ಸೋಮವಾರ, ಏಪ್ರಿಲ್ 19, 2021
32 °C

IND vs BAN Pink Test | ಎರಡನೇ ದಿನವೇ ಮುಕ್ತಾಯದ ಹಂತ ತಲುಪಿದ ಪಿಂಕ್‌ ಟೆಸ್ಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಐತಿಹಾಸಿಕ ಪಿಂಕ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 106 ರನ್‌ಗಳಿಗೆ ಆಲೌಟ್‌ ಆಗಿದ್ದ ಬಾಂಗ್ಲಾದೇಶ, ಎರಡನೇ ಇನಿಂಗ್ಸ್‌ನಲ್ಲೂ ಅದೇ ಚಾಳಿ ಮುಂದುವರಿಸಿದೆ. ಹೀಗಾಗಿ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಎರಡನೇ ದಿನವೇ ಮುಕ್ತಾಯದ ಹಂತಕ್ಕೆ ತಲುಪಿದೆ. 

ನಾಯಕ ವಿರಾಟ್‌ ಕೊಹ್ಲಿ(136) ಶತಕದ ನೆರವಿನಿಂದ 9 ವಿಕೆಟ್‌ ನಷ್ಟಕ್ಕೆ 347 ರನ್‌ ಗಳಿಸಿದ್ದ ಭಾರತ, 241 ರನ್‌ ಮುನ್ನಡೆ ಸಾಧಿಸಿ ಎರಡನೇ ದಿನ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಕೊಹ್ಲಿ ಪಡೆಯ ಮುನ್ನಡೆ ಲೆಕ್ಕ ಚುಕ್ತಾ ಮಾಡಲು ಎರಡನೇ ಇನಿಂಗ್ಸ್‌ ಆರಂಭಿಸಿದ ಮೊಮಿನಲ್ ಹಕ್‌ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ವೇಗಿಗಳು ಮತ್ತೆ ಕಾಡಲಾರಂಭಿಸಿದ್ದಾರೆ. ಬ್ಯಾಟಿಂಗ್‌ ಮರೆತವರಂತೆ ಆಡುತ್ತಿರುವ ಪ್ರವಾಸಿ ತಂಡದ ಆರಂಭಿಕ ಶಾದಮನ್‌ ಇಸ್ಲಾಂ ಹಾಗೂ ನಾಯಕ ಹಕ್‌ ಖಾತೆ ತೆರೆಯುವ ಮೊದಲೇ ಇಶಾಂತ್‌ಗೆ ವಿಕೆಟ್‌ ಒಪ್ಪಿಸಿದರು.

ಆರಂಭಿಕ ಇಮ್ರುಲ್‌ ಕಯೇಸ್‌(5) ಹಾಗೂ ಮಧ್ಯಮ ಕ್ರಮಾಂಕದ ಮೊಹಮದ್‌ ಮಿಥುನ್‌(6) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಪಡೆ ಎದುರಿಸಿದ್ದು ಕೇವಲ 30.3 ಓವರ್‌. ಬಳಿಕ ಬ್ಯಾಟಿಂಗ್‌ ಮಾಡಿದ್ದ ಭಾರತ 46 ಓವರ್‌ ಆಡಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ದಿನ 90 ಓವರ್‌ಗಳ ಆಟ ನಡೆಯುತ್ತದೆ. ಆದರೆ ಪಿಂಕ್‌ ಟೆಸ್ಟ್‌ನ ಮೊದಲ ದಿನದಾಟ ಕೇವಲ 76.3 ಓವರ್‌ಗಳಿಗೆ ಸೀಮಿತವಾಗಿತ್ತು.

ಭಾರತ ಎರಡನೇ ದಿನ ಒಟ್ಟು 43.4 ಓವರ್‌ ಬ್ಯಾಟ್‌ ಬೀಸಿ, ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಒಂದು ವೇಳೆ ಎರಡನೇ ದಿನ 90 ಓವರ್‌ಗಳ ಆಟ ನಡೆದರೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು 40ಕ್ಕಿಂತ ಹೆಚ್ಚು ಓವರ್‌ಗಳನ್ನು ಎದುರಿಸಬೇಕಾಗುತ್ತದೆ.

ಸದ್ಯ 17 ಓವರ್‌ಗಳ ಆಟ ಮುಗಿದಿದೆ. ತಂಡದ ಮೊತ್ತ 73 ಆಗಿದ್ದು, ಈಗಾಗಲೇ ಬಾಂಗ್ಲಾ ತಂಡದ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದಾರೆ. ಉಳಿದಿರುವ 25ಕ್ಕೂ ಹೆಚ್ಚು ಓವರ್‌ಗಳ ಆಟದಲ್ಲಿ 6 ವಿಕೆಟ್‌ ‍ಉರುಳಿದರೆ ಐತಿಹಾಸಿಕ ಟೆಸ್ಟ್‌ ಪಂದ್ಯ ಎರಡೇ ದಿನದಲ್ಲಿ ಮುಕ್ತಾಯವಾದಂತಾಗುತ್ತದೆ.

ಒಂದು ಹಂತದಲ್ಲಿ ಕೇವಲ 13ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ್ದ ಬಾಂಗ್ಲಾ ತಂಡಕ್ಕೆ, ಅನುಭವಿ ಮುಪಿಕರ್ ರಹೀಂ(18) ಹಾಗೂ ಮೊಹಮದುಲ್ಲಾ(32) ಆಸರೆಯಾಗಿದ್ದಾರೆ. ಈ ಜೋಡಿ ಐದನೇ ವಿಕೆಟ್‌ಗೆ 60 ರನ್‌ ಸೇರಿಸಿ ಕುಸಿತಕ್ಕೆ ತಡೆಯೊಡ್ಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಉರುಳಿಸಿದ್ದ ಇಶಾಂತ್‌ ಶರ್ಮಾ, ಎರಡನೇ ಇನಿಂಗ್ಸ್‌ನಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಆರು ಓವರ್‌ಗಳಲ್ಲಿ 21 ರನ್‌ ನೀಡಿ 3 ವಿಕೆಟ್‌ ಉರುಳಿಸಿರುವ ಅವರಿಗೆ, ಉಮೇಶ್‌ ಯಾದವ್‌(1) ಸಾಥ್‌ ನೀಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು