ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN Pink Test | ಸಚಿನ್ ಸೇರಿ ಹಲವರ ದಾಖಲೆ ಮೀರಿದ ಕೊಹ್ಲಿ

ಒಂದು ಪಂದ್ಯ–ಹಲವು ಸಾಧನೆ
Last Updated 23 ನವೆಂಬರ್ 2019, 11:36 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐತಿಹಾಸಿಕ ಪಿಂಕ್‌ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿವೇಗವಾಗಿ 70ನೇ ಶತಕ ಹಾಗೂನಾಯಕನಾಗಿ 41ನೇ ಶತಕ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ 20 ಮತ್ತು ವೇಗವಾಗಿ 27ನೇ ಶತಕ. ಟೆಸ್ಟ್‌ನಲ್ಲಿ ನಾಯಕವಾಗಿವೇಗದ 5000 ರನ್‌..
ಹೀಗೆ ಹಲವು ದಾಖಲೆಗಳು ಕೊಹ್ಲಿ ಹೆಸರಿಗೆ ಸೇರಿಕೊಂಡವು.

ನಾಯಕನಾಗಿ 41ನೇ ನೂರು
159ನೇ ಎಸೆತದಲ್ಲಿ ಮೂರಂಕಿ ಮುಟ್ಟಿದ ಕೊಹ್ಲಿ, ಈ ಶತಕದೊಂದಿಗೆ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಎನಿಸಿದರು. ನಾಯಕನಾಗಿಟೆಸ್ಟ್‌ ಕ್ರಿಕೆಟ್‌ನಲ್ಲಿ 20ನೇ ಶತಕ ಬಾರಿಸಿದ ಅವರು, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಜೊತೆಗೆ ಎರಡನೇ ಸ್ಥಾನ ಹಂಚಿಕೊಂಡರು.

ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡ ಮುನ್ನಡೆಸುತ್ತಲೇ 41 ಶತಕ ಬಾರಿಸಿರುವ ಕೊಹ್ಲಿ, ಈ ಸಾಧನೆ ಮಾಡಲು 188 ಇನಿಂಗ್ಸ್‌‍ತೆಗೆದುಕೊಂಡಿದ್ದಾರೆ. 376 ಇನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿರುವ ಪಾಂಟಿಂಗ್‌ ಅವರೂ ಇಷ್ಟೇ ಶತಕ ದಾಖಲಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ನಾಯಕರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಮೊದಲ ಸ್ಥಾನದಲ್ಲಿದ್ದಾರೆ. 25 ಶತಕಗಳು ಅವರ ಹೆಸರಲ್ಲಿವೆ.

ಕೊಹ್ಲಿ ಖಾತೆಗೆ 70ನೇ ಶತಕ
ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 230 ಇನಿಂಗ್ಸ್‌ ಹಾಗೂಟೆಸ್ಟ್‌ ಕ್ರಿಕೆಟ್‌ನಲ್ಲಿ 141 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, ಕ್ರಮವಾಗಿ 43 ಮತ್ತು 27 ಶತಕ ಬಾರಿಸಿದ್ದಾರೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಸಿದ ಶತಕಗಳ ಸಂಖ್ಯೆ 70ಕ್ಕೆ ಏರಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ100 ಶತಕಗಳನ್ನು ಸಿಡಿಸಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿರುವ ಸಚಿನ್‌ ತೆಂಡೂಲ್ಕರ್‌,70ನೇ ಶತಕ ಸಿಡಿಸಲು ಬರೋಬ್ಬರಿ 505 ಇನಿಂಗ್ಸ್ ತೆಗೆದುಕೊಂಡಿದ್ದರು. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 438ನೇ ಇನಿಂಗ್ಸ್‌ಗಳಲ್ಲಿ ಮುಟ್ಟಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 27 ಶತಕ ಗಳಿಸಲು ಸಚಿನ್‌ ಕೂಡ ಕೊಹ್ಲಿಯಷ್ಟೇ(141) ಇನಿಂಗ್ಸ್‌ ತೆಗೆದುಕೊಂಡಿದ್ದರು.

ನಾಯಕನಾಗಿ ವೇಗದ 5 ಸಾವಿರ ರನ್
ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕರಾಗಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಶ್ರೇಯವೂಭಾರತ ತಂಡದ ನಾಯಕನದ್ದಾಯಿತು.

ನಾಯಕರಾಗಿ ಇದುವರೆಗೆ 53 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು, 86ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಈವರೆಗೆ ಈ ದಾಖಲೆ ಆಸ್ಟ್ರೇಲಿಯಾದ ಪಾಂಟಿಂಗ್‌ ಹೆಸರಲ್ಲಿತ್ತು. ಪಾಂಟಿಂಗ್‌ 97ನೇ ಇನಿಂಗ್ಸ್‌ನಲ್ಲಿ 5000 ರನ್‌ ಕೂಡಿಹಾಕಿದ್ದರು.

ಹೆಚ್ಚು ರನ್‌ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 109 ಪಂದ್ಯಗಳ 193 ಇನಿಂಗ್ಸ್‌ಗಳಿಂದ ಒಟ್ಟು 8,659 ರನ್‌ ಕಲೆಹಾಕಿದ್ದಾರೆ.

ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಅಲನ್‌ ಬಾರ್ಡರ್‌ ಇದ್ದು, ಅವರು 93 ಪಂದ್ಯಗಳ 154 ಇನಿಂಗ್ಸ್‌ನಿಂದ 6,623 ರನ್‌ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT