ಸೋಮವಾರ, ಡಿಸೆಂಬರ್ 16, 2019
25 °C
19 ವರ್ಷದೊಳಗಿನವರ ವಿಶ್ವಕಪ್‌: ‘ನಾನು ನಡೆಸುತ್ತಿರುವ ಈ ಬದುಕು ಅಪ್ಪನ ಕನಸು’

ಹಾಲು ಮಾರಾಟಗಾರನ ಮಗ ಪ್ರಿಯಂ ಗರ್ಗ್, ವಿಶ್ವಕಪ್ ಕ್ರಿಕೆಟ್ ತಂಡದ ನಾಯಕನಾದ ಕಥೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ಗೆ ಭಾರತ ತಂಡ ಮುನ್ನಡೆಸಲಿರುವ ಪ್ರಿಯಂ ಗರ್ಗ್‌ ಬಗ್ಗೆ ಈಗ ಕ್ರೀಡಾ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೆ ಏರಿ, ಲೋಕದ ಮೂಗಿಗೆ ಬೆರಗಿನುಂಗುರ ಉಡಿಸಿದವರಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ಹಲವು ಸ್ಪೂರ್ತಿದಾಯಕ ಕಥೆಗಳು ಸಿಗುತ್ತವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಈ ಪ್ರಿಯಂ ಗರ್ಗ್‌.

2000ದಲ್ಲಿ ಮೊಹಮದ್‌ ಕೈಫ್‌, 2008ರಲ್ಲಿ ವಿರಾಟ್‌ ಕೊಹ್ಲಿ, 2012ರಲ್ಲಿ ಉನ್ಮುಕ್ತ್‌ ಚಾಂದ್‌ ಹಾಗೂ 2018ರಲ್ಲಿ ಪೃಥ್ವಿ ಶಾ ಬಳಿಕ ಭಾರತಕ್ಕೆ ಮತ್ತೊಂದು ವಿಶ್ವ ಕಿರೀಟ ತೊಡಿಸಲು ಹೊರಟ ಈ ನಾಯಕನ ಹೆಗಲನ್ನು ಬೆಟ್ಟದಷ್ಟು ನಿರೀಕ್ಷೆಗಳು ಏರಿಕೊಂಡಿವೆ. ಮಾತ್ರವಲ್ಲದೆ, ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆದ ಈ ಆಟಗಾರನಿಗೆ ಚಾಂಪಿಯನ್‌ ಪಟ್ಟವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯೂ ಇದೆ. ಜನವರಿ 17ರಿಂದ ಫೆಬ್ರವರಿ 9ರ ವರೆಗೆ ವಿಶ್ವಕಪ್‌ ನಡೆಯಲಿದೆ.

ಇದನ್ನೂ ಓದಿ: ಕ್ರಿಕೆಟ್‌: ಕಿರಿಯರ ವಿಶ್ವಕಪ್‌ ತಂಡದಲ್ಲಿ ಇಬ್ಬರು ಕನ್ನಡಿಗರು

ಉತ್ತರ ಪ್ರದೇಶದ ಪರಿಕ್ಷಿತ್‌ಗರ್‌ನಲ್ಲಿ 2000ನೇ ನವೆಂಬರ್‌ 30ರಂದು ಜನಿಸಿದ ಪ್ರಿಯಂ ಹೆಸರನ್ನು, ಆತ ವಿಶ್ವಕಪ್‌ ತಂಡದ ನಾಯಕನಾಗಿ ಆಯ್ಕೆಯಾಗುವ ಮುನ್ನ ಸಾಕಷ್ಟು ಜನರು ಕೇಳಿಯೇ ಇರಲಿಲ್ಲ. ಆದರೆ, ಬಳಿಕ ‘ಹೆಸರು’ ಹೀಗೆ ಏಕಾಏಕಿ ಪ್ರಚಾರ ಪಡೆದುಕೊಂಡಷ್ಟು ಸುಲಭದ್ದಾಗಿರಲಿಲ್ಲ ಪ್ರಿಯಂ ಸಾಗಿ ಬಂದ ಹಾದಿ. ತಮ್ಮ ಬದುಕಿನ ಕಥೆಯನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌  ಜೊತೆಗೆ ಹಂಚಿಕೊಂಡಿದ್ದಾರೆ ಗರ್ಗ್‌.

ಮನೆಮನೆಗೆ ಹಾಲು ಮಾರಾಟ ಮಾಡಿ ರಾತ್ರಿ ಮನೆಗೆ ಬರುತ್ತಿದ್ದ ತಂದೆ ನರೇಶ್‌ ಗರ್ಗ್‌ ಅವರಿಂದ ₹ 10 ಪಡೆದು ಮನೆಯಿಂದ ಮೀರತ್‌ನತ್ತ ಹೊರಡುತ್ತಿದ್ದ ಪ್ರಿಯಂ ಮುಂದೆ ಇದ್ದದ್ದು ಕ್ರಿಕೆಟ್‌ ಮಾತ್ರ. ಹಣ ಸಿಗದಿದ್ದಾಗ ಬಸ್‌ನ ಛಾವಣಿ ಮೇಲೆ ಕೂತು ಕನಸುಗಳ ಬೆನ್ನತ್ತಬೇಕಿತ್ತು. ಕೆಲವೊಮ್ಮೆ ಅಪ್ಪನ ವ್ಯಾನ್‌ನಲ್ಲೇ ರಾತ್ರಿ ಇಡೀ ಸಂಚರಿಸಬೇಕಿತ್ತು. ಒಂದು ಕಾಲದಲ್ಲಿ ಕ್ರಿಕೆಟ್‌ ಬಾಲ್‌ಗೆ (ಬಡಿದರೆ ಪೆಟ್ಟಾಗುತ್ತದೆ ಎಂಬ ಭಯದಿಂದ) ಹೆದರುತ್ತಿದ್ದ ಈ ಹುಡುಗ, ಮನೆಗೂ ತರಬೇತಿ ಕೇಂದ್ರಕ್ಕೂ ನಡುವೆ ನಿತ್ಯ ಪ್ರಯಾಣಿಸುತ್ತಿದ್ದುದು ಬರೋಬ್ಬರಿ 40 ಕಿ.ಮೀ. ಬೆಟ್ಟದಷ್ಟು ನಿರೀಕ್ಷೆ ಹೊತ್ತು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಗರ್ಗ್‌ ಕಣ್ಣಲ್ಲೀಗ ಭರವಸೆಯ ಬೆಳಕು ಮೂಡಿದೆ.


ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ದುಲೀಪ್‌ ಟ್ರೋಫಿ ಪಂದ್ಯದ ಸಂದರ್ಭ ಇಂಡಿಯಾ ರೆಡ್‌ ತಂಡದ ವೇಗಿ ಆವೇಶ್‌ ಖಾನ್‌ ಎಸೆದ ಚೆಂದು ಪ್ರಿಯಂ ಕುತ್ತಿಗೆಗೆ ಅಪ್ಪಳಿಸಿತ್ತು. ಇಂಡಿಯಾ ಗ್ರೀನ್‌ ತಂಡದ ಫಿಸಿಯೊ ಚಿಕಿತ್ಸೆ ನೀಡುತ್ತಿದ್ದಾರೆ.

ಅಪ್ಪನ ಬೆವರಿನ ಬಲದಲ್ಲಿ ಬೆಳೆದ ಆ ದಿನಗಳನ್ನು ನೆನಪಿಸಿಕೊಳ್ಳುವ ಗರ್ಗ್‌, ‘ಅಪ್ಪ ನರೇಶ್ ಗರ್ಗ್ ಶಾಲಾ ಬಸ್‌ ಡ್ರೈವರ್ ಆಗಿದ್ದಾರೆ. ನನಗೆ ಒಬ್ಬ ಅಣ್ಣ ಮತ್ತು ಮೂವರು ಅಕ್ಕಂದಿರು ಇದ್ದಾರೆ. ಕುಟುಂಬದಲ್ಲಿ ನಾನೇ ಚಿಕ್ಕವನು. ಇಷ್ಟು ದೊಡ್ಡ ಕುಟುಂಬವನ್ನು ನಿರ್ವಹಿಸಲು ಅಪ್ಪನ ಬಳಿ ಹಣದ ಕೊರತೆ ಇತ್ತು. ಅದರಲ್ಲಿ ನನ್ನ ಕ್ರಿಕೆಟ್  ತರಬೇತಿಗೆ ಖರ್ಚು ಮಾಡುವಷ್ಟು ಶಕ್ತಿ ಕೂಡ ಇರಲಿಲ್ಲ. ಹಾಗಾಗಿ ಅಪ್ಪ ಎಲ್ಲ ರೀತಿಯ ಕಷ್ಟದ ಕೆಲಸಗಳನ್ನೂ ಮಾಡಿದ್ದಾರೆ. ಹಾಲು ಮಾರುವುದು, ಶಾಲಾ ವಾಹನ ಚಾಲನೆ, ವಾಹನಗಳಿಗೆ ಸರಕು ತುಂಬುವುದು ಹೀಗೆ ಎಲ್ಲವನ್ನೂ ಮಾಡಿದ್ದಾರೆ. ಹಾಗಾಗಿಯೇ ನಾನೀಗ ಉತ್ತಮ ಬದುಕೊಂದನ್ನು ಕಾಣುತ್ತಿದ್ದೇನೆ. ನಾನು ಒಂದಲ್ಲಒಂದುದಿನ ಕ್ರಿಕೆಟಿಗನಾಗುವುದನ್ನು ನೋಡಲು ಅವರು ಇಷ್ಟೆಲ್ಲ ಅನುಭವಿಸಿದ್ದಾರೆ. ನನ್ನನ್ನು ಮೀರತ್‌ಗೆ ಕರೆತಂದು ಉತ್ತಮವಾದ ಅಕಾಡೆಮಿಗೆ ಸೇರಿಸಿ ತರಬೇತಿ ಕೊಡಿಸಿದರು’ ಎಂದು ಅಪ್ಪನ ಬಗ್ಗೆ ಅಭಿಮಾನದಿಂದ ಹೇಳಿಕೊಂಡಿದ್ದಾರೆ.

‘ಅಷ್ಟೇ ಅಲ್ಲ. ಮನೆಯಿಂದ 23 ಕಿ.ಮೀ ದೂರದಲ್ಲಿರುವ ಸಂಜಯ್‌ ರಾಸ್ತೋಗಿ ಅಕಾಡೆಮಿಗೆ ಹೋಗಲು ನನ್ನ ಸೋದರಿಯರಲ್ಲಿ ಯಾರಾದರೂ ಒಬ್ಬರು ನನ್ನ ಜೊತೆಗೆ ಬರುವಂತೆ ನೋಡಿಕೊಳ್ಳುತ್ತಿದ್ದರು. ನಾನು ಒಬ್ಬನೇ ಹೋಗಬಲ್ಲೆ ಎನ್ನುವಷ್ಟು ವಿಶ್ವಾಸ ಮೂಡುವವರೆಗೂ ಅವರು ಅಷ್ಟು ಕಾಳಜಿ ತೋರುತ್ತಿದ್ದರು’ ಎಂದಿದ್ದಾರೆ.

11 ವರ್ಷದವರಿದ್ದಾಗ ತಾಯಿಯನ್ನು ಕಳೆದುಕೊಂಡ ಗರ್ಗ್‌, ಕ್ರಿಕೆಟ್‌ ಹಾದಿಯಲ್ಲಿಯೇ ಮುಂದುವರಿದದ್ದು ಸಾಮಾನ್ಯ ಸಂಗತಿಯಲ್ಲ. ‘ನನ್ನ ಈ ಸಾಧನೆ ನೋಡಲು ಅಮ್ಮ ಇರಬೇಕಿತ್ತು. ನಾನು 11 ವರ್ಷದವನಿದ್ದಾಗಲೇ ತಾಯಿ ತೀರಿಕೊಂಡರು. ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಆಗ ನಾನು ತುಂಬಾ ಚಿಕ್ಕವನು. ಆದರೆ, ನಾನು ಬೆಳೆದಂತೆ ಅದೊಂದು ದೊಡ್ಡ ಕುಳಿಯಾಗಿಯೇ (ಅಮ್ಮನ ಸಾವು ನನ್ನ ಬದುಕಿನಲ್ಲಿ) ಉಳಿಯಿತು. ಅದನ್ನು ತುಂಬಲು ಸಾಧ್ಯವಾಗಿಲ್ಲ. ನಾನು ಭಾರತ ತಂಡದಲ್ಲಿ ಆಡಬೇಕೆಂಬುದು ಅಮ್ಮನ ಕನಸಾಗಿತ್ತು. ಅಪ್ಪ ಹಾಗೂ ಅಕ್ಕಂದಿರು ನನ್ನ ಕಾಳಜಿ ವಹಿಸಿದ್ದಾರೆ. ಅಪ್ಪ ನನಗಾಗಿ ಇಡೀ ಜೀವನವನ್ನು ಸವೆಸಿದ್ದಾರೆ’ ಎಂದು ನೋವು ಹಂಚಿಕೊಂಡಿದ್ದಾರೆ.


ಪ್ರಿಯಂ ಗರ್ಗ್‌ –ಟ್ವಿಟರ್ ಚಿತ್ರ

ಭಾರತದ ಹೆಚ್ಚಿನ ಕ್ರಿಕೆಟಿಗರಂತೆ ಗರ್ಗ್‌ಗೂ ಸಚಿನ್‌ ಸ್ಫೂರ್ತಿಯಂತೆ. ‘ನನ್ನಿಷ್ಟದ ಆಟಗಾರನ ಆಟವನ್ನು ನೋಡಲು ಮನೆಯಲ್ಲಿ ಟಿವಿ ಇರಲಿಲ್ಲ. ಹಾಗಾಗಿ ಹತ್ತಿರದಲ್ಲಿದ್ದ ಶೋರೂಂ ಗಳ ಬಳಿ ಜನರ ನಡುವೆ ನಿಂತು ಕ್ರಿಕೆಟ್‌ ನೋಡುತ್ತಿದ್ದೆ. ತೆಂಡೂಲ್ಕರ್ ಅವರನ್ನು ಭೇಟಿಯಾಗುವುದು ನನ್ನ ಬಹುದಿನಗಳ ಆಸೆಯಾಗಿದೆ. ಅವರಿಂದ ಸಲಹೆ ಪಡೆಯಬೇಕು. ನಾನು ಕ್ರಿಕೆಟ್‌ ಆಡಲು ಕಾರಣ ಸಚಿನ್‌ ಸರ್‌. ಮುಂದೊಂದು ದಿನ ಭಾರತ ತಂಡದ ನೀಲಿ ಪೋಷಾಕು ಧರಿಸಿ ಕಣಕ್ಕಿಳಿಯಬೇಕಿದೆ’ ಎಂದು ನುಡಿಯುತ್ತಾರೆ. ಮುಂದೊಂದು ದಿನ ಟೀಂ ಇಂಡಿಯಾ ಪರ ಬ್ಯಾಟ್‌ ಬೀಸುವ ಉತ್ಸಾಹದಲ್ಲಿರುವ ಗರ್ಗ್‌ ಭಾವುಕರಾಗಿ ಹೇಳುತ್ತಾರೆ, ‘ನಾನು ಬದುಕ್ಕುತ್ತಿರುವ ಬದುಕು ನನ್ನಪ್ಪನ ಕನಸು’ ಎಂದು.

ಸದ್ಯ ನರೇಶ್‌ ಅವರು ಉತ್ತರ ಪ್ರದೇಶ ಆರೋಗ್ಯ ಇಲಾಖೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪ್ರಿಯಂ ಅನ್ನು ಬೆಳಗ್ಗೆ ಬೇಗನೇ ತರಬೇತಿ ಕೇಂದ್ರಕ್ಕೆ ಬಿಟ್ಟುಬರಬೇಕಿದ್ದ ಕಾರಣ, ಕೆಲದಿನಗಳ ಬಳಿಕ ಹಾಲು ಮಾರಾಟ ವ್ಯವಹಾರ ನಿಲ್ಲಿಸಿದೆ. ಶಾಲಾವಾಹನ ಮತ್ತು ನ್ಯೂಸ್‌ ಪೇಪರ್‌ ಹಂಚಿಕೆ ವಾಹನ ಚಾಲನೆ ಮಾಡಲು ನಿರ್ಧರಿಸಿದೆ’

‘ಪ್ರತಿ ರಾತ್ರಿ ನನ್ನ ವಾಹನದಲ್ಲಿಯೇ ಮಗನನ್ನು ಕರೆದುಕೊಂಡು ಹೋಗುತ್ತಿದ್ದೆ. ಜೊತೆಯಲ್ಲೇ ಊಟಮಾಡುತ್ತಿದ್ದೆವು. ಪತ್ರಿಕೆಗಳನ್ನು ತುಂಬಿಕೊಂಡು ನಗರದ ವಿವಿಧೆಡೆ ಹಾಗೂ ಹೊರವಲಯಕ್ಕೆ ತಲುಪಿಸುತ್ತಿದ್ದೆ. ಬೆಳಗಾಗುವುದರೊಳಗೆ ಮೈದಾನದ ಬಳಿ ಇರುತ್ತಿದ್ದೆವು. ಕ್ರಿಕೆಟ್‌ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಾನೇನು ಸಾಕಷ್ಟು ಓದಿಕೊಂಡಿಲ್ಲ. ಆದರೆ, ಒಂದು ದಿನ ರಾಹುಲ್‌ ದ್ರಾವಿಡ್‌ ಅವರನ್ನು ಭೇಟಿ ಮಾಡಿದೆ. ಅವರು ‘ಚಿಂತಿಸಬೇಡಿ’ ಎಂದು ಅಭಯ ನೀಡಿದರು. ಆಟವಾಡಲು ಮಗ ಬೇರೆಬೇರೆ ಸ್ಥಳಗಳಿಗೆ ತೆರಳುತ್ತಿದ್ದಾಗ ತುಂಬಾ ಖುಷಿಪಡುತ್ತಿದ್ದೆ’ ಎಂದು ಮೆಲುಕು ಹಾಕಿದ್ದಾರೆ.


ಪ್ರಿಯಂ ಗರ್ಗ್‌ –ಟ್ವಿಟರ್ ಚಿತ್ರ

ತರಬೇತಿ ಸಂಬರ್ಧದಲ್ಲಿ ಆಡಿದ ಸಾಕಷ್ಟು ಪಂದ್ಯಾವಳಿಗಳಲ್ಲಿ ಉತ್ತಮ ಆಟವಾಡಿದ್ದ ಗರ್ಗ್‌ ಮುಂದೆ ಉತ್ತರ ಪ್ರದೇಶದ 14ವರ್ಷದೊಳಗಿನವರ ಹಾಗೂ 16ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದರು. 2018-19ರಲ್ಲಿ ಉತ್ತರ ಪ್ರದೇಶ ಪರ ರಣಜಿ ಪಂದ್ಯಾವಳಿಯಲ್ಲಿಯೂ ಆಡಿದ ಗರ್ಗ್‌ 10 ಪಂದ್ಯಗಳ 15 ಇನಿಂಗ್ಸ್‌ಗಳಿಂದ 67.83ರ ಸರಾಸರಿಯಲ್ಲಿ ಒಟ್ಟು 814 ರನ್‌ ಕಲೆ ಹಾಕಿದ್ದರು. ಎರಡು ಶತಕ, ನಾಲ್ಕು ಅರ್ಧಶತಕ ಹಾಗೂ 1 ದ್ವಿಶತಕವನ್ನೂ ಬಾರಿಸಿ ಮಿಂಚಿದ್ದರು. ಇದೇ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿದ್ದ ಭುವನೇಶ್ವರ್‌ ಕುಮಾರ್‌ ಹಾಗೂ ಪ್ರವೀಣ್‌ ಕುಮಾರ್‌ ಅವರು ಭಾರತ ತಂಡದ ಮಧ್ಯಮ ವೇಗಿಗಳಾಗಿ ಖ್ಯಾತಿ ಗಳಿಸಿದ್ದಾರೆ.

ಪ್ರಿಯಂ ಕುರಿತು ಕೋಚ್‌ ರಾಸ್ತೋಗಿ ಅವರು, ಆತನ(ಪ್ರಿಯಂ) ಚುರುಕುತನ ಇಷ್ಟು ಎತ್ತರಕ್ಕೆ ಏರಿಸಿದೆ. ಆತ ಪ್ರವೀಣ್‌ ಹಾಗೂ ಭುವನೇಶ್ವರ್‌ ಹಾದಿಯಲ್ಲಿಯೇ ಸಾಗಲು ಬಯಸಿದ್ದ. ಆದರೆ, ಆತನ ಬ್ಯಾಟಿಂಗ್‌ನಲ್ಲಿ ಶೈಲಿಯಲ್ಲಿ ಸಹಜತೆ ಇತ್ತು. ಹೀಗಾಗಿ ಕೆಲವು ದಿನಗಳ ಬಳಿಕ ಆತನಿಗೆ ಬ್ಯಾಟಿಂಗ್‌ನತ್ತ ಗಮನಹರಿಸುವಂತೆ ಸಲಹೆ ನೀಡಿದ್ದೆ. ನಮ್ಮಲ್ಲಿಗೆ ಸೇರಿದ ಕೇವಲ ಒಂದೇ ವರ್ಷದಲ್ಲಿ ಪ್ರಿಯಂ, 14 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು