ಮಂಗಳವಾರ, ನವೆಂಬರ್ 30, 2021
22 °C

ಪಾಕ್‌ ತಂಡವು ನಮಗಿಂತ ಉತ್ತಮ ಪ್ರದರ್ಶನ ನೀಡಿತು: ಸೋಲಿನ ಬಳಿಕ ಕೊಹ್ಲಿ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದುಬೈ: ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಿರಲಿಲ್ಲವೆಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ಪಾಕ್‌ ವಿರುದ್ಧ ಹೀನಾಯವಾಗಿ ಸೋತ ಬಳಿಕ ಮಾತನಾಡಿರುವ ಅವರು, 'ನಾವು ಯಾರನ್ನಾದರೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶೇಷವಾಗಿ, ಪಾಕಿಸ್ತಾನದಂತಹ ತಂಡವು ಪ್ರಪಂಚದ ಯಾವ ತಂಡವನ್ನಾದರೂ ಸೋಲಿಸಬಹುದು' ಎಂದು ಕೊಹ್ಲಿ ಹೇಳಿದ್ದಾರೆ.

'ಕ್ರಿಕೆಟ್‌ ಎನ್ನುವುದು ಗೌರವಾನ್ವಿತ ಆಟವಾಗಿದೆ. ನಾವು ಖಂಡಿತವಾಗಿಯೂ ಆಟವನ್ನು ಗೌರವಿಸುತ್ತೇವೆ. ನಾವು ವಿರೋಧಿಗಳ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ. ನಮ್ಮ ಆಟವನ್ನಷ್ಟೇ ನಾವು ಆಡುತ್ತೇವೆ' ಎಂದು ಭಾರತದ ತಂಡದ ನಾಯಕ ಹೇಳಿದ್ದಾರೆ.

'ಅವರು(ಪಾಕ್‌ ತಂಡ) ಖಂಡಿತವಾಗಿಯೂ ನಮ್ಮನ್ನು ಮೀರಿಸಿದ್ದಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ' ಎಂದೂ ಕೊಹ್ಲಿ ತಿಳಿಸಿದ್ದಾರೆ.

'ವಿರೋಧಿ ತಂಡಕ್ಕಿಂತ ಉತ್ತಮವಾಗಿ ಆಡದೇ ಹೋದರೆ 10 ವಿಕೆಟ್‌ಗಳಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅವರನ್ನು ಕಟ್ಟಿಹಾಕಲು ನಮಗೆ ಯಾವುದೇ ಅವಕಾಶಗಳು ಕೂಡ ಸಿಗಲಿಲ್ಲ. ಅವರು ತುಂಬಾ ವೃತ್ತಿಪರರಾಗಿದ್ದಾರೆ' ಎಂದು ವಿರಾಟ್‌ ಅಭಿಪ್ರಾಯಪಟ್ಟಿದ್ದಾರೆ.

'ನಾವು ಅವರ ಮೇಲೆ ಸಾಕಷ್ಟು ಒತ್ತಡವನ್ನು ಹಾಕಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ಅವರು ಎಲ್ಲದಕ್ಕೂ ಉತ್ತರಗಳನ್ನು ಹೊಂದಿದ್ದರು. ಒಂದು ತಂಡವು ನಮಗಿಂತ ಉತ್ತಮವಾಗಿ ಆಡಿದೆ ಎಂಬುದನ್ನು ಒಪ್ಪಿಕೊಳ್ಳಲು ಯಾವುದೇ ಅವಮಾನವಿಲ್ಲ' ಎಂದೂ ಕೊಹ್ಲಿ ತಿಳಿಸಿದ್ದಾರೆ.

'ಆಟ ಹೇಗೆ ಸಾಗಿತು ಮತ್ತು ಎಲ್ಲಿ ತಪ್ಪಾಯಿತು ಎಂಬುದು ನಮಗೆ ತಿಳಿದಿದೆ. ನಮಗೆ ಅದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ಒಂದು ತಂಡವಾಗಿ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಸರಿಪಡಿಸಿಕೊಂಡು ಮುಂದುವರೆಯಲು ಸಾಧ್ಯವಾಗುತ್ತದೆ' ಎಂದು ಕೊಹ್ಲಿ ಹೇಳಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು