ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG| ಪಂತ್‌-ಪಾಂಡ್ಯಾ ಅಬ್ಬರ: ಭಾರತಕ್ಕೆ ಸರಣಿ ಜಯ

ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಮತ್ತೊಮ್ಮೆ ‘ಆಪದ್ಭಾಂದವ’ನಾದ ರಿಷಭ್ ಪಂತ್ ದಿಟ್ಟ ಶತಕ ಮತ್ತು ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದ ಮುಂದೆ ಆತಿಥೇಯ ಇಂಗ್ಲೆಂಡ್ ಶರಣಾಯಿತು.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2–1ರಿಂದ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದಿತು.

ಭಾನುವಾರ ಎಮಿರೇಟ್ಸ್‌ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್‌ಗಳಿಂದ ಜಯಿಸಿತು. 47 ಎಸೆತಗಳು ಬಾಕಿಯಿರುವಾಗಲೇ ತಂಡವು ವಿಜಯದ ಕೇಕೆ ಹಾಕಲು ರಿಷಭ್ (ಅಜೇಯ 125; 113ಎ, 4X16, 6X2)ಕಾರಣರಾದರು. 106 ಎಸೆತಗಳಲ್ಲಿ ಶತಕ ಬಾರಿಸಿದ ಅವರು, ನಂತರದ ಏಳು ಎಸೆತಗಳಲ್ಲಿ 25 ರನ್‌ಗಳನ್ನು ಸೂರೆ ಮಾಡಿದರು. ಡೇವಿಡ್ ವಿಲಿ ಹಾಕಿದ 42ನೇ ಓವರ್‌ನಲ್ಲಿ ಸತತ ಐದು ಬೌಂಡರಿ ಬಾರಿಸಿದ ಅವರು, ಕೊನೆಯ ಎಸೆತದಲ್ಲಿ ಒಂದು ರನ್ ಹೊಡೆದರು. ನಂತರ ತಂಡದ ಗೆಲುವಿಗೆ ಬೇಕಾಗಿದ್ದ ಮೂರು ರನ್‌ಗಳಿಗೂ ರಿಷಭ್, 43ನೇ ಓವರ್‌ ಬೌಲ್ ಮಾಡಿದ ರೂಟ್ ಎಸೆತವನ್ನು ರಿವರ್ಸ್ ಸ್ವೀಪ್ ಮೂಲಕ ಬೌಂಡರಿಗೆರೆ ದಾಟಿಸಿದರು.

ಇದರಿಂದಾಗಿ ಇಂಗ್ಲೆಂಡ್ ತಂಡವು ನೀಡಿದ್ದ 259 ರನ್‌ಗಳ ಗುರಿಯನ್ನು ಭಾರತ ತಂಡವು ಸರಾಗವಾಗಿ ತಲುಪಿತು. 42.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 261 ರನ್ ಗಳಿಸಿತು.

ಹಾರ್ದಿಕ್–ಪಂತ್ ಜೊತೆಯಾಟ: ಗುರಿ ಬೆನ್ನಟ್ಟಿದ ಭಾರತ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಮತ್ತೊಮ್ಮೆ ಮುಗ್ಗರಿಸಿದರು. ರೋಹಿತ್, ಕೊಹ್ಲಿ ಮತ್ತು ಶಿಖರ್ ಪೆವಿಲಿಯನ್ ಸೇರಿದಾಗ ತಂಡವು 50 ರನ್‌ಗಳ ಮೊತ್ತವನ್ನೂ ಮುಟ್ಟಿರಲಿಲ್ಲ. ಸೂರ್ಯ ಕುಮಾರ್ ಕೂಡ ಸ್ವಲ್ಪ ಹೊತ್ತಿನಲ್ಲಿಯೇ ನಿರ್ಗಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಮತ್ತು ಹಾರ್ದಿಕ್ ತಂಡದಿಂದ ದೂರ ಹೋಗುತ್ತಿದ್ದ ಗೆಲುವನ್ನು ಎಳೆದುತಂದರು. ಇಬ್ಬರ ಅಬ್ಬರಕ್ಕೆ ಇಂಗ್ಲೆಂಡ್ ಬೌಲರ್‌ಗಳು ಬಸವಳಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 115 ಎಸೆತಗಳಲ್ಲಿ 133 ರನ್‌ಗಳನ್ನು ಸೇರಿಸಿದರು. ಪಾಂಡ್ಯ 43 ಎಸೆತಗಳಲ್ಲಿ ಅರ್ಧಶತಕ ಹೊಡೆದರು.ಪಂತ್, 71 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. 36ನೇ ಓವರ್‌ನಲ್ಲಿ ಕಾರ್ಸ್‌ ಎಸೆತದಲ್ಲಿ ಪಾಂಡ್ಯ (71 ರನ್) ಔಟಾದಾಗ ತಂಡಕ್ಕೆ 87 ಎಸೆತಗಳಲ್ಲಿ 55 ರನ್‌ಗಳು ಬೇಕಾಗಿದ್ದವು.

ಪಂತ್ ಇಲ್ಲಿ ತಮ್ಮ ಆಟದ ವೇಗ ಹೆಚ್ಚಿಸಿದರು. ಸ್ಟ್ರೇಟ್‌ ಡ್ರೈವ್, ಪುಲ್, ಫ್ಲಿಕ್‌ಗಳ ಸುಂದರ ಆಟವಾಡಿದ ಎಡಗೈ ಬ್ಯಾಟರ್‌ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕದತ್ತ ದಾಪುಗಾಲಿಟ್ಟರು. ಇನ್ನೊಂದೆಡೆ ಜಡೇಜ ಅವರಿಗೆ ಉತ್ತಮ ಜೊತೆ ನೀಡಿದರು.

ಪಾಂಡ್ಯ ನಾಲ್ಕು ವಿಕೆಟ್: ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಮೊಹಮ್ಮದ್ ಸಿರಾಜ್. ಬೂಮ್ರಾ ಗಾಯಗೊಂಡಿದ್ದರಿಂದ ಸ್ಥಾನ ಪಡೆದ ಸಿರಾಜ್ ತಮ್ಮ ಮೊದಲ ಓವರ್‌ನಲ್ಲಿಯೇ ರೂಟ್ ಮತ್ತು ಜಾನಿ ಬೆಸ್ಟೊ ಅವರ ವಿಕೆಟ್ ಕಬಳಿಸಿದರು.

ಇನ್ನೊಂದೆಡೆ ಪಾಂಡ್ಯ (24ಕ್ಕೆ4) ಕಾಡಿದರು. ಜೇಸನ್ ರಾಯ್, ಅರ್ಧಶತಕ ಗಳಿಸಿದ ಜೊಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT