ಶುಕ್ರವಾರ, ಮೇ 20, 2022
26 °C

ಭಾರತ‌ ಟೆಸ್ಟ್‌ ತಂಡ ಮುನ್ನಡೆಸುವುದು ದೊಡ್ಡ ಜವಾಬ್ದಾರಿ: ಕೆ.ಎಲ್‌. ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್: ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡವನ್ನು ಮುನ್ನಡೆಸುವುದು ದೊಡ್ಡ ಜವಾಬ್ದಾರಿ ಎಂದು ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಗಳ‌ ಉಪನಾಯಕ ಕೆ.ಎಲ್.‌ ರಾಹುಲ್‌ ಹೇಳಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬಳಿಕ ವಿರಾಟ್‌ ಕೊಹ್ಲಿ, ಟೆಸ್ಟ್‌ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೀಗಾಗಿ ಈ ಮಾದರಿಯಲ್ಲಿ ತಂಡದ ಹೊಸ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

ವಿಕೆಟ್‌ ಕೀಪರ್‌, ಬ್ಯಾಟರ್‌ಗಳಾದ ಕೆ.ಎಲ್. ರಾಹುಲ್‌ ಮತ್ತು ರಿಷಭ್‌ ಪಂತ್‌ ಅವರು ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಬಲ್ಲರು ಎಂದು ಹಲವು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫಿಕಾ ವಿರುದ್ಧದ ಸರಣಿಯನ್ನು ಭಾರತ 2-1 ಅಂತರದಿಂದ ಸೋತಿತ್ತು. ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ ಗಾಯಗೊಂಡಿದ್ದರಿಂದ, ಆ ಪಂದ್ಯವನ್ನು ರಾಹುಲ್‌ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.

ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ, ನಾಳೆ (ಜ.19) ಪಾರ್ಲ್‌ನಲ್ಲಿ ನಡೆಯಲಿದೆ.

ಸದ್ಯ ಗಾಯಗೊಂಡು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿರುವ ನಾಯಕ ರೋಹಿತ್‌ ಶರ್ಮಾ ಬದಲು ರಾಹುಲ್‌, ಏಕದಿನ ಸರಣಿಗೆ ತಂಡ ಮುನ್ನಡೆಸಲಿದ್ದಾರೆ. ವೇಗಿ ಜಸ್‌ಪ್ರೀತ್‌ ಬೂಮ್ರಾ ಉಪನಾಯಕರಾಗಿ ರಾಹುಲ್‌ಗೆ ಸಾಥ್‌ ನೀಡಲಿದ್ದಾರೆ.

ಟೆಸ್ಟ್‌ ತಂಡದ ನಾಯಕತ್ವದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್‌, 'ನಾನು ಈವರೆಗೆ ಆ ಬಗ್ಗೆ ಯೋಚಿಸಿಲ್ಲ. ಈತನಕ ಕೇವಲ ಸುದ್ದಿಗಳು ಮತ್ತು ಲೇಖನಗಳು ಪ್ರಕಟವಾಗುತ್ತಿವೆ. ಜೋಹಾನ್ಸ್‌ಬರ್ಗ್‌ನಲ್ಲಿ ಟೆಸ್ಟ್‌ ತಂಡದ ನಾಯಕನಾಗುವ ಅವಕಾಶ ನನಗೆ ಸಿಕ್ಕಿತ್ತು. ಅದೊಂದು ವಿಶೇಷ ಕ್ಷಣ. ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಆದರೆ, ಅದು ನನ್ನ ಪಾಲಿಗೆ ದೊಡ್ಡ ಕಲಿಕಾ ಅನುಭವ. ಅದು ನಾನು ಯಾವಾಗಲೂ ಹೆಮ್ಮೆ ಪಡುವಂತಹ ಕ್ಷಣ' ಎಂದಿದ್ದಾರೆ.

ಮುಂದುವರಿದು, 'ದೇಶದ ತಂಡ ಮುನ್ನಡೆಸುವುದು ಪ್ರತಿಯೊಬ್ಬರ ಪಾಲಿಗೂ ವಿಶೇಷವಾದದ್ದು ಮತ್ತು ಅದಕ್ಕೆ ನಾನೇನು ಹೊರತಲ್ಲ. ನನಗೆ ಆ ಹೊಣೆ ವಹಿಸಿಕೊಟ್ಟರೆ, ಖಂಡಿತಾ ಅದೊಂದು ದೊಡ್ಡ ಜವಾಬ್ದಾರಿಯಾಗಲಿದೆ. ಅದು ಉತ್ಸುಕಗೊಳ್ಳುವ ಸಂಗತಿ. ನಾನು ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ವರ್ತಮಾನದ ಬಗ್ಗೆ ಮಾತ್ರವೇ ಗಮನಹರಿಸುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು