‘ಎದುರಾಳಿಗಳಿಗೆ ಕೊಹ್ಲಿ ಪಡೆಯಿಂದ ನಡುಕ’

ಮಂಗಳವಾರ, ಜೂಲೈ 16, 2019
26 °C
ಭಾರತ ತಂಡದ ನಾಯಕರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್‌ ಹೊಗಳಿಕೆ

‘ಎದುರಾಳಿಗಳಿಗೆ ಕೊಹ್ಲಿ ಪಡೆಯಿಂದ ನಡುಕ’

Published:
Updated:
Prajavani

ಮ್ಯಾಂಚೆಸ್ಟರ್‌: ವಿರಾಟ್‌ ಕೊಹ್ಲಿ ಪಡೆಯ ಸದ್ಯದ ಪ್ರದರ್ಶನ ವಿಶ್ವಕಪ್‌ ಟೂರ್ನಿಯಲ್ಲಿ ಎದುರಾಳಿಗಳ ಸ್ಥೈರ್ಯ ಉಡುಗಿಸುವಂತಹ ಪರಿಣಾಮ ಬೀರುತ್ತಿದೆ ಎಂದು ಭಾರತ ತಂಡದ ನಾಯಕರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟರು.

ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ 89 ರನ್‌ಗಳಿಂದ ಜಯಿಸಿತ್ತು.

ಭಾರತದ ಉತ್ತಮ ಲಯದಿಂದ ಪ್ರಭಾವಿತರಾಗಿರುವ ಶ್ರೀಕಾಂತ್‌, ‘ತಂಡದ ಈಗಿನ ಪ್ರದರ್ಶನ 1970ರಲ್ಲಿನ ದೈತ್ಯ ವೆಸ್ಟ್‌ ಇಂಡೀಸ್‌ ತಂಡವನ್ನು ನೆನಪಿಸುತ್ತಿದೆ. ಆಗಿನ ಕೆರಿಬಿಯನ್‌ ನಾಡಿನ ಪಡೆ ಪಂದ್ಯ ಆರಂಭಕ್ಕೂ ಮುನ್ನವೇ ಎದುರಾಳಿಗಳನ್ನು ಮಾನಸಿಕವಾಗಿ ಸೋಲಿಸುತ್ತಿತ್ತು. ಅದೇ ರೀತಿ ಭಾರತ ಕೂಡ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ’ ಎಂದು ಹೇಳಿದರು.

‘ಕೊಹ್ಲಿ ಪಡೆಯನ್ನು ಎದುರಿಸಲು ಇತರ ತಂಡಗಳು ಹೆದರುತ್ತಿವೆ. ಹಿನ್ನಡೆ ಅನುಭವಿಸುವ ಭೀತಿ ಅವುಗಳನ್ನು ಕಾಡುತ್ತಿದೆ’ ಎಂದು ಅವರು ಹೇಳಿದರು.

1975 ಹಾಗೂ 1979ರಲ್ಲಿ ವಿಶ್ವಕಪ್‌ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಕ್ಲೈವ್‌ ಲಾಯ್ಡ್‌ ನೇತೃತ್ವದ ವೆಸ್ಟ್‌ ಇಂಡೀಸ್‌ ಪಡೆ ಪ್ರಬಲ ಶಕ್ತಿಯಾಗಿ ಬೆಳೆದಿತ್ತು. 1983ರಲ್ಲಿ ನಡೆದ ವಿಶ್ವಕಪ್‌ನ ಮೂರನೇ ಆವೃತ್ತಿಯಲ್ಲಿ ಕಪಿಲ್ ದೇವ್‌ ನಾಯಕತ್ವದ ಭಾರತ ತಂಡ, ಆ ದೈತ್ಯ ಶಕ್ತಿಯನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 

ಭಾರತ–ಪಾಕಿಸ್ತಾನ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ಶ್ರೀಕಾಂತ್‌, ‘ಪಾಕಿಸ್ತಾನ ತಂಡವು ಇದೊಂದು ದೊಡ್ಡ ಪಂದ್ಯವೆಂದು ಪರಿಗಣಿಸಿ ಹೆಚ್ಚು ಒತ್ತಡಕ್ಕೊಳಗಾದಂತೆ ಕಂಡಿತು. ಇನ್ನೊಂದೆಡೆ ಭಾರತ ಅದರಲ್ಲೂ ವಿಶೇಷವಾಗಿ ರೋಹಿತ್‌ ಇದನ್ನು ಎಲ್ಲ ಪಂದ್ಯಗಳಂತೆ ಕಂಡುಕೊಳ್ಳಲು ಸಮರ್ಥರಾದರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !