ಭಾನುವಾರ, ಫೆಬ್ರವರಿ 23, 2020
19 °C

U19 World Cup | ಪಾಕ್ ವಿರುದ್ಧ 10 ವಿಕೆಟ್ ಜಯ: ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಷೆಫ್‌ಸ್ಟ್ರೂಮ್‌: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಹತ್ತು ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ ಭಾರತದ ಸಮರ್ಥ ಬೌಲಿಂಗ್‌ ದಾಳಿ ಎದುರು ಕಂಗೆಟ್ಟಿತು. ಈ ತಂಡದ ಹೈದರ್‌ ಅಲಿ ಮತ್ತು ನಾಯಕ ರೊಹೇಲ್‌ ನಜೀರ್‌ ಹೊರತು ಪಡಿಸಿ ಉಳಿದವರು ಪ್ರಿಯಂ ಗರ್ಗ್ ಪಡೆಯ ಬೌಲರ್‌ಗಳೆದುರು ನಿರುತ್ತರರಾದರು.

ಅಲಿ 56ರನ್‌ ಗಳಿಸಿದರೆ, ನಜೀರ್‌ 62 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮದ್‌ ಹ್ಯಾರಿಸ್‌ 21 ರನ್‌ ಗಳಿಸಿದರು. ಇದರಿಂದಾಗಿ ಪಾಕಿಸ್ತಾನ 170ರ ಗಡಿ ದಾಟಲು ಸಾಧ್ಯವಾಯಿತು. ಉಳಿದವರು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ 172 ರನ್ ಗಳಿಸಿ 43.1ನೇ ಓವರ್‌ನಲ್ಲಿ ಆಲೌಟ್‌ ಆಯಿತು.

ಭಾರತ ಪರ ಉತ್ತಮ ದಾಳಿ ಸಂಘಟಿಸಿದ ಸುಶಾಂತ್ ಮಿಶ್ರಾ 3, ಕಾರ್ತಿಕ್‌ ತ್ಯಾಗಿ ಮತ್ತು ರವಿ ಬಿಷ್ಣೋಯಿ ತಲಾ ಎರಡು ವಿಕೆಟ್‌ ಪಡೆದರು. ಅಥರ್ವ ಅಂಕೋಲೆಕರ್‌ ಮತ್ತು ಯಶಸ್ವಿ ಜೈಸ್ವಾಲ್‌ ಒಂದೊಂದು ವಿಕೆಟ್‌ ಕಿತ್ತರು.

ಈ ಮೊತ್ತವನ್ನು ಒಂದೂ ವಿಕೆಟ್‌ ಕಳೆದುಕೊಳ್ಳದೆ ತಲುಪಿದ ಭಾರತ, ಫೈನಲ್‌ ಪ್ರವೇಶಿಸಿತು. ಪಾಕ್‌ ತಂಡ ಕಳೆದ ಬಾರಿಯೂ ಭಾರತ ಎದುರು ಸೋತೂ ಟೂರ್ನಿಯಿಂದ ಹೊರನಡೆದಿತ್ತು.

ಯಶಸ್ವಿ–ಸಕ್ಸೇನಾ ಜೊತೆಯಾಟ
ಪಾಕಿಸ್ತಾನದ ಬಲಿಷ್ಠ ಬೌಲಿಂಗ್‌ ದಾಳಿಯನ್ನು ನಿರಾಯಾಸವಾಗಿ ಎದುರಿಸಿದ ಯಶಸ್ವಿ ಜೈಸ್ವಾಲ್‌ ಮತ್ತು ದಿವ್ಯಾಂಶ್‌ ಸಕ್ಸೇನಾ ಜೋಡಿ ಭಾರತಕ್ಕೆ 10 ವಿಕೆಟ್‌ ಜಯ ತಂದುಕೊಟ್ಟಿತು. ಇವರ ಜೊತೆಯಾಟದ ಬಲದಿಂದ ಭಾರತ ಕೇವಲ 35.2 ಓವರ್‌ಗಳಲ್ಲಿ 176 ರನ್‌ ಗಳಿಸಿತು.

ಜೈಸ್ವಾಲ್‌ 113 ಎಸೆತಗಳಲ್ಲಿ 8 ಬೌಂಡರಿ 4 ಸಿಕ್ಸರ್ ಸಹಿತ 105 ರನ್‌ ಗಳಿಸಿದರೆ, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಸಕ್ಸೇನಾ 99 ಎಸೆತಗಳಲ್ಲಿ 59 ರನ್‌ ಕಲೆಹಾಕಿದರು.

ಈ ಶತಕದೊಂದಿಗೆ ಆಡಿರುವ ಐದು ಪಂದ್ಯಗಳಲ್ಲಿ 312 ರನ್‌ ಗಳಿಸಿರುವ ಜೈಸ್ವಾಲ್‌, ಈ ಬಾರಿ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರದರು. 6 ಪಂದ್ಯಗಳಿಂದ 286 ರನ್ ಗಳಿಸಿರುವ ಶ್ರೀಲಂಕಾದ ರಶಂತಾ ಎರಡನೇ ಸ್ಥಾನಕ್ಕೆ ಜಾರಿದರು.

ಇದನ್ನೂ ಓದಿ: ಹಾಲು ಮಾರಾಟಗಾರನ ಮಗ ಪ್ರಿಯಂ ಗರ್ಗ್, ವಿಶ್ವಕಪ್ ಕ್ರಿಕೆಟ್ ತಂಡದ ನಾಯಕನಾದ ಕಥೆ

ಭಾರತ ಸೆಮಿಗೆ ತಲುಪಿದ್ದು
ಶ್ರೀಲಂಕಾ ವಿರುದ್ಧ 90 ರನ್‌ ಜಯ (ಗುಂಪು ಹಂತ)
ಜಪಾನ್‌ ವಿರುದ್ಧ 10 ವಿಕೆಟ್‌ ಜಯ (ಗುಂಪು ಹಂತ)
ನ್ಯೂಜಿಲೆಂಡ್‌ ವಿರುದ್ಧ 44 ರನ್‌ ಜಯ (ಗುಂಪು ಹಂತ)
ಆಸ್ಟ್ರೇಲಿಯಾ ವಿರುದ್ಧ 74 ರನ್ ಜಯ (ಕ್ವಾರ್ಟರ್‌ ಫೈನಲ್‌)

ಪಾಕಿಸ್ತಾನ ಸೆಮಿಗೆ ತಲುಪಿದ್ದು
ಸ್ಕಾಟ್‌ಲೆಂಡ್‌ ವಿರುದ್ಧ 7 ವಿಕೆಟ್‌ ಜಯ (ಗುಂಪು ಹಂತ)
ಜಿಂಬಾಬ್ವೆ ವಿರುದ್ಧ 38 ರನ್‌ ಜಯ (ಗುಂಪು ಹಂತ)
ಬಾಂಗ್ಲಾದೇಶ ವಿರುದ್ಧದ ಪಂದ್ಯ ರದ್ದು (ಗುಂಪು ಹಂತ)
ಅಫ್ಗಾನಿಸ್ತಾನ ವಿರುದ್ಧ 6 ವಿಕೆಟ್‌ ಜಯ (ಕ್ವಾರ್ಟರ್‌ ಫೈನಲ್‌)

ಇದನ್ನೂ ಓದಿ: 

ಇದುವರೆಗೆ 10 ಬಾರಿ ಮುಖಾಮುಖಿ
19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ 10 ಬಾರಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ ಐದು ಸಲ ಗೆಲುವು ಕಂಡಿವೆ. ಕಳೆದ ಮೂರೂ ಟೂರ್ನಿಗಳಲ್ಲಿ ಮೇಲುಗೈ ಸಾಧಿಸಿದ್ದ ಭಾರತ, ಈ ಬಾರಿಯೂ ಗೆದ್ದು ಜಯದ ಓಟ ಮುಂದುವರಿಸಿದೆ.

1988: ಪಾಕಿಸ್ತಾನಕ್ಕೆ 68 ರನ್‌ ಜಯ
1998: ಭಾರತಕ್ಕೆ 5 ವಿಕೆಟ್‌ ಜಯ
2002: ಪಾಕಿಸ್ತಾನಕ್ಕೆ 2 ವಿಕೆಟ್‌ ಜಯ
2004: ಪಾಕಿಸ್ತಾನಕ್ಕೆ 5 ವಿಕೆಟ್‌ ಜಯ (ಸೆಮಿಫೈನಲ್‌)
2006: ಪಾಕಿಸ್ತಾನಕ್ಕೆ 38 ರನ್‌ ಗೆಲುವು (ಫೈನಲ್‌)
2010: ಪಾಕಿಸ್ತಾನಕ್ಕೆ 2 ವಿಕೆಟ್‌ ಜಯ (ಕ್ವಾರ್ಟರ್‌ ಪೈನಲ್‌)
2012: ಭಾರತಕ್ಕೆ 1 ವಿಕೆಟ್‌ (ಕ್ವಾರ್ಟರ್‌ ಪೈನಲ್‌)
2014: ಭಾರತಕ್ಕೆ 40 ರನ್‌ ಗೆಲುವು
2018: ಭಾರತಕ್ಕೆ 203 ರನ್‌ ಜಯ (ಸೆಮಿಫೈನಲ್‌)
2020: ಭಾರತಕ್ಕೆ 10 ವಿಕೆಟ್‌ ಜಯ (ಸೆಮಿಫೈನಲ್‌)

ಇದನ್ನೂ ಓದಿ: ಐಪಿಎಲ್‌ ಹರಾಜು: ಕೋಟ್ಯಾಧಿಪತಿಗಳಾದ ಪಾನಿಪುರಿ ಹುಡುಗ, ಬಸ್ ಚಾಲಕನ ಮಗ

ಭಾರತ 2000, 2008, 2012 ಮತ್ತು 2018ರಲ್ಲಿ ಚಾಂಪಿಯನ್‌ ಆಗಿದೆ.
ಪಾಕಿಸ್ತಾನ 2004 ಹಾಗೂ 2006ರಲ್ಲಿ ಚಾಂಪಿಯನ್‌ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು