ಗುರುವಾರ , ಸೆಪ್ಟೆಂಬರ್ 23, 2021
22 °C

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್ ಆತಂಕದಿಂದಾಗಿ ರದ್ದುಗೊಳಿಸಲಾಗಿದೆ.

ಈಗ ಓಲ್ಡ್ ಟ್ರಾಫರ್ಡ್‌ನಲ್ಲಿ ರದ್ದಾಗಿರುವ ಐದನೇ ಟೆಸ್ಟ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧಿಕೃತ ಪತ್ರ ಬರೆದಿದೆ.

ಇದನ್ನೂ ಓದಿ: 

ಇದರೊಂದಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಇಸಿಬಿ ನಡುವೆ ಒಮ್ಮತದ ನಿರ್ಧಾರ ಮೂಡಿಬಂದಿಲ್ಲ ಎಂಬುದು ಬಯಲಾಗಿದೆ.

ಭಾರತದ ಪಾಳಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಪರಿಣಾಮ ಅಂತಿಮ ಟೆಸ್ಟ್ ಆರಂಭಕ್ಕೂ ಕೇವಲ ಎರಡು ತಾಸಿಗೂ ಮುನ್ನ ಪಂದ್ಯ ರದ್ದುಗೊಳಿಸಲು ತೀರ್ಮಾನಿಸಲಾಗಿತ್ತು. ಭಾರತೀಯ ಆಟಗಾರರ ಆರ್‌ಟಿ–ಪಿಸಿಆರ್ ವರದಿ ನೆಗೆಟಿವ್ ಬಂದರೂ ಕೋವಿಡ್ ಆತಂಕದಿಂದಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಆರಂಭದಲ್ಲಿ ಇಸಿಬಿ ಪಂದ್ಯವನ್ನು ಭಾರತ 'ತ್ಯಜಿಸಿದೆ' ಎಂದು ಘೋಷಿಸಿದರೂ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯನ್ನು ತಿದ್ದಿತ್ತು.

ಇನ್ನೊಂದೆಡೆ ಬಿಸಿಸಿಐ ನಿಕಟ ಭವಿಷ್ಯದಲ್ಲಿ ಪಂದ್ಯ ಮರುನಿಗದಿಗೊಳಿಸುವ ಪ್ರಸ್ತಾಪವನ್ನು ಮುಂದಿರಿಸಿದೆ. ಆದರೆ ಉಳಿದಿರುವ ಏಕಮಾತ್ರ ಟೆಸ್ಟ್ ಈ ಸರಣಿಯ ಭಾಗವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ಐಸಿಸಿ ತೀರ್ಪು ಕಲ್ಪಿಸಿದ್ದಲ್ಲಿ ಸರಣಿ 2-2ರಲ್ಲಿ ಸಮಬಲವಾಗಲಿದೆ.

ಅಲ್ಲದೆ ಅಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್‌ಗೆ ಪಂದ್ಯದ ನಷ್ಟವನ್ನು 'ಕ್ಲೈಮ್' ಮಾಡುವ ಅವಕಾಶವಿರುತ್ತದೆ. ಅಂದರೆ ಬಿಸಿಸಿಐ ನಷ್ಟ ಭರಿಸಬೇಕಾಗುತ್ತದೆ. ವರದಿಯ ಪ್ರಕಾರ ಇಸಿಬಿಗೆ ಸರಿ ಸುಮಾರು 40 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟಾಗಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಬಿಕ್ಕಟನ್ನು ಪರಿಹರಿಸಲು ಐಸಿಸಿಯ ವಿವಾದ ಇತ್ಯರ್ಥ ಸಮಿತಿಗೆ ಇಸಿಬಿಯು ಪತ್ರ ಬರೆದಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ ಪಂದ್ಯದ ಫಲಿತಾಂಶವು ಅಷ್ಟೇ ಮುಖ್ಯವೆನಿಸುತ್ತದೆ. ಇವೆಲ್ಲದಕ್ಕೂ ಐಸಿಸಿ ತೀರ್ಪು ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು