ಶನಿವಾರ, ಫೆಬ್ರವರಿ 29, 2020
19 °C
ಆಸ್ಟ್ರೇಲಿಯಾ ಎದುರಿನ 2ನೇ ಪಂದ್ಯ ಇಂದು: ಮೂರನೇ ಕ್ರಮಾಂಕಕ್ಕೆ ಮರಳಲಿರುವ ವಿರಾಟ್

ಗೆಲುವಿನ ಒತ್ತಡದಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಶುಕ್ರವಾರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಮರಳಲಿದ್ದಾರೆ.

ಮೂರು ದಿನಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯ ದಲ್ಲಿ ವಿರಾಟ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಅವರು ಲಯ ಸಾಧಿಸುವಲ್ಲಿ ವಿಫಲರಾಗಿದ್ದರು.

ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ತಂಡದಲ್ಲಿದ್ದ ಕಾರಣ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಕ್ರೀಸ್‌ಗೆ ಬಂದಿದ್ದರು. ಆದರೆ ಸರಣಿ ಜಯದ ಕನಸು ಜೀವಂತವಾಗಿಡಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಆತಿಥೇಯ ತಂಡವು ಇದೆ. ಆದ್ದರಿಂದ ಕೆಲವು ಬದಲಾವಣೆಗಳೊಂದಿಗೆ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಆದರೆ ಈ ಪಂದ್ಯದಲ್ಲಿ ರಾಹುಲ್ ಅವರು ವಿರಾಟ್ ನಂತರದ ಕ್ರಮಾಂಕದಲ್ಲಿ  ಆಡುವ ನಿರೀಕ್ಷೆ ಇದೆ.

ಹೆಲ್ಮೆಟ್‌ಗೆ  ಚೆಂಡಿನ ಪೆಟ್ಟು ತಿಂದಿದ್ದ ರಿಷಭ್ ಪಂತ್ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ವಿಕೆಟ್‌ಕೀಪಿಂಗ್ ಹೊಣೆಯೂ ರಾಹುಲ್‌ಗೆ ಇದೆ. ಇದ ರಿಂದಾಗಿ ತೆರವಾಗುವ ಒಂದು ಸ್ಥಾನಕ್ಕೆ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ಈಚೆಗೆ ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿದ್ದ ಮನೀಷ್, ಗೇಮ್‌ ಚೇಂಜರ್ ಗೌರವಕ್ಕೆ ಪಾತ್ರರಾಗಿದ್ದರು.

ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚಿದ್ದರು. ಆದರೆ, ಅನುಭವಿ ಆಟಗಾರ ಕೇದಾರ್ ಜಾಧವ್  ಅಥವಾ ಶಿವಂ ದುಬೆ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಿದರೆ ಪಾಂಡೆ ಮತ್ತೆ ಬೆಂಚ್ ಕಾಯುವ ಸಾಧ್ಯತೆಯೂ ಇದೆ.

ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿರುವ ರೋಹಿತ್, ವಿರಾಟ್ ಮತ್ತು ಶ್ರೇಯಸ್ ಅವರು ಮತ್ತೆ ಪುಟಿದೇಳಬಹುದು. ಆದರೆ, ಆಸ್ಟ್ರೇಲಿ ಯಾದ ಆರಂಭಿಕ ಜೋಡಿ ಆ್ಯರನ್ ಫಿಂಚ್ ಮತ್ತು ಡೇವಿಡ್‌ ವಾರ್ನರ್ ಅವ ರನ್ನು ಕಟ್ಟಿಹಾಕುವ ಸವಾಲು ಆತಿಥೇಯ ಬೌಲರ್‌ಗಳಿಗೆ ಇದೆ. ಮುಂಬೈನಲ್ಲಿ ಅಜೇಯ ಶತಕಗಳನ್ನು ದಾಖಲಿಸಿದ್ದ  ಇಬ್ಬರೂ ತಮ್ಮ ತಂಡಕ್ಕೆ 10 ವಿಕೆಟ್‌ಗಳ ಜಯದ ಕಾಣಿಕೆ ನೀಡಿದ್ದರು.

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ ನಲ್ಲಿ ಅಗ್ರಶ್ರೇಯಾಂಕದ ಬೌಲರ್‌  ಆಗಿರುವ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಅವರ ಎಸೆತಗಳನ್ನು ವಾರ್ನರ್‌–ಫಿಂಚ್ ಜೋಡಿಯು ನುಚ್ಚುನೂರು ಮಾಡಿತ್ತು.  ಶಾರ್ದೂಲ್‌ ಎಲ್ಲರಿಗಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೇ ನಾಲ್ಕು ವೈಡ್‌ ಬಾಲ್‌ಗಳನ್ನೂ ಹಾಕಿದ್ದರು. ಆದ್ದರಿಂದ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು. ಅವರ ಬದಲಿಗೆ ಯುವ ಬೌಲರ್‌ ನವದೀಪ್‌ ಸೈನಿ ಅವಕಾಶ ಗಿಟ್ಟಿಸಬಹುದು.

ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರ ಎಸೆತಗಳೂ ಪರಿಣಾಮಕಾರಿಯಾಗಿರಲಿಲ್ಲ. ಆದ್ದರಿಂದ ಇವರಿಬ್ಬರಲ್ಲಿ ಒಬ್ಬರನ್ನು ಕೈಬಿಟ್ಟು ಯಜುವೇಂದ್ರ ಚಾಹಲ್‌ ಅವರನ್ನು ಕಣಕ್ಕಿಳಿಸಿದರೆ ಅಚ್ಚರಿಯೇನಿಲ್ಲ. ಪ್ರವಾಸಿ ಬಳಗದ ಆಲ್‌ರೌಂಡ್ ಆಟವನ್ನು ಎದುರಿಸಲು ಎಲ್ಲ ತಂತ್ರಗಳನ್ನು ಅನುಸರಿಸಲು ಕೊಹ್ಲಿ ಸಿದ್ಧರಾಗಿದ್ದಾರೆ.

ಭಾರತಕ್ಕೆ ದುರದೃಷ್ಟದ ಅಂಗಳ!

ರಾಜ್‌ಕೋಟ್‌ನ ಕ್ರೀಡಾಂಗಣವು ಭಾರತದ ಪಾಲಿಗೆ ದುರದೃಷ್ಟಕರ ಅಂಗಳವಾಗಿದೆ. ಇದುವರೆಗೆ ಭಾರತ ತಂಡವು ಇಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿಯೂ ಸೋತಿದೆ. ಆ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆ ಪಂದ್ಯಗಳಲ್ಲಿ ಆಡಿದ್ದ ವಿರಾಟ್ ನಾಯಕರಾಗಿ ಮೊದಲ ಸಲ ಇಲ್ಲಿ ಕಣಕ್ಕಿಳಿಯಲಿದ್ದಾರೆ.

2013ರಲ್ಲಿ ಇಂಗ್ಲೆಂಡ್ ಎದುರು ನಡೆದಿದ್ದ ಪಂದ್ಯದಲ್ಲಿ ಭಾರತವು 9 ರನ್‌ಗಳಿಂದ ಸೋತಿತ್ತು. 2015ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿಯೂ 18 ರನ್‌ಗಳಿಂದ ಪರಾಭವಗೊಂಡಿತ್ತು.

**
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಲು ಸಿದ್ಧ. ತಂಡದ ವ್ಯವಸ್ಥಾಪನ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ತಂಡಕ್ಕೆ ಉತ್ತಮ ಕಾಣಿಕೆ ಕೊಡುವುದಷ್ಟೇ ಗುರಿ
–ಶ್ರೇಯಸ್ ಅಯ್ಯರ್, ಭಾರತ ತಂಡದ ಅಟಗಾರ

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೇದಾರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್‌, ಸೀನ್ ಅಬಾಟ್, ಆಷ್ಟನ್ ಆಗರ್, ಪೀಟರ್ ಹ್ಯಾಂಡ್ಸ್‌ಕಂಬ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಾಬುಶೇನ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30.
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು