ಶನಿವಾರ, ಜನವರಿ 29, 2022
17 °C
India vs New Zealand

10 ವಿಕೆಟ್‌ ಸಾಧನೆ: ಕಿವೀಸ್ ಡಗೌಟ್‌ಗೆ ತೆರಳಿ ಎಜಾಜ್ ಬೆನ್ನು ತಟ್ಟಿದ ವಿರಾಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡದ ಎಲ್ಲ ಹತ್ತೂ ವಿಕೆಟ್‌ಗಳನ್ನು ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಒಬ್ಬರೇ ಉರುಳಿಸಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದಕ್ಕೂ ಮೊದಲು ಇಬ್ಬರು ಮಾತ್ರವೇ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ ತಂಡದ ಜಿಮ್‌ ಲೇಕರ್‌ ಅವರು ಆಸ್ಟ್ರೇಲಿಯಾ ವಿರುದ್ಧ 1956ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಈ ದಾಖಲೆ ಬರೆದಿದ್ದರು. ಅದಾದ ಬಳಿಕ, ಕರ್ನಾಟಕದವರೇ ಆದ ಅನಿಲ್ ಕುಂಬ್ಳೆ ಭಾರತ ಪರ 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ್ದರು.

ಈ ಮೂವರೂ ಸ್ಪಿನ್ನರ್‌ಗಳೇ ಎಂಬುದು ವಿಶೇಷ.

ಎಜಾಜ್ ಬೆನ್ನು ತಟ್ಟಿದ ಕೊಹ್ಲಿ
ಎರಡನೇ ದಿನದಾಟ ಮುಕ್ತಾಯವಾದ ಬಳಿಕ ತಂಡದೊಂದಿಗೆ ಡ್ರೆಸಿಂಗ್ ರೂಂನತ್ತ ತೆರಳುತ್ತಿದ್ದ ಪಟೇಲ್ ಅವರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವೇಗಿ ಮೊಹಮ್ಮದ್ ಸಿರಾಜ್ ಅವರು ನ್ಯೂಜಿಲೆಂಡ್ ಡಗೌಟ್‌ನತ್ತ ತೆರಳಿ ಅಭಿನಂದಿಸಿದರು. ಈ ಮೂವರೂ ಎಜಾಜ್ ಕೈ ಕುಲುಕಿ, ಬೆನ್ನುತಟ್ಟಿ ವಾಪಸ್ ಆದ ವಿಡಿಯೊ ಇದೀಗ ವೈರಲ್‌ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 

ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧ ಇಂತಹ ಸಾಧನೆ ಮಾಡಿದ್ದಾಗ, ಭಾರತ ತಂಡದಲ್ಲಿದ್ದ ದ್ರಾವಿಡ್ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಸ್ಪಿನ್ನರ್‌ ಆರ್‌.ಅಶ್ವಿನ್, ಮಾಜಿ ಕೋಚ್ ರವಿಶಾಸ್ತ್ರಿ, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ನಾಥನ್ ಲಿಯಾನ್, ವೀಕ್ಷಕ ವಿವರಣೆಗಾರ ಸೈಮನ್ ಡಲ್ ಸೇರಿದಂತೆ ಹಲವರು ಎಜಾಜ್ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ವೇಳೆ, ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ ಜಯ ಸಾಧಿಸಿತ್ತು. ಆ ಪಂದ್ಯದ ಬಳಿಕ ಕೊಹ್ಲಿ ಸೇರಿದಂತೆ ಭಾರತದ ಹಲವು ಆಟಗಾರರು ಸ್ಕಾಟ್ಲೆಂಡ್ ಆಟಗಾರರ ಡ್ರೆಸಿಂಗ್ ರೂಂಗೆ ತೆರಳಿ ಆಟದ ಬಗ್ಗೆ ಮಾತುಕತೆ ನಡೆಸಿದ್ದರು. ಭಾರತ ತಂಡದ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆಯ ಮಹಾಪೂರವೇ ಹರಿದುಬಂದಿತ್ತು.

ಚರ್ಚೆಗೆ ಗ್ರಾಸವಾದ ವಿರಾಟ್ ವಿಕೆಟ್
ಮೊದಲ ಇನಿಂಗ್ಸ್‌ನಲ್ಲಿ ಎಜಾಜ್ ಪಟೇಲ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ವಿರಾಟ್ ಪ್ಯಾಡ್‌ಗೆ ಚೆಂಡು ಬಡಿದಿತ್ತು. ಬೌಲರ್ ಮನವಿಗೆ ಫೀಲ್ಡ್ ಅಂಪೈರ್ ನಿಲ್ ಚೌಧರಿ ಔಟ್ ತೀರ್ಪು ನೀಡಿದ್ದರು. ಆದರೆ ಚೆಂಡು ಪ್ಯಾಡ್‌ಗೆ ತಗಲುವ ಮುನ್ನ ಬ್ಯಾಟ್‌ ಅಂಚು ಸವರಿದೆ ಎಂದುಕೊಂಡಿದ್ದ ವಿರಾಟ್, ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್‌) ಮನವಿಗೆ ಮೊರೆ ಹೋಗಿದ್ದರು.

ಇದನ್ನೂ ಓದಿ: 

ಟಿವಿ ಅಂಪೈರ್ ವೀರೇಂದ್ರ ಶರ್ಮಾ ಹಲವು ಆಯಾಮಗಳಲ್ಲಿ ಚೆಂಡಿನ ಚಲನೆಯನ್ನು ಪರಿಶೀಲಿಸಿದ್ದರು. ಆದರೆ ಚೆಂಡು ಬ್ಯಾಟ್‌ಗೆ ತಾಗಿದ್ದು ಸ್ಪಷ್ಟವಾಗದ ಕಾರಣ ವಿರಾಟ್ ಅವರನ್ನು ಔಟ್ ಎಂದು ತೀರ್ಪು ನೀಡಿದ್ದರು. ಈ ಸಂದರ್ಭದಲ್ಲಿ ಅಸಮಾಧಾನಗೊಂಡ ವಿರಾಟ್, ಫೀಲ್ಡ್ ಅಂಪೈರ್‌ ನಿತಿನ್ ಮೆನನ್ ಚೌಧರಿಯವರೊಂದಿಗೆ ವಾದ ನಡೆಸಿದ್ದರು.

ಭಾರತದ ಹಿಡಿತದಲ್ಲಿ ಪಂದ್ಯ
ಎರಡು ಪಂದ್ಯಗಳ ಸರಣಿಯ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರ ಆರಂಭವಾಗಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ ಮಯಂಕ್ ಅಗರವಾಲ್ 150 ರನ್ ಗಳಿಸಿದರಾದರೂ, ಎಜಾಜ್ ದಾಳಿಗೆ ಪ್ರತಿಯಾಗಿ ಭಾರತ 325 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

47.5 ಓವರ್ ಬೌಲಿಂಗ್ ಮಾಡಿದ ಎಜಾಜ್ ಎಲ್ಲ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮುನ್ನ 119 ರನ್ ನೀಡಿದರು.

ಬಳಿಕ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆ, ಭಾರತದ ಬೌಲಿಂಗ್ ದಾಳಿ ಎದುರು ಕಂಗೆಟ್ಟಿತು. ಮಧ್ಯಮವೇಗಿ ಮೊಹಮ್ಮದ್ ಸಿರಾಜ್ (19ಕ್ಕೆ3) ತಮ್ಮ ಮೊದಲ ನಾಲ್ಕು ಓವರ್ ಸ್ಪೆಲ್‌ನಲ್ಲಿಯೇ ಕಿವೀಸ್ ಬಳಗದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆಫ್‌ಸ್ಪಿನ್ನರ್ ಆರ್. ಅಶ್ವಿನ್ (8ಕ್ಕೆ 4) ಅಕ್ಷರ್ ಪಟೇಲ್ (14ಕ್ಕೆ3) ಹಾಗೂ ಜಯಂತ್ ಯಾದವ್ (13ಕ್ಕೆ1) ಉಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಹೀಗಾಗಿ ಪ್ರವಾಸಿ ತಂಡ ಕೇವಲ 62 ರನ್‌ಗಳಿಗೆ ಆಲೌಟಾಯಿತು.

ಇದನ್ನೂ ಓದಿ: 

ನ್ಯೂಜಿಲೆಂಡ್ ಮೇಲೆ ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ, 7 ವಿಕೆಟ್‌ಗಳೆದುಕೊಂಡು 276 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

540 ರನ್‌ಗಳ ಬೃಹತ್ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಟಾಮ್ ಲಥಾಮ್ ಬಳಗ ಮೂರನೇ ದಿನದಾಟದ ಮುಕ್ತಾಯಕ್ಕೆ 5 ವಿಕೆಟ್‌ ಕಳೆದುಕೊಂಡು 140 ರನ್ ಗಳಿಸಿದೆ. ಗೆಲ್ಲಲು ಉಳಿದಿರುವ 5 ವಿಕೆಟ್‌ಗಳಿಂದ 400 ರನ್ ಗಳಿಸಬೇಕಿದೆ. ಇನ್ನೂ ಎರಡು ದಿನದಾಟ ಬಾಕಿ ಇರುವುದರಿಂದ ಭಾರತ ಜಯದ ವಿಶ್ವಾಸದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು