಸಿದ್ದರು.

ಅಶ್ವಿನ್‌ಗೆ ಅವಕಾಶ?

ಲಖನೌ ಅಂಗಣವು ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆ ಇದೆ. ಅದರಿಂದಾಗಿ ಶಾರ್ದೂಲ್ ಠಾಕೂರ್ ಬದಲಿಗೆ ಅಶ್ವಿನ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಕುಲದೀಪ್ ಮತ್ತು ಜಡೇಜ ಜೊತೆಗೆ ಅವರು ಸ್ಪಿನ್ ದಾಳಿ ಸಂಘಟಿಸಬಹುದು. ಕಿವೀಸ್ ಎದುರು ಐದು ವಿಕೆಟ್ ಗಳಿಸಿದ್ದ ಮೊಹಮ್ಮದ್ ಶಮಿ ಅವರಿಗಾಗಿ ಮೊಹಮ್ಮದ್ ಸಿರಾಜ್ ಬೆಂಚ್‌ ಕಾಯಬೇಕಾಗಬಹುದು. ಈ ಬೌಲರ್‌ಗಳ ಪಡೆಯನ್ನು ಎದುರಿಸಲು ನಾಯಕ ಬಟ್ಲರ್, ಜಾನಿ ಬೆಸ್ಟೊ, ಡೇವಿಡ್ ಮಲಾನ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್‌ ಅವರು ಸಿದ್ಧವಾಗಬೇಕಿದೆ.

ಏಕದಿನ ವಿಶ್ವಕಪ್

ಪಂದ್ಯ: 8

ಇಂಗ್ಲೆಂಡ್ ಜಯ: 4

ಭಾರತ ಜಯ: 3

ಟೈ: 1

ಏಕದಿನ ಕ್ರಿಕೆಟ್

ಪಂದ್ಯ: 106

ಭಾರತ ಜಯ: 57

ಇಂಗ್ಲೆಂಡ್ ಜಯ:  44

ಟೈ: 2

ಫಲಿತಾಂಶವಿಲ್ಲ:  3

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಆರ್. ಅಶ್ವಿನ್.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ–ವಿಕೆಟ್‌ಕೀಪರ್), ಜಾನಿ ಬೆಸ್ಟೊ, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಡೇವಿಡ್ ವಿಲಿ, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಬ್ರೈಡನ್ ಕೇರ್ಸ್, ಮೋಯಿನ್ ಆಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್.

ಪಂದ್ಯ ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT