ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup 2024: ಆನಂದ ಸಾಗರದಲ್ಲಿ ಮಿಂದೆದ್ದ ಭಾರತ– ಕೊಹ್ಲಿ ವಿದಾಯ

ಹಾರ್ದಿಕ್, ಬೂಮ್ರಾ, ಅರ್ಷದೀಪ್ ಬೌಲಿಂಗ್ ಪ್ರತಾಪ; ದಕ್ಷಿಣ ಆಫ್ರಿಕಾಗೆ ದಕ್ಕದ ಚೊಚ್ಚಲ ಪ್ರಶಸ್ತಿ
Published 29 ಜೂನ್ 2024, 18:38 IST
Last Updated 29 ಜೂನ್ 2024, 18:38 IST
ಅಕ್ಷರ ಗಾತ್ರ

ಬ್ರಿಜ್‌ಟೌನ್, ಬಾರ್ಬಡೋಸ್: ಭಾರತದ ಕ್ರಿಕೆಟ್ ಅಭಿಮಾನಿಗಳ ಒಂದು ದಶಕದ ಕನಸು ಶನಿವಾರ ಕೈಗೂಡಿತು. ರೋಹಿತ್ ಶರ್ಮಾ ನಾಯಕತ್ವದ ತಂಡವು ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸುವುದರೊಂದಿಗೆ ಇತಿಹಾಸ ಬರೆಯಿತು. ‌

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾವನೆಗಳ ಮಹಾಪೂರ ಹರಿಯಿತು. ಭಾರತ ತಂಡಕ್ಕೆ ಎರಡನೇ ಬಾರಿ ಟಿ20 ವಿಶ್ವಕಪ್ ಜಯಿಸಿದರೆ, ಚೊಚ್ಚಲ ಪ್ರಶಸ್ತಿ ಜಯಿಸುವ ದಕ್ಷಿಣ ಆಫ್ರಿಕಾದ ಕನಸು ಭಗ್ನವಾಯಿತು. ಭಾರತದ ಆಟಗಾರರ ಆನಂದಭಾಷ್ಪ, ಹರಿಣಗಳ ನಾಡಿನ ಆಟಗಾರರ ನಿರಾಶೆಯ ಕಂಬನಿಗಳೂ ಉಕ್ಕಿದವು. ತಮ್ಮ ವೃತ್ತಿಜೀವನದ ಕೊನೆಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತಬ್ಬಿಕೊಂಡು ಅಭಿನಂದಿಸಿದರು. ಇಬ್ಬರ ಕಣ್ಣಂಚಿನಲ್ಲಿಯೂ ಸಂತಸದ ಹನಿಗಳು ಜಿನುಗಿದ್ದವು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಇದು ವಿದಾಯದ ಟೂರ್ನಿ. ಅವರು ಕೂಡ ಭಾವುಕರಾಗಿದ್ದರು.

ಏಳು ತಿಂಗಳುಗಳ ಹಿಂದೆ ಅಹಮದಾಬಾದಿನಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಅನುಭವಿಸಿದ್ದ ಕರಾಳ ಸೋಲಿನ ನೋವಿಗೆ ಈ ಗೆಲುವು ನಿವಾರಿಸಿತು. 

2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ನಂತರ ಭಾರತ ತಂಡವು ಇದುವರೆಗೆ  ಐಸಿಸಿ ಪ್ರಶಸ್ತಿ ಜಯಿಸುವ ಅವಕಾಶಗಳನ್ನು ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ಕಳೆದುಕೊಂಡಿತ್ತು. ಆದರೆ ಈ ಬಾರಿ ಹಾಗಾಗಲು ರೋಹಿತ್ ಶರ್ಮಾ ಬಳಗ ಬಿಡಲಿಲ್ಲ. ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ರೋಚಕ ಹೋರಾಟ ಕಂಡ ಫೈನಲ್‌ನಲ್ಲಿ ಭಾರತ ತಂಡವು 7 ರನ್‌ಗಳಿಂದ ಜಯ ಸಾಧಿಸಿತು.

ಇಡೀ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಅರ್ಧಶತಕ ಹೊಡೆದು ಆಸರೆಯಾದರು. ಐಪಿಎಲ್‌ನಲ್ಲಿ ತೀವ್ರ ಟೀಕೆಗೊಳಗಾಗಿದ್ದ ಹಾರ್ದಿಕ್ ಪಾಂಡ್ಯ ಫೈನಲ್‌ನ ನಿರ್ಣಾಯಕ ಓವರ್‌ನಲ್ಲಿ ಮಿಂಚಿದರು. ಅಲ್ಲದೇ  ಮೂರು ವಿಕೆಟ್ ಕೂಡ ಗಳಿಸಿದರು.  ಜಸ್‌ಪ್ರೀತ್ ಬೂಮ್ರಾ ಮತ್ತು ಆರ್ಷದೀಪ್ ಸಿಂಗ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. 

ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್‌ನಲ್ಲಿ ‘ಸರ್ಕಸ್‌‘ ಮಾಡಿ ಪಡೆದ ಕ್ಯಾಚ್‌ಗೆ ಡೇವಿಡ್‌ ಮಿಲ್ಲರ್ ಔಟಾದರು. ಅದು ಕೂಡ ಕೊನೆಯ ಹಂತದಲ್ಲಿ ಭಾರತಕ್ಕೆ ಜಯ ಒಲಿಯಲು ಕಾರಣವಾಯಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಅಮೋಘ ಸಾಧನೆ ತೋರಿದ ಭಾರತ ತಂಡವು ಕಿರೀಟವನ್ನು ತನ್ನದಾಗಿಸಿಕೊಂಡಿತು. 

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 176 ರನ್ ಗಳಿಸಿತು. ವಿರಾಟ್ ಕೊಹ್ಲಿ (76; 59ಎಸೆತ) ಮತ್ತು ಅಕ್ಷರ್ ಪಟೇಲ್ (47; 31ಎಸೆತ) ಅವರಿಬ್ಬರ ಜೊತೆಯಾಟದಿಂದಾಗಿ ಇದು ಸಾಧ್ಯವಾಯಿತು.  ಇವರಿಬ್ಬರೂ 4ನೇ ವಿಕೆಟ್‌ ಜೊತೆಯಾಟದಲ್ಲಿ 72 ರನ್‌ ಸೇರಿಸಿದರು. 

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಕೈಯಿಂದ ಗೆಲುವನ್ನು ಬಹುತೇಕ ಕಸಿದುಕೊಂಡಿತ್ತು. ಆದರೆ ಕೊನೆಯ ಐದು ಓವರ್‌ಗಳಲ್ಲಿ ಕಂಡುಬಂದ ನಾಟಕೀಯ ತಿರುವುಗಳು ಪಂದ್ಯದ ರೋಚಕತೆ ಹೆಚ್ಚಿಸಿದವು. 15 ಓವರ್‌ಗಳಲ್ಲಿ  147 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ತಂಡಕ್ಕೆ ಗೆಲುವು ಸಾಧ್ಯವಿತ್ತು. 

23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್ ಕ್ರೀಸ್‌ನಲ್ಲಿದ್ದರು. ಆದರೆ 17ನೇ ಓವರ್‌ನಲ್ಲಿ ಹಾರ್ದಿಕ್ ಬೌಲಿಂಗ್‌ನಲ್ಲಿ ಕ್ಲಾಸೆನ್ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಪಂತ್ ಸಂಭ್ರಮಿಸಿದರು. ಅಲ್ಲಿಂದ ಭಾರತ ತಂಡ ಗೆಲುವಿನ ಹಾದಿಯತ್ತ ಮರಳಿತು.  ಬೂಮ್ರಾ ತಮ್ಮ ಉಳಿದ ಎರಡು ಓವರ್‌ಗಳ ಸ್ಪೆಲ್‌ನಲ್ಲಿ ಬಿಗಿ ದಾಳಿ ನಡೆಸಿದರು. ಅರ್ಷದೀಪ್ ಸಿಂಗ್ ಕೂಡ ಬ್ಯಾಟರ್‌ಗಳನ್ನು ಕಾಡಿದರು. ಕೊನೆಯ ಓವರ್‌ನಲ್ಲಿ ಜಯಕ್ಕಾಗಿ 10 ರನ್‌ಗಳ ಅಗತ್ಯ ದಕ್ಷಿಣ ಆಫ್ರಿಕಾಗೆ ಇತ್ತು. ಆದರೆ ಹಾರ್ದಿಕ್ ಈ ಸವಾಲು ಗೆದ್ದರು. ತಂಡವನ್ನೂ ಗೆಲ್ಲಿಸಿದರು.

‘ಇದು ನನ್ನ ಕೊನೆಯ ಟಿ20 ವಿಶ್ವಕಪ್‌: ವಿರಾಟ್ ಕೊಹ್ಲಿ

‘ಇದು ನನ್ನ ಕೊನೆಯ ಟಿ20 ವಿಶ್ವಕಪ್‌. ನಾವು ಇದನ್ನು ಸಾಧಿಸಲು ಬಯಸಿದ್ದೆವು. ಇದು ಬಹಿರಂಗ ರಹಸ್ಯವಾಗಿತ್ತು. ನಾವು ಸೋತಿದ್ದರೂ ನಿವೃತ್ತಿ ಘೋಷಿಸುತ್ತಿದ್ದೆ. ದೇವರು ದೊಡ್ಡವನು ಮತ್ತು ತಂಡಕ್ಕಾಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಮುಂದಿನ ಪೀಳಿಗೆ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಪ್ರತಿಭಾವಂತ ಆಟಗಾರರು ತಂಡವನ್ನು ಮುಂದೆ ತೆಗೆದುಕೊಂಡು ಹೋಗುತ್ತಾರೆ ಮತ್ತು ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಾರೆ’ ಎಂದು ಪಂದ್ಯದ ಬಳಿಕ ಭಾರತ ತಂಡದ ಬ್ಯಾಟರ್‌ ವಿರಾಟ್ ಕೊಹ್ಲಿ ಹೇಳಿದರು. 

ಭಾರತದ ಅಭಿಮಾನಿಗಳ ಸಂಭ್ರಮ
ಭಾರತದ ಅಭಿಮಾನಿಗಳ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT