ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AFG 3RD T20: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ರೋಹಿತ್​ ಶರ್ಮಾ

Published 18 ಜನವರಿ 2024, 11:21 IST
Last Updated 18 ಜನವರಿ 2024, 11:21 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಅಫ್ಗಾನಿಸ್ತಾನ ಹಾಗೂ ಭಾರತ ನಡುವಿನ ಟಿ20 ಪಂದ್ಯದಲ್ಲಿ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ನಡೆಸಿ ಮೂರು ದಾಖಲೆ ಬರೆದರು.

ಈ ಪಂದ್ಯದಲ್ಲಿ ರನ್‌ಗಳ ಹೊಳೆ ಹರಿಯಿತು. ಎರಡು ಸೂಪರ್ ಓವರ್‌ಗಳ ರೋಚಕ ರಸದೌತಣ ಉಣಬಡಿಸಿದ ಹಣಾಹಣಿಯಲ್ಲಿ ಆತಿಥೇಯ ಭಾರತ ಜಯಿಸಿತು. ಆದರೆ ಕ್ರಿಕೆಟ್ ಲೋಕದ ‘ಚಿಕ್ಕ ವಯಸ್ಸಿನ’ ತಂಡ ಅಫ್ಗಾನಿಸ್ತಾನದ ದಿಟ್ಟ ಹೋರಾಟ ಮನ ಗೆದ್ದಿತು.

ಅಫ್ಗನ್ ತಂಡವು ಭಾರತದ ಎದುರು ಆಡಿದ ಚೊಚ್ಚಲ ಟಿ20 ಸರಣಿ ಇದು. ಇದರಲ್ಲಿ ಆತಿಥೇಯ ಬಳಗವು 3–0ಯಿಂದ ಕ್ಲೀನ್‌ಸ್ವೀಪ್ ಜಯಸಾಧಿಸಿತು. ಮೊದಲೆರಡೂ ಪಂದ್ಯಗಳಲ್ಲಿ ಭಾರತ ಗೆದ್ದಿತ್ತು. ಆದ್ದರಿಂದ ಮೂರನೇ ಮತ್ತು ಕೊನೆಯ ಪಂದ್ಯಕ್ಕೆ ಅಷ್ಟೇನೂ ಮಹತ್ವ ಇರಲಿಲ್ಲ. ಆದರೆ ಅಫ್ಗನ್ ತಂಡದವರ ದಿಟ್ಟ ಹೋರಾಟದಿಂದಾಗಿ ಈ ಪಂದ್ಯವು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ರೋಚಕ ಸೆಣಸಾಟವಾಗಿ ದಾಖಲಾಯಿತು.

ಅಫ್ಗನ್ ಎದುರಿನ ಆರಂಭಿಕ ಎರಡು ಟಿ20 ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದರು. ಇದರ ಜೊತೆಗೆ 3 ಹೊಸ ದಾಖಲೆಗಳನ್ನು ಬರೆದರು.

ವಿರಾಟ್‌ ಕೊಹ್ಲಿ ದಾಖಲೆ ಮುರಿದ ರೋಹಿತ್‌

ಅಂತರರಾಷ್ಟ್ರೀಯ ಟಿ–20 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ನಾಯಕನಾಗಿ 1570 ರನ್‌ ಹೊಡೆದಿದ್ದರು. ರೋಹಿತ್‌ ಶರ್ಮಾ ಈ ದಾಖಲೆಯನ್ನು ಮುರಿದರು. ಇದರೊಂದಿಗೆ ಭಾರತದ ಪರ ನಾಯಕನಾಗಿ ಅತ್ಯಧಿಕ ರನ್​ಗಳಿಸಿದ ಆಟಗಾರ ಎಂಬ ಶ್ರೇಯ ಪಡೆದಿದ್ದಾರೆ. 

ರೋಹಿತ್​ 44ರನ್​ ಗಳಿಸುತ್ತಿದ್ದಂತೆ ವಿರಾಟ್​ ಕೊಹ್ಲಿಯ ದಾಖಲೆ ಮುರಿದರು. ರೋಹಿತ್‌ ನಾಯಕನಾಗಿ ಒಟ್ಟು 1647 ರನ್‌ ಹೊಡೆದಿದ್ದಾರೆ.

ಜತೆಯಾಟದ ದಾಖಲೆ

ಯುವ ಆಟಗಾರ ರಿಂಕು ಸಿಂಗ್‌ ಮತ್ತು ರೋಹಿತ್ 5ನೇ ವಿಕೆಟ್​ಗೆ ಅಜೇಯ 190 ರನ್​ ಜತೆಯಾಟ ನಡೆಸಿರುವುದು ದಾಖಲೆಯಾಗಿದೆ. ಭಾರತ ಪರ ಅತ್ಯಧಿಕ ಜತೆಯಾಟ ನಡೆಸಿದ ಮೊದಲ ಜೋಡಿ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಅವರ ಹೆಸರಿನಲ್ಲಿ ಇತ್ತು. 2022ರಲ್ಲಿ ಐರ್ಲೆಂಡ್‌​ ವಿರುದ್ಧದ ಪಂದ್ಯದಲ್ಲಿ ಸಂಜು ಮತ್ತು ಹೂಡಾ 176 ರನ್​ಗಳ ಜತೆಯಾಟ ನಡೆಸಿದ್ದರು.

ರಿಂಕು ಸಿಂಗ್‌ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು. 38 ಎಸೆತ ಎದುರಿಸಿ ಅಜೇಯ 63 ರನ್​ ಗಳಿಸಿದರು. ಇದರಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ಇದ್ದವು. ರೋಹಿತ್​ ಶರ್ಮಾ 69 ಎಸೆತಗಳಿಂದ ಅಜೇಯ 121 ರನ್​ ಬಾರಿಸಿ ಶತಕ ಹೊಡೆದರು. ಇದರಲ್ಲಿ 8 ಸಿಕ್ಸರ್​ ಮತ್ತು 11 ಬೌಂಡರಿಗಳಿದ್ದವು.

ಶತಕದ ದಾಖಲೆ

ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 69 ಎಸೆತಗಳಿಂದ ಅಜೇಯ 121 ರನ್​ ಬಾರಿಸಿ ಶತಕ ಹೊಡೆದರು. ಇದರಲ್ಲಿ 8 ಸಿಕ್ಸರ್​ ಮತ್ತು 11 ಬೌಂಡರಿಗಳಿದ್ದವು. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.

ರೋಹಿತ್‌ ಅವರು 5 ಶತಕಗಳನ್ನು ಬಾರಿಸಿದ್ದಾರೆ. 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್​ ಎರಡನೇ ಸ್ಥಾನದಲ್ಲಿ, ಮೂರು ಶತಕ ಬಾರಿಸಿರುವ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್ 3ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT