ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | IND vs BAN: 13 ಸಿಕ್ಸ್‌ ಹೊಡೆದು ದಾಖಲೆ ನಿರ್ಮಿಸಿದ ಭಾರತ

Published 23 ಜೂನ್ 2024, 3:34 IST
Last Updated 23 ಜೂನ್ 2024, 3:34 IST
ಅಕ್ಷರ ಗಾತ್ರ

ನಾರ್ತ್‌ಸೌಂಡ್: ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಟಿ 20 ವಿಶ್ವಕಪ್‌ ಸೂಪರ್‌8ರ ಹಂತದ ಟೂರ್ನಿಯಲ್ಲಿ ಭಾರತ ಒಂದೇ ಪಂದ್ಯದಲ್ಲಿ 13 ಸಿಕ್ಸ್‌ ಬಾರಿಸುವ ಮೂಲಕ ಹೊಸ ಸಾಧನೆ ಮಾಡಿದೆ.

ಈ ಹಿಂದೆ 2007ರ ಐಸಿಸಿ ಟಿ 20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ 11 ಸಿಕ್ಸ್‌ ಹೊಡೆದಿತ್ತು. ಇದರಲ್ಲಿ ಯುವರಾಜ್‌ ಸಿಂಗ್‌ ಅವರೇ ಏಳು ಸಿಕ್ಸ್‌ ಬಾರಿಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಹೊಡೆದ ಭಾರತೀಯ ಎನ್ನುವ ಹೆಗ್ಗಳಿಕೆ ಗಳಿಸಿದ್ದರು.

ನಿನ್ನೆ ನಡೆದ ಟೂರ್ನಿಯಲ್ಲಿ ಭಾರತೀಯ ಆಟಗಾರರು 13 ಸಿಕ್ಸ್‌ ಹೊಡೆದಿದ್ದಾರೆ. ಅದರಲ್ಲಿ ವಿರಾಟ್‌ ಕೊಹ್ಲಿ, ಶಿವಮ್‌ ದುಬೆ, ಹಾರ್ದಿಕ್‌ ಪಾಂಡ್ಯ ತಲಾ ಮೂರು ಸಿಕ್ಸ್‌ ಹೊಡೆದಿದ್ದಾರೆ. ಉಳಿದಂತೆ ರಿಶಬ್‌ ಪಂತ್‌ 2, ನಾಯಕ ರೋಹಿತ್‌ ಶರ್ಮಾ ಮತ್ತು ಸೂರ್ಯ ಕುಮಾರ್‌ ಯಾದವ್‌ ತಲಾ ಒಂದು ಸಿಕ್ಸ್‌ ಹೊಡೆದಿದ್ದಾರೆ.

ಟಿ 20 ವಿಶ್ವಕಪ್‌ ಇನ್ನಿಂಗ್ಸ್‌ನಲ್ಲಿ ಒಂದೇ ದಿನ ಹೆಚ್ಚು ಸಿಕ್ಸ್‌ ಹೊಡೆದ ಹೆಸರು ನೆದರ್‌ಲ್ಯಾಂಡ್ಸ್‌ಗೆ ಸಲ್ಲುತ್ತದೆ. 2014ರಲ್ಲಿ ನೆದರ್‌ಲ್ಯಾಂಡ್ಸ್‌ ತಂಡ ಐರ್ಲೆಂಡ್‌ ವಿರುದ್ಧ 190 ರನ್‌ಗಳಿಸಲು ಕೇವಲ 13.5 ಓವರ್‌ಗಳಲ್ಲಿ 19 ಸಿಕ್ಸ್‌ ಬಾರಿಸಿತ್ತು.

ನಿನ್ನೆ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಹಾರ್ದಿಕ್ ಪಾಂಡ್ಯಾ ಅವರ ಮಿಂಚಿನ ಆಟದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 146 ರನ್‌ ಗಳಿಸಿ ಸೋಲನುಭವಿಸಿತು. ಈ ಮೂಲಕ ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈನಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು. 

ಇದು 20 ವಿಶ್ವಕಪ್ ಇತಿಹಾಸದಲ್ಲಿ ಭಾರತದ 3ನೇ ಗರಿಷ್ಠ ಮೊತ್ತವಾಗಿದೆ. 2007 ರಲ್ಲಿ ಇಂಗ್ಲೆಂಡ್ ವಿರುದ್ಧ 218/14 ಗಳಿಸಿದ್ದು ತಂಡ ಗರಿಷ್ಠ ಸ್ಕೋರ್‌ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT