ಗುರುವಾರ , ಫೆಬ್ರವರಿ 9, 2023
30 °C

IND vs NZ T20 ಸರಣಿ ಜಯದ ವಿಶ್ವಾಸದಲ್ಲಿ ಭಾರತ; ಸ್ಯಾಮ್ಸನ್‌ಗೆ ಸಿಗುವುದೇ ಅವಕಾಶ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೇಪಿಯರ್‌: ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಕ್ರಿಕೆಟ್‌ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಭಾರತ ತಂಡ ಕೆಲವು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಯಿದೆ.

ನೇಪಿಯರ್‌ನಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವುದು ಹಾರ್ದಿಕ್ ಪಾಂಡ್ಯ ಬಳಗದ ಗುರಿ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಭಾನುವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ ಗೆದ್ದು 1–0 ರಲ್ಲಿ ಮುನ್ನಡೆ ಸಾಧಿಸಿದೆ. ಸೂರ್ಯಕುಮಾರ್‌ ಯಾದವ್‌ ಅವರು ಭರ್ಜರಿ ಶತಕ ಗಳಿಸಿದ್ದರು.

‘ಪವರ್‌ ಪ್ಲೇ’ ಅವಧಿಯಲ್ಲಿ ಬಿರುಸಿನ ಆಟವಾಡಲು ಆಗದಿರುವುದು ಭಾರತಕ್ಕೆ ಹಿನ್ನಡೆ ಉಂಟುಮಾಡಿದೆ. ಕಳೆದ ಪಂದ್ಯದಲ್ಲಿ ರಿಷಭ್‌ ಪಂತ್‌ ಮತ್ತು ಇಶಾನ್‌ ಕಿಶನ್‌ ಅವರು ಇನಿಂಗ್ಸ್‌ ಆರಂಭಿಸಿದ್ದರೂ ಭರ್ಜರಿ ಆರಂಭ ನೀಡಿರಲಿಲ್ಲ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ಸಿಗುವುದೇ ಎಂಬುದನ್ನು ನೋಡಬೇಕು.

ಇಲ್ಲಿನ ಪಿಚ್‌ ವೇಗದ ಬೌಲಿಂಗ್‌ಗೆ ನೆರವು ನೀಡಲಿರುವುದರಿಂದ ಉಮ್ರನ್‌ ಮಲಿಕ್‌ ಅವರನ್ನು ಕಣಕ್ಕಿಳಿಸುವ ಚಿಂತನೆಯನ್ನೂ ತಂಡ ಮಾಡಿದೆ. ಈ ವರ್ಷದ ಆರಂಭದಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದ್ದ ಮಲಿಕ್‌ಗೆ ಆ ಬಳಿಕ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ವಿಲಿಯಮ್ಸನ್‌ ಅಲಭ್ಯ: ನ್ಯೂಜಿಲೆಂಡ್ ತಂಡ, ನಾಯಕ ಕೇನ್‌ ವಿಲಿಯಮ್ಸನ್‌ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿರುವುದರಿಂದ ಅವರು ಆಡುತ್ತಿಲ್ಲ. ಕೇನ್‌ ಅನುಪಸ್ಥಿತಿಯಲ್ಲಿ ಟಿಮ್‌ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ.

ವಿಲಿಯಮ್ಸನ್‌ ಆಡದೇ ಇರುವುದರಿಂದ ಫಿನ್‌ ಅಲೆನ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಒಳಗೊಂಡಂತೆ ಇತರ ಬ್ಯಾಟರ್‌ಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ.

ನ್ಯೂಜಿಲೆಂಡ್ ತಂಡದ ಬೌಲರ್‌ಗಳು ಎರಡನೇ ಪಂದ್ಯದ ಕೊನೆಯ ಓವರ್‌ಗಳಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಆ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಸವಾಲು ಆತಿಥೇಯರ ಮುಂದಿದೆ.

ಪಂದ್ಯ ಆರಂಭ: ಮಧ್ಯಾಹ್ನ 12
ನೇರ ಪ್ರಸಾರ: ಅಮೆಜಾನ್‌ ಪ್ರೈಮ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು