ಭಾನುವಾರ, ಸೆಪ್ಟೆಂಬರ್ 27, 2020
22 °C
ಭಾರತ – ವೆಸ್ಟ್ ಇಂಡೀಸ್ ಏಕದಿನ ಸರಣಿಯ ಎರಡನೇ ಪಂದ್ಯ ಇಂದು: ಕ್ರಿಸ್‌ ಗೇಲ್ ಫಾರ್ಮ್ ಚಿಂತೆ

ಬ್ಯಾಟಿಂಗ್ ಕ್ರಮಾಂಕದ ‘ಪ್ರಯೋಗ’ ಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಆಫ್ ಸ್ಪೇನ್, ವೆಸ್ಟ್ ಇಂಡೀಸ್‌ (ಪಿಟಿಐ): ಮೊದಲ ಪಂದ್ಯವನ್ನು ಮಳೆ ಕೊಚ್ಚಿಕೊಂಡು ಹೋಯಿತು. ಎರಡನೇ ಪಂದ್ಯಕ್ಕಾದರೂ ಬಿಸಿಲು ಕಾಯುವ ನಿರೀಕ್ಷೆಯೊಂದಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾನುವಾರ ಕಣಕ್ಕೆ ಇಳಿಯಲಿವೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣ ಸಜ್ಜಾಗಿದೆ.

ಭಾರತ ತಂಡ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುವ ಬ್ಯಾಟ್ಸ್‌ಮನ್‌ನ ಹುಡುಕಾಟದಲ್ಲಿದ್ದು ಶ್ರೇಯಸ್ ಅಯ್ಯರ್‌ ಅವರನ್ನು ಈ ಸ್ಥಾನದಲ್ಲಿ ಪ್ರಯೋಗಿಸಲು ಮುಂದಾಗಲಿದೆ. ಟ್ವೆಂಟಿ–20 ಸರಣಿಯಲ್ಲಿ ಆಡಲು ಅವಕಾಶ ಸಿಗದ ಐಯರ್‌ ಏಕದಿನ ಪಂದ್ಯದ ಮೊದಲ ಪಂದ್ಯಕ್ಕಾಗಿ ಆಯ್ಕೆ ಮಾಡಿದ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಮಳೆಯಿಂದಾಗಿ 13 ಓವರ್‌ಗಳ ನಂತರ ಪಂದ್ಯವನ್ನು ರದ್ದು ಮಾಡಲಾಗಿತ್ತು.

ವೆಸ್ಟ್ ಇಂಡೀಸ್ ‘ಎ’ ಎದುರಿನ ಭಾರತ ‘ಎ’ ತಂಡದ ಸರಣಿಯಲ್ಲಿ ಐಯರ್‌ ಎರಡು ಅರ್ಧಶತಕ ಗಳಿಸಿದ್ದರು. ಈ ಅನುಭವವೇ ಅವರನ್ನು ನಾ‌ಲ್ಕನೇ ಸ್ಥಾನಕ್ಕೆ ಪರಿಗಣಿಸಲು ಕಾರಣ. ಐಯರ್‌ಗೆ ಸ್ಥಾನ ಲಭಿಸಿದರೆ ಕೆ.ಎಲ್‌.ರಾಹುಲ್ ‘ವಿಶ್ರಾಂತಿ’ ಪಡೆದುಕೊಳ್ಳುವ ಸಂಭವ ಹೆಚ್ಚಾಗಿದೆ.

ಭಾರತದ ಆರಂಭಿಕ ಜೋಡಿಯ ಪೈಕಿ ಯಾರಾದರೂ ಒಬ್ಬರು ಕಣಕ್ಕೆ ಇಳಿಯದಿದ್ದರೆ ಮಾತ್ರ ರಾಹುಲ್‌ಗೆ ಸ್ಥಾನ ಸಿಗಲಿದೆ.

ಈ ಸರಣಿಯು ಆಲ್‌ರೌಂಡರ್ ಕೇದಾರ್ ಜಾಧವ್‌ಗೂ ಮಹತ್ವದ್ದಾಗಿದೆ. ದಿನೇಶ್ ಕಾರ್ತಿಕ್ ನಿವೃತ್ತಿ ನಂತರ ಅವರ ಜಾಗವನ್ನು ತುಂಬಬಲ್ಲ ಆಟಗಾರ ಎಂದೇ ಪರಿಗಣಿಸಲಾಗಿರುವ ಜಾಧವ್‌ ಎರಡನೇ ಪಂದ್ಯದಲ್ಲಿ ಅವಕಾಶ ಪಡೆದರೆ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. ಅತ್ತ, ಅಮೋಘ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ತಂಡದಲ್ಲಿ ಸ್ಥಾನ ಗಳಿಸಲು ಕಾತರರಾಗಿರುವುದರಿಂದ ಜಾಧವ್‌ಗೆ ಇದು ಅಗ್ನಿಪರೀಕ್ಷೆಯ ಕಾಲವಾಗಿದೆ. ಆದರೆ ಅವರನ್ನು ಯಾವ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬೇಕು ಎಂಬ ಗೊಂದಲ ನಾಯಕ ವಿರಾಟ್ ಕೊಹ್ಲಿ ಕೋಚ್ ರವಿಶಾಸ್ತ್ರಿ ಅವರನ್ನು ಕಾಡದೇ ಇರಲಾರದು.

ಆಫ್‌ ಸ್ಪಿನ್‌ ಬೌಲಿಂಗ್ ಕೂಡ ಮಾಡಬಲ್ಲ ಜಾಧವ್‌ ತಂಡದ ಆಸ್ತಿ ನಿಜ. ಆದರೆ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರಂಥ ಸ್ಪಿನ್ನರ್‌ಗಳಿರುವಾಗ ತಂಡಕ್ಕೆ ಜಾಧವ್ ಅವರ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಆಡಳಿತವನ್ನು ಕಾಡುತ್ತಿದೆ.

ಭುವಿಗೆ ವಿಶ್ರಾಂತಿ ಸಾಧ್ಯತೆ?: ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು ಹಾಗಾದರೆ ನವದೀಪ್ ಸೈನಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್ ಕೂಡ ಕಾಣಿಸಿಕೊಳ್ಳುವುದು ಖಚಿತ.

ಕ್ರಿಸ್‌ ಗೇಲ್‌ ಫಾರ್ಮ್ ಚಿಂತೆ: ‘ಯೂನಿವರ್ಸ್‌ ಬಾಸ್‌’ ಕ್ರಿಸ್ ಗೇಲ್‌ ಫಾರ್ಮ್‌ನಲ್ಲಿ ಇಲ್ಲದೇ ಇರುವುದು ಆತಿಥೇಯರನ್ನು ಕಾಡುತ್ತಿದೆ. ಮೊದಲ ಪಂದ್ಯದಲ್ಲಿ ಅವರು 31 ಎಸೆತ ಎದುರಿಸಿ ಕೇವಲ ನಾಲ್ಕು ರನ್‌ ಗಳಿಸಿದ್ದರು. ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಎವಿನ್ ಲೂಯಿಸ್‌ ಉಪಯುಕ್ತ ಆಟ ಆಡಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಎವಿನ್‌–ಗೇಲ್‌ ಜೋಡಿ ಇನಿಂಗ್ಸ್‌ಗೆ ಉತ್ತಮ ಆರಂಭ ಒದಗಿಸಲಿ ಎಂಬ ನಿರೀಕ್ಷೆಯಲ್ಲಿದೆ  ಜೇಸನ್ ಹೋಲ್ಡರ್ ಬಳಗ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್ ಅಯ್ಯರ್‌, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್‌), ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಕೇದಾರ್ ಜಾಧವ್‌, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್‌, ಖಲೀಲ್ ಅಹಮ್ಮದ್, ನವದೀಪ್ ಸೈನಿ.

‌ವೆಸ್ಟ್ ಇಂಡೀಸ್‌: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್‌, ಜಾನ್ ಕ್ಯಾಂಪ್‌ಬೆಲ್‌, ಎವಿನ್ ಲೂಯಿಸ್‌, ಶಾಯ್‌ ಹೋಪ್‌, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್‌, ರಾಸ್ಟನ್ ಚೇಸ್‌, ಫ್ಯಾಬಿಯನ್ ಅಲೆನ್, ಕಾರ್ಲೋಸ್ ಬ್ರಾಥ್‌ವೇಟ್‌, ಕೀಮೊ ಪಾಲ್‌, ಶೆಲ್ಡನ್‌ ಕಾಟ್ರೆಲ್‌, ಒಷೇನ್ ಥಾಮಸ್‌, ಕೆಮರ್ ರೋಚ್‌.

ಪಂದ್ಯ ಆರಂಭ: ರಾತ್ರಿ 7.00

ನೇರ ಪ್ರಸಾರ: ಸೋನಿ ನೆಟ್‌ವರ್ಕ್

ಮುಖ್ಯಾಂಶ 

-ಮೊದಲ ಪಂದ್ಯವನ್ನು 13 ಓವರ್‌ಗಳ ನಂತರ ರದ್ದುಗೊಳಿಸಲಾಗಿತ್ತು

-ಕೆ.ಎಲ್‌.ರಾಹುಲ್ ಈ ‍ಪಂದ್ಯದಲ್ಲೂ ಬೆಂಚ್‌ ಕಾಯುವ ಸಾಧ್ಯತೆ ಹೆಚ್ಚು

-ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ಗೆ ಅಗ್ನಿಪರೀಕ್ಷೆಯ ಕಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು