ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಡಿ ಶೈಲಿಯ ಸಿಕ್ಸರ್ ಬಾರಿಸಿ ಅಭಿಮಾನಿಗಳನ್ನು ಮೋಡಿಗೊಳಿಸಿದ ವಿರಾಟ್!

Last Updated 6 ಡಿಸೆಂಬರ್ 2020, 14:17 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಾಗಿದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ ಭಾರತ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿದೆ.

ಈ ನಡುವೆ 'ಮಿಸ್ಟರ್ 360 ಡಿಗ್ರಿ' ಬ್ಯಾಟ್ಸ್‌ಮನ್ ಖ್ಯಾತಿಯ ತಮ್ಮ ಆಪ್ತ ಗೆಳೆಯ ದಕ್ಷಿಣ ಆಫ್ರಿಕಾದ ಹೊಡೆಬಡಿಯ ದಾಂಡಿಗ ಎಬಿ ಡಿ ವಿಲಿಯರ್ಸ್ ಶೈಲಿಯಲ್ಲಿ ಸಿಕ್ಸರ್ ಬಾರಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಭಾನುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಇದರಂತೆ ಆಸ್ಟ್ರೇಲಿಯಾ ಉಸ್ತುವಾರಿ ನಾಯಕ ಮ್ಯಾಥ್ಯೂ ವೇಡ್ (58) ಹಾಗೂ ಸ್ಟೀವನ್ ಸ್ಮಿತ್ (46) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಶಿಖರ್ ಧವನ್ (52) ಹಾಗೂ ಕೆಎಲ್ ರಾಹುಲ್ (30) ಉತ್ತಮ ಆರಂಭವೊದಗಿಸಿದರು. ಆದರೆ ಇವರಿಬ್ಬರ ಪತನದ ಬೆನ್ನಲ್ಲೇ ಟೀಮ್ ಇಂಡಿಯಾ ಹಿನ್ನೆಡೆ ಅನುಭವಿಸಿತ್ತು. ಈ ಸಂದರ್ಭದಲ್ಲಿ ಕ್ರೀಸಿನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ಕ್ರಿಕೆಟ್ ಸ್ಕೂಲ್ ಆಫ್ ಬುಕ್ಸ್‌ನಲ್ಲಿ ಎಲ್ಲ ಭಂಗಿಯ ಹೊಡೆತಗಳನ್ನು ಕರಗತ ಮಾಡಿಕೊಂಡಿರುವ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ದಾಡಿಂಗ ಎಬಿಡಿ ವಿಲಿಯರ್ಸ್ ಅವರನ್ನು ಹೋಲುವಂತೆ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ, ಅದ್ಭುತ ಸಿಕ್ಸರ್ ಮೂಲಕ ತಾವೇಕೆ ಶ್ರೇಷ್ಠ ಎಂಬುದನ್ನು ನಿರೂಪಿಸಿದರು.

ಭಾರತೀಯ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಆಂಡ್ರ್ಯೂ ಟೈ ಎಸೆದ ಚೆಂಡನ್ನು ಮಂಡಿಯೂರಿ ಸ್ಕೂಪ್ ಮಾಡುವ ಮೂಲಕ ಸಿಕ್ಸರ್ ಎತ್ತಿದ ವಿರಾಟ್ ಅಭಿಮಾನಿಗಳನ್ನು ಹೆಚ್ಚೆದ್ದು ಕುಣಿಸಿದರು. ಮೊದಲು ಕ್ರೀಸಿನಿಂದ ಬಲಬದಿಯತ್ತ ಚಲಿಸಿದ ವಿರಾಟ್ ಅತ್ಯಂತ ಸಲೀಸಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.

ಪಂದ್ಯದ ಬಳಿಕ ಈ ಬಗ್ಗೆ ವಿಚಾರಿಸಿದಾಗ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, 'ಇಂದು ರಾತ್ರಿ ಎಬಿಡಿಗೆ ಮೆಸೇಜ್ ಮಾಡಿ ಈ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸುವುದಾಗಿ' ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಎಬಿಡಿ, 'ಸೂಪರ್' ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಸ್ತುತ ಟ್ವೀಟ್ ಅನ್ನು ಬಿಸಿಸಿಐ ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್, ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೊತೆಯಾಗಿ ಆಡುತ್ತಾರೆ. ಅಲ್ಲದೆ ಕ್ರಿಕೆಟ್ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT