ಭಾನುವಾರ, ಫೆಬ್ರವರಿ 23, 2020
19 °C

‘ಕೊಹ್ಲಿಯ ಟೀಂ ಇಂಡಿಯಾ, ಇಮ್ರಾನ್ ನೇತೃತ್ವದ ಪಾಕ್ ತಂಡವನ್ನು ನೆನಪಿಸುತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು ಇಮ್ರಾನ್‌ ಖಾನ್‌ ನಾಯಕತ್ವದ ಪಾಕಿಸ್ತಾನ ತಂಡವನ್ನು ನೆನಪಿಸುತ್ತಿದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ವಿರುದ್ಧದ ಟಿ20 ಸರಣಿ ಬಳಿಕ ಟ್ವೀಟ್‌ ಮಾಡಿರುವ ಸಂಜಯ್‌, ನ್ಯೂಜಿಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದ ಪ್ರದರ್ಶನವು ಇಮ್ರಾನ್‌ ಖಾನ್‌ ನಾಯಕತ್ವದ ಪಾಕಿಸ್ತಾನವನ್ನು ನೆನಪಿಸುತ್ತಿದೆ. ಇಮ್ರಾನ್‌ ನಾಯಕತ್ವದ ಪಾಕ್‌ ಸೋಲುವ ಹಂತದಲ್ಲಿದ್ದಾಗಲೂ ಗೆಲುವಿಗೆ ಇರುವ ವಿಭಿನ್ನ ಹಾದಿಗಳನ್ನು ಕಂಡುಕೊಳ್ಳುತ್ತಿತ್ತು. ಅದು ಸಾಧ್ಯವಾಗುವುದು ಆತ್ಮವಿಶ್ವಾಸವಿದ್ದಾಗ ಮಾತ್ರ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ವಿಕೆಟ್‌ ಕೀಪರ್‌–ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಅವರನ್ನೂ ಶ್ಲಾಘಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಆತಿಥೇಯ ತಂಡದ ವಿರುದ್ಧ ಭಾನುವಾರ ಮುಕ್ತಾಯವಾದ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿದೆ. ಮೊದಲ ಪಂದ್ಯದಲ್ಲಿ ಬೃಹತ್‌ ಮೊತ್ತ (204) ಬೆನ್ನಟ್ಟಿ ಗೆದ್ದಿದ್ದ ಕೊಹ್ಲಿ ಪಡೆ, ಎರಡನೇ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತ್ತು. ಮೂರು ಮತ್ತು ನಾಲ್ಕನೇ ಪಂದ್ಯಗಳು ಭಾರತದ ಕೈ ಜಾರುವ ಹಂತದಲ್ಲಿ ಟೈ ಆಗಿದ್ದವು. ಆದರೆ, ಆ ಎರಡೂ ಪಂದ್ಯಗಳನ್ನು ಕೊಹ್ಲಿ ಪಡೆ ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿತ್ತು.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್‌ ಖಾದಿರ್‌ ಅವರೂ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ್ದರು. ‘ಕೊಹ್ಲಿ ಮತ್ತು ಇಮ್ರಾನ್‌ ಇಬ್ಬರೂ ಮುಂದೆ ನಿಂತು ತಂಡ ಮುನ್ನಡೆಸುವವರು. ಕೊಹ್ಲಿ,  ಜವಾಬ್ದಾರಿಯನ್ನು ಹೊತ್ತು ಆಡುತ್ತಾರೆ. ಅದನ್ನೇ ತಂಡದ ಇತರ ಆಟಗಾರರಿಂದಲೂ ಬಯಸುತ್ತಾರೆ. ಪಾಕ್‌ ನಾಯಕ ಇಮ್ರಾನ್‌ ಖಾನ್‌ಗೆ ತಂಡದ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತರುವ ಸಾಮರ್ಥ್ಯ ಇತ್ತು. ಕೊಹ್ಲಿ ಆ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಆದರೆ, ಆದೇ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೆಚ್ಚು (33) ಗೆಲುವು ತಂದುಕೊಟ್ಟ ನಾಯಕ ಎನಿಸಿರುವ ಕೊಹ್ಲಿ, ಟಿ20ಯಲ್ಲಿ ಹತ್ತು ದ್ವಿಪಕ್ಷೀಯ ಸರಣಿ ಗೆದ್ದ ನಾಯಕ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು ಪ್ಲೆಸಿ 9 ಸರಣಿ ಗೆದ್ದು ದಾಖಲೆ ಬರೆದಿದ್ದರು.

ಪಾಕಿಸ್ತಾನ ತಂಡ ಇಮ್ರಾನ್‌ ಖಾನ್‌ ನಾಯಕತ್ವದಲ್ಲಿ 1992ರ ವಿಶ್ವಕಪ್‌ ಚಾಂಪಿಯನ್‌ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು