ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಿಸ್‌ ವಿರುದ್ಧ ಪಿಂಕ್‌ ಬಾಲ್‌ ಟೆಸ್ಟ್‌| ದೀಪ್ತಿ, ಜೂಲನ್ ಮಿಂಚು; ಭಾರತ ಪಾರಮ್ಯ

ಆಸ್ಟ್ರೇಲಿಯಾ ಮಹಿಳೆಯರ ಎದುರಿನ ಮಿಥಾಲಿ ರಾಜ್ ಬಳಗದ ಪಿಂಕ್ ಬಾಲ್ ಟೆಸ್ಟ್‌
Last Updated 2 ಅಕ್ಟೋಬರ್ 2021, 17:29 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಆಲ್‌ರೌಂಡರ್ ದೀಪ್ತಿ ಶರ್ಮಾ ಮತ್ತು ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಅವರು ಆಸ್ಟ್ರೇಲಿಯಾ ಮಹಿಳೆಯರ ಎದುರು ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶನಿವಾರವೂ ಮೇಲುಗೈ ಸಾಧಿಸಲು ನೆರವಾದರು.

ದೀಪ್ತಿ ಶರ್ಮಾ ಅವರ ಅಮೋಘ ಅರ್ಧಶತಕದ ಬಲದಿಂದ ಮೂರನೇ ದಿನ ಎಂಟು ವಿಕೆಟ್‌ಗಳಿಗೆ 377 ರನ್ ಗಳಿಸಿ ಭಾರತ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಕಾರ್ ಅವರ ಪರಿಣಾಮಕಾರಿ ದಾಳಿ ನಡೆಸಿದರು. ಇದರ ಪರಿಣಾಮ ದಿನದಾಟದ ಮುಕ್ತಾಯದ ವೇಳೆ ಆತಿಥೇಯರು ನಾಲ್ಕು ವಿಕೆಟ್‌ ಕಳೆದುಕೊಂಡು 143 ರನ್ ಗಳಿಸಿದ್ದಾರೆ.ಮೊದಲ ಇನಿಂಗ್ಸ್‌ನಲ್ಲಿ 234 ರನ್‌ ಹಿಂದೆ ಉಳಿದಿದ್ದು ಫಾಲೊ ಆನ್ ತಪ್ಪಿಸಿಕೊಳ್ಳಲು ಕೊನೆಯ ದಿನವಾದ ಭಾನುವಾರ 85 ರನ್ ಗಳಿಸಬೇಕಾಗಿದೆ.

ಭರವಸೆಯಿಂದ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 14 ರನ್ ಗಳಿಸಿದ್ದಾಗ ಜೂಲನ್ ಗೋಸ್ವಾಮಿ ಆರಂಭಿಕ ಬ್ಯಾಟರ್ ಬೇಥ್ ಮೂನಿ ವಿಕೆಟ್ ಉರುಳಿಸಿ ಪೆಟ್ಟು ನೀಡಿದರು. ಮೂನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅಲಿಸಾ ಹೀಲಿ ವಿಕೆಟ್ ಕೂಡ ಜೂಲನ್ ಪಾಲಾಯಿತು. ಪೂಜಾ ವಸ್ತ್ರಕಾರ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಆಲ್‌ರೌಂಡರ್ ತಹಲಿಯಾ ಮೆಗ್ರಾ ಅವರನ್ನು ವಾಪಸ್ ಕಳುಹಿಸಿದರು.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಶುಕ್ರವಾರದ ಮೊತ್ತಕ್ಕೆ 101 ರನ್‌ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆಲ್‌ರೌಂಡರ್ ದೀಪ್ತಿ ಶರ್ಮಾ 66 ರನ್‌ ಗಳಿಸಿ ಮಿಂಚಿದರು.

ಶುಕ್ರವಾರ 276 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ತಂಡಮೂರನೇ ದಿನ ಮೊದಲ ಅವಧಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತದ ಬ್ಯಾಟರ್‌ಗಳು ನಿಧಾನವಾಗಿ ರನ್ ಗಳಿಸಿದರು. ‘ಡಿನ್ನರ್’ ವೇಳೆ ತಂಡದ ಮೊತ್ತ ಏಳು ವಿಕೆಟ್‌ಗಳಿಗೆ 359 ಆಗಿತ್ತು. ವೈಯಕ್ತಿಕ 12 ರನ್‌ಗಳಿಂದ ದಿನದಾಟ ಆರಂಭಿಸಿದ ದೀಪ್ತಿ ಶರ್ಮಾ ವಿರಾಮಕ್ಕೆ ತೆರಳುವ ಮೊದಲು ಅರ್ಧಶತಕ ಪೂರೈಸಿದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಎರಡನೇ ಅರ್ಧಶತಕವಾಗಿದೆ. ಟೆಸ್ಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಮೊತ್ತವೂ ಆಗಿದೆ.

ತಾನಿಯಾ ಜೊತೆ ದೀಪ್ತಿ ಆರನೇ ವಿಕೆಟ್‌ಗೆ 45 ರನ್‌ ಸೇರಿಸಿದ್ದರು. ಇದಕ್ಕಾಗಿ ಇವರಿಬ್ಬರು 28 ಓವರ್‌ಗಳನ್ನು ತೆಗೆದುಕೊಂಡಿದ್ದರು. ಪೂಜಾ ವಸ್ತ್ರಕಾರ್ ಜೊತೆಗೂಡಿ ದೀಪ್ತಿ 40 ರನ್‌ಗಳನ್ನು ಸೇರಿಸಿದರು. 10 ರನ್‌ಗಳ ಅಂತರದಲ್ಲಿ ಇವರಿಬ್ಬರು ವಿಕೆಟ್ ಕಳೆದುಕೊಂಡರು.

ಎಲಿಸ್ ಪೆರಿ 300ರ ಸಾಧನೆ

ಆಲ್‌ರೌಂಡರ್ ಎಲಿಸ್ ಪೆರಿ, ಮಹಿಳಾ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ಬೌಲರ್ ಎನಿಸಿಕೊಂಡರು. ಭಾರತದ ಪೂಜಾ ವಸ್ತ್ರಕಾರ್ ಅವರನ್ನು ಶನಿವಾರ ಔಟ್ ಮಾಡುವುದರ ಮೂಲಕ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಇದು ಟೆಸ್ಟ್‌ನಲ್ಲಿ ಅವರು ಗಳಿಸಿದ 33ನೇ ವಿಕೆಟ್‌. ಏಕದಿನ ಕ್ರಿಕೆಟ್‌ನಲ್ಲಿ 152 ಹಾಗೂ ಟಿ20ಯಲ್ಲಿ 115 ವಿಕೆಟ್ ಸಾಧನೆ ಮಾಡಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಪೆರಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. 337 ವಿಕೆಟ್‌ಗಳೊಂದಿಗೆ ಭಾರತದ ಜೂಲನ್ ಗೋಸ್ವಾಮಿ ಮೊದಲ ಸ್ಥಾನದಲ್ಲಿದ್ದರು ಇಂಗ್ಲೆಂಡ್‌ನ ಕ್ಯಾಥರಿನ್ ಬ್ರೂಂಟ್ ನಂತರದ ಸ್ಥಾನದಲ್ಲಿದ್ದಾರೆ. ಅವರು 301 ವಿಕೆಟ್ ಉುರುಳಿಸಿದ್ದಾರೆ.

ಒಟ್ಟು ಐದು ಸಾವಿರ ರನ್ ಮತ್ತು 300 ವಿಕೆಟ್ ಗಳಿಸಿದವರ ಸಾಲಿನಲ್ಲಿ ಪೆರಿ ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ಈಗ 30 ವರ್ಷ (ರಾಯಿಟರ್ಸ್‌ ವರದಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT