ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 2nd Test: ಭಾರತದ ಬ್ಯಾಟಿಂಗ್ ಬಳಗಕ್ಕೆ ಜಾನ್ಸೆನ್ ಪೆಟ್ಟು

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌: ನಾಯಕ ರಾಹುಲ್ ಅರ್ಧಶತಕ; ಅಶ್ವಿನ್ ಸ್ಫೋಟಕ ಬ್ಯಾಟಿಂಗ್
Last Updated 3 ಜನವರಿ 2022, 16:05 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಯುವ ಬೌಲರ್ ಮಾರ್ಕೊ ಜಾನ್ಸೆನ್ ಮತ್ತು 10ನೇ ಪಂದ್ಯ ಆಡುತ್ತಿರುವ ಡುವಾನೆ ಒಲಿವಿಯರ್ ಅವರ ಪರಿಣಾಮಕಾರಿ ದಾಳಿಗೆ ಭಾರತದ ಬ್ಯಾಟರ್‌ಗಳು ತಬ್ಬಿಬ್ಬಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಸೋಮವಾರ ಆರಂಭಗೊಂಡ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 202 ರನ್‌ಗಳಿಗೆ ಪತನ ಕಂಡಿತು. ದಿನದಾಟದ ಮುಕ್ತಾಯಕ್ಕೆ ಆತಿಥೇಯರು 1 ವಿಕೆಟ್‌ಗೆ 35 ರನ್‌ ಗಳಿಸಿದ್ದಾರೆ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆರಿಸಿಕೊಂಡಿತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಕೆ.ಎಲ್‌.ರಾಹುಲ್ ಕುಸಿಯುತ್ತಿದ್ದ ಇನಿಂಗ್ಸ್‌ಗೆ ಅರ್ಧಶತಕದ ಮೂಲಕ ಬಲ ತುಂಬಿದರು.

ಅನುಭವಿಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ವೈಫಲ್ಯ ಕಂಡರು. ರವಿಚಂದ್ರನ್ ಅಶ್ವಿನ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಇನಿಂಗ್ಸ್‌ನ ಏಕೈಕ ಸಿಕ್ಸರ್ ಸಿಡಿಸಿದ ಜಸ್‌ಪ್ರೀತ್‌ ಬೂಮ್ರಾ ಅವರ ದಿಟ್ಟ ಆಟದಿಂದಾಗಿ ತಂಡದ ಮೊತ್ತ 200 ರನ್ ದಾಟಿತು.

ಕನ್ನಡಿಗ ಜೋಡಿ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಮೊದಲ ವಿಕೆಟ್‌ಗೆ 36 ರನ್ ಸೇರಿಸಿ ಭರವಸೆ ಮೂಡಿಸಿದರು. ಆದರೆ ಮಯಂಕ್ ಔಟಾದ ನಂತರ ತಂಡ ಪತನದತ್ತ ಸಾಗಿತು. ಚೇತೇಶ್ವರ ಪೂಜಾರ 33 ಎಸೆತಗಳಲ್ಲಿ ಮೂರು ರನ್ ಗಳಿಸಿ ಔಟಾದರೆ ಅಜಿಂಕ್ಯ ರಹಾನೆ ಖಾತೆ ತೆರೆಯದೆ ವಾಪಸಾದರು.

ಹನುಮ ವಿಹಾರಿ ಮತ್ತು ರಿಷಭ್‌ ಪಂತ್ ಅವರಿಗೂ ಮಿಂಚಲು ಆಗಲಿಲ್ಲ. ರಾಹುಲ್ ತಾಳ್ಮೆಯಿಂದ ರನ್ ಕಲೆ ಹಾಕುತ್ತ ಅರ್ಧಶತಕ ಪೂರೈಸಿದರು. ಜಾನ್ಸೆನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ ಅವರು ಬೌಂಡರಿ ಗೆರೆ ಬಳಿ ರಬಾಡ ಪಡೆದು ಸೊಗಸಾದ ಕ್ಯಾಚ್‌ಗೆ ಬಲಿಯಾದ‌ರು.

ಕುಸಿತದ ಹಾದಿಯಲ್ಲಿ ಸಾಗಿದ್ದ ಇನಿಂಗ್ಸ್‌ಗೆ ರವಿಚಂದ್ರನ್ ಅಶ್ವಿನ್ ಚೇತರಿಕೆ ತುಂಬಿದರು. ಆದರೆ ಬಾಲಂಗೋಚಿಗಳಿಗೆ ಕಗಿಸೊ ರಬಾಡ ಮಾರಕವಾದರು. ಬೌಂಡರಿಗಳೊಂದಿಗೆ ಮಿಂಚಿದ ಅವರು ವೇಗವಾಗಿ ರನ್ ಗಳಿಸಿ ತಂಡವನ್ನು 200 ರನ್‌ಗಳ ಸನಿಹ ತಲುಪಿಸಿದರು. ಕೊನೆಯಲ್ಲಿ ಜಸ್‌ಪ್ರೀತ್ ಬೂಮ್ರಾ ಕೂಡ ರಂಜಿಸಿದರು.

ಕೊಹ್ಲಿಗೆ ಬೆನ್ನುನೋವು

ಬೆನ್ನಿನಲ್ಲಿ ಸೆಳೆತವುಂಟಾಗಿ ನೋವು ಕಾಣಿಸಿಕೊಂಡ ಕಾರಣ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ಈ ಪಂದ್ಯದಲ್ಲಿ ತಂಡವನ್ನು ಕೆ.ಎಲ್‌.ರಾಹುಲ್ ಮುನ್ನಡೆಸುವರು. ಇದೇ 11ರಿಂದ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಕೊಹ್ಲಿ ಆಡುವ ಸಾಧ್ಯತೆ ಇದೆ ಎಂದು ಟಾಸ್ ಸಂದರ್ಭದಲ್ಲಿ ರಾಹುಲ್ ತಿಳಿಸಿದರು.

ಕೊಹ್ಲಿ ಬದಲಿಗೆ ಹನುಮ ವಿಹಾರಿ ಅವರನ್ನು ಅಂತಿಮ 11ರಲ್ಲಿ ಸೇರಿಸಲಾಗಿದೆ. ಇದು, ಕೊಹ್ಲಿ ಅವರ 99ನೇ ಪಂದ್ಯ ಆಗುತ್ತಿತ್ತು. ಹಾಗಾದರೆ ಮುಂದಿನ ಪಂದ್ಯದಲ್ಲಿ ಅವರು ‘ಶತಕ’ದ ಸಾಧನೆ ಮಾಡುವ ಅವಕಾಶವಿತ್ತು. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಶ್ರೀಲಂಕಾ ಎದುರಿನ ಪಂದ್ಯ ಅವರ ಈ ಮೈಲುಗಲ್ಲಿಗೆ ವೇದಿಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT