ಗುರುವಾರ , ಜೂನ್ 30, 2022
23 °C
ಯಷ್ಟಿಕಾ, ಸ್ನೇಹಾ ಮಿಂಚು; ಬಾಂಗ್ಲಾದೇಶಕ್ಕೆ ನಿರಾಶೆ

ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್: ಮಿಥಾಲಿ ಬಳಗಕ್ಕೆ ಜಯದ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್: ಯಷ್ಟಿಕಾ ಭಾಟಿಯಾ ಚೆಂದದ ಅರ್ಧಶತಕ ಮತ್ತು ಸ್ನೇಹಾ ರಾಣಾ ಆಫ್‌ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡವು ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು. 

ಬಾಂಗ್ಲಾದೇಶ ಎದುರು 110 ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಟೂರ್ನಿಯ  ಆರನೇ ಪಂದ್ಯವಾಡಿ ಮೂರನೇ ಜಯಸಾಧಿಸಿದ ಮಿಥಾಲಿ ರಾಜ್ ಬಳಗವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ತಂಡಕ್ಕೆ ಇನ್ನೊಂದು ಲೀಗ್ ಪಂದ್ಯ ಬಾಕಿ ಇದೆ. 27ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. 

ಸೆಡಾನ್ ಪಾರ್ಕ್‌ನಲ್ಲಿ ಮಂಗಳವಾರ  ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 

ಸ್ಮೃತಿ ಮಂದಾನ (30. 51ಎ) ಮತ್ತು ಶಫಾಲಿ ವರ್ಮಾ (42; 42ಎ) ಉತ್ತಮ ಆರಂಭ ನೀಡಿದರು. ಯಷ್ಟಿಕಾ (50; 80ಎ) ಅರ್ಧಶತಕದ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 229 ರನ್‌ ಗಳಿಸಿತು. ಮಿಥಾಲಿ ರಾಜ್ ವೈಫಲ್ಯ ಅನುಭವಿಸಿದ್ದರಿಂದ ದೊಡ್ಡ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ, ಮಧ್ಯಮ ಕ್ರಮಾಂಕದ ರಿಚಾ ಘೋಷ್ ಮತ್ತು ಪೂಜಾ ವಸ್ತ್ರಕರ್ ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು 200ರ ಗಡಿ ದಾಟಿತು. ಬಾಂಗ್ಲಾ ತಂಡದ ರಿತು ಮೋನಿ (37ಕ್ಕೆ3) ಮತ್ತು ನಾಹಿದಾ ಅಖ್ತರ್ (42ಕ್ಕೆ2)  ಉತ್ತಮ ಬೌಲಿಂಗ್ ಮಾಡಿದರು. ಸಲ್ಮಾ ಕಾತೂನ್ ಮತ್ತು ರುಮಾನಾ ಅಹಮದ್ ಅವರು ವಿಕೆಟ್ ಗಳಿಸದಿದ್ದರೂ ಬಿಗಿ ಬೌಲಿಂಗ್ ಮಾಡಿ ಬ್ಯಾಟರ್‌ಗಳಿಗೆ ತಡೆಯೊಡ್ಡುವಲ್ಲಿ ಯಶಸ್ವಿಯಾದರು. 

ಆದರೆ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು 40.3 ಓವರ್‌ಗಳಲ್ಲಿ 119 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಲತಾ ಮಂಡಲ್ ಮತ್ತು ಸಲ್ಮಾ ಖಾತೂನ್ ಬ್ಯಾಟಿಂಗ್‌ನಲ್ಲಿಯೂ ಮಿಂಚಿದರು. 

ಭಾರತದ ಸ್ನೇಹಾ ರಾಣಾ ಅವರ ಸ್ಪಿನ್ ಮೋಡಿಗೆ ಬಾಂಗ್ಲಾದ ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದರು. ಪೂನಮ್ ಯಾದವ್ ಮತ್ತು ಕನ್ನಡತಿ ರಾಜಶ್ವರಿ ಗಾಯಕವಾಡ್ ಮೇಲಿನ ಕ್ರಮಾಂಕದ ಬ್ಯಾಟಿಂಗ್ ಪಡೆಗೆ ತಡೆಯೊಡ್ಡಿದರು. ಅನುಭವಿ ಜೂಲನ್ ಮತ್ತು ಪೂಜಾ ತಲಾ ಎರಡು ವಿಕೆಟ್ ಗಳಿಸಿ ಬಾಂಗ್ಲಾಕ್ಕೆ ಪೆಟ್ಟುಕೊಟ್ಟರು. 


ಮೆಗ್‌ ಲ್ಯಾನಿಂಗ್ ಆಟದ ಪರಿ

ಮೆಗ್ ಲ್ಯಾನಿಂಗ್ ಅಜೇಯ ಶತಕ
ವೆಲ್ಲಿಂಗ್ಟನ್ (ಪಿಟಿಐ):
ನಾಯಕಿ ಮೆಗ್‌ಲ್ಯಾನಿಂಗ್ (135; 130ಎ, 4X15, 6X1) ಅಜೇಯ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಈ ಟೂರ್ನಿಯಲ್ಲಿ  ಆಡಿದ ಎಲ್ಲ ಆರು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಒಟ್ಟು 12 ಅಂಕ ಗಳಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 5ಕ್ಕೆ 271 ರನ್ ಗಳಿಸಿತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು 45.2 ಓವರ್‌ಗಳಲ್ಲಿ 5ಕ್ಕೆ272 ರನ್ ಗಳಿಸಿ ಜಯಿಸಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 5ಕ್ಕೆ 271 (ಲಿಜೆಲ್ ಲೀ 36, ವೋಲ್ವಾರ್‌ಡತ್ 90, ಸುನಿ ಲ್ಯೂಸ್ 52, ಮರಿಜಾನ್ ಕ್ಯಾಪ್ ಔಟಾಗದೆ 30) ಆಸ್ಟ್ರೇಲಿಯಾ: 45.2 ಓವರ್‌ಗಳಲ್ಲಿ 5ಕ್ಕೆ272 (ಮೆಗ್ ಲ್ಯಾನಿಂಗ್ ಔಟಾಗದೆ 135, ತಹಿಲಾ ಮೆಕ್‌ಗ್ರಾ 32, ಬೆತ್ ಮೂನಿ 21, ಆ್ಯಶ್ಲಿ ಗಾರ್ಡನರ್ 22, ಅನಾಬೆಲ್ ಸದರ್ಲೆಂಡ್ ಔಟಾಗದೆ 22, ಶಬ್ನಿಮ್ ಇಸ್ಮಾಯಿಲ್ 33ಕ್ಕೆ2, ಶೊಲ್ ಟ್ರಯಾನ್ 44ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 5 ವಿಕೆಟ್‌ಗಳ ಜಯ. 

ಬುಧವಾರದ ಪಂದ್ಯ:  ಇಂಗ್ಲೆಂಡ್–ಪಾಕಿಸ್ತಾನ (ಆರಂಭ: ಬೆಳಿಗ್ಗೆ 6.30)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು