ಭಾನುವಾರ, ಸೆಪ್ಟೆಂಬರ್ 25, 2022
30 °C

IND vs AFG Asia Cup 2022| ಅಫ್ಗನ್‌ ವಿರುದ್ಧ ಭಾರತಕ್ಕೆ 101ರನ್‌ಗಳ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಎರಡೂವರೆ ವರ್ಷಗಳ ನಂತರ ಶತಕದ ಸಂಭ್ರಮ ಆಚರಿಸಿದರು. ದುಬೈಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ನಡೆದ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ವಿರಾಟ್ ಅಜೇಯ ಶತಕ ದಾಖಲಿಸಿದರು. 

ಟೂರ್ನಿಯ ಫೈನಲ್ ಪ್ರವೇಶದ ಅವಕಾಶವವನ್ನು ಈಗಾಗಲೇ ಕಳೆದುಕೊಂಡಿರುವ ಭಾರತ ತಂಡವು ಅಫ್ಗನ್ ಎದುರು 101 ರನ್‌ಗಳ ಜಯದೊಂದಿಗೆ ಅಭಿಯಾನ ಮುಗಿಸಿತು.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಹೊಡೆದ ಮೊದಲ ಶತಕ ಇದು. ಚುಟುಕು ಕ್ರಿಕೆಟ್‌ನಲ್ಲಿ ಅವರು ಮೂರು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ ಅಜೇಯ 94 ರನ್‌ಗಳೇ ಇದುವರೆಗಿನ ಶ್ರೇಷ್ಠ  ವೈಯಕ್ತಿಕ ಸ್ಕೋರ್ ಆಗಿತ್ತು. 

ಅವರ ವೃತ್ತಿಜೀವನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ 71ನೇ ಶತಕವೂ ಇದಾಗಿದೆ. ಅವರು 2019ರ ನವೆಂಬರ್ 22ರಂದು ಕೋಲ್ಕತ್ತದಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ 70ನೇ ಶತಕ ಗಳಿಸಿದ್ದರು. 

ಇಲ್ಲಿ 53 ಎಸೆತಗಳಲ್ಲಿ ಶತಕದ ಗಡಿ ದಾಟಿದ ವಿರಾಟ್, ತಮ್ಮಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿ ತೋಳಗಲಿಸಿ ಸಂಭ್ರಮಿಸಿದರು. ತಮ್ಮ ಕೊರಳಲ್ಲಿದ್ದ ಲಾಕೆಟ್‌ ಚುಂಬಿಸಿದರು. ಇನ್ನೊಂದು ಬದಿಯಲ್ಲಿದ್ದ ರಿಷಭ್ ಪಂತ್ ಅವರನ್ನು ಆಲಂಗಿಸಿಕೊಂಡು ಸಂತಸ ಹಂಚಿಕೊಂಡರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಿಂಚಿನ ಸಂಚಲನ ಮೂಡಿತು. ಎಂಟನೇ ಓವರ್‌ನಲ್ಲಿ ಡೀಪ್‌ ಮಿಡ್‌ ವಿಕೆಟ್‌ ಫೀಲ್ಡರ್ ಇಬ್ರಾಹಿಂ ಜದ್ರಾನ್ ಅವರು ವಿರಾಟ್ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ದು ವರದಾನವಾಯಿತು. 

ಆದರೆ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋತಿರುವ ಭಾರತ ತಂಡವು ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ.
ಔಪಚಾರಿಕವಾಗಿದ್ದ ಈ ಪಂದ್ಯದಲ್ಲಿ ವಿರಾಟ್ ಶತಕದಿಂದಾಗಿ ಭಾರತ ಪಾಳೆಯದಲ್ಲಿ  ಸಂಭ್ರಮ
ಗರಿಗೆದರಿತು. ಮೊದಲು ಬ್ಯಾಟಿಂಗ್ ಮಾಡಿದ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 212 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 111 ರನ್‌ ಗಳಿಸಿತು. 

ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ನಾಯಕತ್ವ ವಹಿಸಿರುವ ಕೆ.ಎಲ್. ರಾಹುಲ್ (62; 41ಎ) ಮತ್ತು ವಿರಾಟ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ 119 ರನ್‌ ಗಳಿಸಿದರು. ಇಬ್ರಾಹಿಂ ಜದ್ರಾನ್ (ಔಟಾಗದೆ 64) ಅರ್ಧಶತಕ ಹೊಡೆದರು. ಭಾರತದ ಭುವನೇಶ್ವರ್ ಕುಮಾರ್ ಐದು ವಿಕೆಟ್ ಗಳಿಸಿದರು.

ಬುಧವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಮಾಡಿದ್ದ ಅಫ್ಗನ್ ಬೌಲರ್‌ಗಳು ಇಲ್ಲಿ ಮಂಕಾದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು