ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ ರ‍್ಯಾಂಕಿಂಗ್: ಭಾರತದ ಗಿಲ್, ಸಿರಾಜ್‌ಗೆ ಅಗ್ರಸ್ಥಾನ

ಪಾಕ್ ನಾಯಕನನ್ನು ಹಿಂದಿಕ್ಕಿದ ಗಿಲ್
Published 8 ನವೆಂಬರ್ 2023, 9:54 IST
Last Updated 8 ನವೆಂಬರ್ 2023, 9:54 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಹಾಗೂ ವೇಗಿ ಮೊಹಮ್ಮದ್‌ ಸಿರಾಜ್‌ ಅವರು ಏಕದಿನ ಮಾದರಿಯ ಬ್ಯಾಟರ್‌ ಹಾಗೂ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯ ಪ್ರಕಾರ ಶುಭಮನ್‌ ಗಿಲ್‌ ಅವರು 830 ಪಾಯಿಂಟ್‌ ಹಾಗೂ ಸಿರಾಜ್‌ 709 ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಗಿಲ್ ಸಾಧನೆ
ಈ ವರ್ಷ ಏಕದಿನ ಮಾದರಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿರುವ ಗಿಲ್‌, ಒಟ್ಟಾರೆ 41 ಇನಿಂಗ್ಸ್‌ಗಳಲ್ಲಷ್ಟೇ ಬ್ಯಾಟ್‌ ಬೀಸಿದ್ದಾರೆ. ಆ ಮೂಲಕ ವೇಗವಾಗಿ ನಂ.1 ಸ್ಥಾನಕ್ಕೇರಿದ ಎರಡನೇ ಬ್ಯಾಟರ್‌ ಎನಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು 38 ಇನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದರು.

ಈ ವರ್ಷ 26 ಇನಿಂಗ್ಸ್‌ಗಳಲ್ಲಿ ಆಡಿರುವ ಗಿಲ್‌, ಒಂದು ದ್ವಿಶತಕ, 5 ಶತಕ ಮತ್ತು 7 ಅರ್ಧಶತಕ ಸಹಿತ 1,449 ರನ್ ಕಲೆಹಾಕಿದ್ದಾರೆ.

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಅಷ್ಟೇನು ಪರಿಣಾಮಕಾರಿ ಎನಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ (824) 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಬರ್‌ ಆಡಿರುವ 8 ಪಂದ್ಯಗಳಲ್ಲಿ 282 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ (8 ಇನಿಂಗ್ಸ್‌, 550 ರನ್‌) ಮತ್ತು ಭಾರತದ ವಿರಾಟ್‌ ಕೊಹ್ಲಿ (8 ಇನಿಂಗ್ಸ್‌, 550 ರನ್‌) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕ್ವಿಂಟನ್‌ 771 ಹಾಗೂ ಕೊಹ್ಲಿ 770 ಪಾಯಿಂಟ್‌ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ (743) ಮತ್ತು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ (739) ಪಟ್ಟಿಯಲ್ಲಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ.

ಮತ್ತೆ ಮೇಲೇರಿದ ಸಿರಾಜ್
ಈ ವರ್ಷ ಆಡಿರುವ 21 ಇನಿಂಗ್ಸ್‌ಗಳಲ್ಲಿ 40 ವಿಕೆಟ್‌ ಕಬಳಿಸಿರುವ ಸಿರಾಜ್‌, ಮತ್ತೊಮ್ಮೆ ಏಕದಿನ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಮರಳಿದ್ದಾರೆ.

2023ರ ಆರಂಭದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ತಲುಪಿದ್ದ ಸಿರಾಜ್‌, ಸದ್ಯ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಗೆ ಮುನ್ನವೂ ಅದೇ ಸ್ಥಾನದಲ್ಲಿ ಕಾಣಿಸಿಕೊಂಡು ಕೆಳಗಿಳಿದಿದ್ದರು. ಟೂರ್ನಿಯಲ್ಲಿ ನಿಧಾನವಾಗಿ ಲಯ ಕಂಡುಕೊಳ್ಳುತ್ತಿರುವ ಅವರು ಮತ್ತೆ ನಂ.1 ಬೌಲರ್‌ ಎನಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕೇಶವ್‌ ಮಹಾರಾಜ್‌ (694), ಆಸ್ಟ್ರೇಲಿಯಾದ ಆ್ಯಡಂ ಜಂಪಾ (662), ಭಾರತದ ಕುಲದೀಪ್‌ ಯಾದವ್‌ (661) ಮತ್ತು ಪಾಕಿಸ್ತಾನ ಶಾಹೀನ್‌ ಅಫ್ರಿದಿ (658) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ (327), ಅಫ್ಗಾನಿಸ್ತಾನದ ಮೊಹಮ್ಮದ್ ನಬಿ (290) ಮತ್ತು ಜಿಂಬಾಬ್ವೆಯ ಸಿಕಂದರ್‌ ರಾಜಾ (287) ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT