ಶುಕ್ರವಾರ, ಅಕ್ಟೋಬರ್ 7, 2022
28 °C

ರೋಹಿತ್, ಕಾರ್ತಿಕ್ ಅಬ್ಬರ: ವಿಂಡೀಸ್‌ ವಿರುದ್ಧ ಭಾರತಕ್ಕೆ 68 ರನ್‌ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿನಿಡಾಡ್: ಇನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅಬ್ಬರದ ಆಟಕ್ಕೆ ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ಬಸವಳಿದರು. 

ಇವರಿಬ್ಬರ ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 68 ರನ್‌ಗಳಿಂದ ಗೆದ್ದಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಗಳಿಸಿತು.

ಇದನ್ನೂ ಓದಿ: 

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 190 ರನ್‌ ಗಳಿಸಿದರೆ, ವಿಂಡೀಸ್‌ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್‌ ಗಳಿಸಿತು. ಆತಿಥೇಯ ತಂಡದ ಶಮರ್‌ ಬ್ರೂಕ್ಸ್‌ (20) ಗರಿಷ್ಠ ಸ್ಕೋರರ್‌ ಎನಿಸಿದರು. ಅರ್ಶ್‌ದೀಪ್‌ ಸಿಂಗ್, ಆರ್‌.ಅಶ್ವಿನ್‌ ಮತ್ತು ರವಿ ಬಿಷ್ಣೋಯ್‌ ತಲಾ ಎರಡು ವಿಕೆಟ್‌ ಪಡೆದರು.

ರೋಹಿತ್‌ ಮಿಂಚು: ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ (64; 44ಎ,4X7, 6X2) ಅರ್ಧಶತಕ ಬಾರಿಸಿ ಉತ್ತಮ ಆರಂಭ ನೀಡಿದರು. ಕೊನೆಯ ಹಂತದ ಓವರ್‌ಗಳಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಮೆರೆದ ಅನುಭವಿ ದಿನೇಶ್ (ಔಟಾಗದೆ 41, 19ಎಸೆತ, 4X4, 6X2) ತಂಡದ ಮೊತ್ತವನ್ನು ಹೆಚ್ಚಿಸಿ ದರು. ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ ದಿನೇಶ್ ಮತ್ತು ಆರ್. ಅಶ್ವಿನ್ (ಔಟಾಗದೆ 13) ಅವರು 52 ರನ್‌ ಸೇರಿಸಿದರು. ಕೊನೆಯ 18 ಎಸೆತಗಳಲ್ಲಿ ಈ ರನ್‌ಗಳು ಸೇರಿದವು. 

ರೋಹಿತ್ ಅವರೊಂದಿಗೆ ಸೂರ್ಯಕುಮಾರ್ ಯಾದವ್ ಇನಿಂಗ್ಸ್‌ ಆರಂಭಿಸಿದರು. ಇಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 4.3 ಓವರ್‌ಗಳಲ್ಲಿ 44 ರನ್‌ ಗಳಿಸಿದರು.  ಮೂರನೇ ಓವರ್‌ನಲ್ಲಿ ಸೂರ್ಯ ಕುಮಾರ್‌ಗೆ ಒಂದು ಜೀವದಾನ ಕೂಡ ಸಿಕ್ಕಿತು. ಆದರೆ ಐದನೇ ಓವರ್‌ನಲ್ಲಿ ಅಕೇಲ್ ಹುಸೇನ್ ಎಸೆತದಲ್ಲಿ ಸೂರ್ಯ ಔಟಾದರು. ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಖಾತೆ ತೆರೆಯದೇ ಔಟಾದರು. 

ರಿಷಭ್ (14 ರನ್) ಮತ್ತು ಹಾರ್ದಿಕ್ ಪಾಂಡ್ಯ (1) ಕೂಡ ನಿರೀಕ್ಷೆ ಹುಸಿಗೊಳಿಸಿದರು. ಇದೆಲ್ಲದರ ನಡುವೆ ರೋಹಿತ್ ಏಕಾಂಗಿ ಹೋರಾಟ ಮಾಡಿದರು.  

ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 6ಕ್ಕೆ190 (ರೋಹಿತ್ ಶರ್ಮಾ 64, ಸೂರ್ಯಕುಮಾರ್ ಯಾದವ್ 24, ರಿಷಭ್ ಪಂತ್ 14, ರವೀಂದ್ರ ಜಡೇಜ 16, ದಿನೇಶ್ ಕಾರ್ತಿಕ್ ಔಟಾಗದೆ 41, ಆರ್. ಅಶ್ವಿನ್ ಔಟಾಗದೆ 13,  ಅಲ್ಜರಿ ಜೋಸೆಫ್ 46ಕ್ಕೆ2, ಅಕೆಲ್ ಹುಸೇನ್ 14ಕ್ಕೆ1)

ವೆಸ್ಟ್‌ ಇಂಡೀಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 (ಶಮರ್‌ ಬ್ರೂಕ್ಸ್‌ 20, ನಿಕೊಲಸ್‌ ಪೂರನ್‌ 18, ಕೀಮೊ ಪೌಲ್‌ ಔಟಾಗದೆ 19, ಅರ್ಶ್‌ದೀಪ್‌ ಸಿಂಗ್ 24ಕ್ಕೆ 2, ಆರ್‌.ಅಶ್ವಿನ್‌ 22ಕ್ಕೆ 2, ರವಿ ಬಿಷ್ಣೋಯ್‌ 26ಕ್ಕೆ 2) ಫಲಿತಾಂಶ: ಭಾರತಕ್ಕೆ 68 ರನ್‌ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು