ಧೋನಿಯನ್ನೇ ಮೀರಿಸಿದ ರವೀಂದ್ರ ಜಡೇಜ ವಿಶಿಷ್ಟ ದಾಖಲೆ

ಕ್ಯಾನ್‌ಬೆರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಭಾರತ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ರವೀಂದ್ರ ಜಡೇಜ 44 ರನ್ ಗಳಿಸಿ ಔಟಾಗದೆ ಉಳಿದರು.
ಈ ಪಂದ್ಯದಲ್ಲಿ ರವೀಂದ್ರ ಜಡೇಜ ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದು ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾದರು.
ಇದರೊಂದಿಗೆ ಮಾಜಿ ನಾಯಕ ಹಾಗೂ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಲ್ಲಿದ್ದ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 23 ಎಸೆತಗಳನ್ನು ಎದುರಿಸಿರುವ ಜಡೇಜಾ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಪೇರಿಸಿದರು. ಈ ಮೂಲಕ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಇದನ್ನೂ ಓದಿ: ಟಿ20 ಸರಣಿ; ಗಾಯಾಳು ಜಡೇಜಗೆ ವಿಶ್ರಾಂತಿ; ಶಾರ್ದೂಲ್ಗೆ ಸ್ಥಾನ
Jadeja is on song here!#AUSvIND #TeamIndia pic.twitter.com/I9DVsLiOJk
— BCCI (@BCCI) December 4, 2020
2012ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಧೋನಿ 18 ಎಸೆತಗಳಲ್ಲಿ 38 ರನ್ ಗಳಿಸಿದ್ದರು. ಈಗ ಅತ್ಯುತ್ತಮ ಆಲ್‌ರೌಂಡರ್ ಎಂಬುದನ್ನು ನಿರೂಪಿಸಿರುವ ಜಡೇಜ, ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಧೋನಿ ಸಾಧನೆಯನ್ನು ಮೀರಿ ನಿಂತರು.
ಈ ಮಧ್ಯೆ ಅಂತಿಮ ಎರಡು ಪಂದ್ಯಗಳಲ್ಲಿ ಗಾಯದ ಸಮಸ್ಯೆಗೆ ಸಿಲುಕಿರುವ ರವೀಂದ್ರ ಜಡೇಜ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ. ಭಾರತೀಯ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌನ್ಸರ್ ದಾಳಿಯು ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬಂದಪ್ಪಳಿಸಿತು. ಬಳಿಕ ಕಂಕಷನ್ ನಿಯಮದಲ್ಲಿ ಬದಲಿ ಆಟಗಾರನಾಗಿ ಯಜುವೇಂದ್ರ ಚಹಲ್ ಕಣಕ್ಕಿಳಿದರು.
ಇದನ್ನೂ ಓದಿ: ಚಾಹಲ್-ರಾಹುಲ್, ಜಡೇಜ-ನಟರಾಜ ಗೆಲುವಿನ ಸ್ಟಾರ್ಸ್; ಪ್ರಮುಖ ಹೈಲೈಟ್ಸ್ ಇಲ್ಲಿದೆ
ರವೀಂದ್ರ ಜಡೇಜ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ರವೀಂದ್ರ ಜಡೇಜ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಜಡೇಜ ಟಿ20 ವೃತ್ತಿ ಜೀವನ:
ಪಂದ್ಯ: 50
ರನ್: 217
ಗರಿಷ್ಠ: 44*
ಸ್ಟ್ರೈಕ್‌ರೇಟ್: 112.44
ಸಿಕ್ಸ್: 6
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.