ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS T20: ಚುಟುಕು ಕದನದಲ್ಲಿ ಭಾರತಕ್ಕೆ ರೋಚಕ ಗೆಲುವು

Last Updated 4 ಡಿಸೆಂಬರ್ 2020, 14:42 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ:ಶುಕ್ರವಾರ ಇಲ್ಲಿನ ಮನುಕಾ ಓವಲ್‌ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಮೊದಲು ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜ ಮಿಂಚಿನ ಆಟ ಪ್ರದರ್ಶಿಸಿದರೆ ಬಳಿಕ ಬೌಲಿಂಗ್‌ನಲ್ಲಿ ಬದಲಿ ಆಟಗಾರ ಯಜುವೇಂದ್ರ ಚಹಲ್ ಹಾಗೂ ಡೆಬ್ಯು ವೇಗಿ ಟಿ ನಟರಾಜನ್ ಪರಿಣಾಮಕಾರಿ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ (51) ಹಾಗೂ ರವೀಂದ್ರ ಜಡೇಜ 23 ಎಸೆತಗಳಲ್ಲಿ ಬಿರುಸಿನ 44* ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಬಳಿಕ 162 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್, ಯಜುವೇಂದ್ರ ಚಹಲ್ ಹಾಗೂ ಟಿ. ನಟರಾಜನ್ ಮಾರಕ ದಾಳಿಗೆ ಕುಸಿದು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 11 ರನ್ ಅಂತರದ ಗೆಲುವು ದಾಖಲಿಸಿದೆ. ಚಹಲ್ ಹಾಗೂ ನಟರಾಜನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ರಾಹುಲ್ ಫಿಫ್ಟಿ, ಜಡೇಜ ಮಿಂಚು; ಆಸೀಸ್‌ಗೆ 162 ರನ್ ಗುರಿ
ಶುಕ್ರವಾರ ಇಲ್ಲಿನ ಮನುಕಾ ಓವಲ್‌ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ, ಬಲಗೈ ಆರಂಭಿಕ ಕೆಎಲ್ ರಾಹುಲ್ (51) ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ರವೀಂದ್ರ ಜಡೇಜ (44*) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಟೀಮ್ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ಏಕದಿನ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿದ ಅನುಭವಿ ಶಿಖರ್ ಧವನ್‌ಗೆ ಅದೇ ಫಾರ್ಮ್ ಮುಂದುವರಿಸಲಾಗಲಿಲ್ಲ. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಧವನ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.

ನಾಯಕ ವಿರಾಟ್ ಕೊಹ್ಲಿಗೂ (9) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಅಲ್ಲದೆ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಇನ್ನೊಂದೆಡೆ ಐಪಿಎಲ್‌ನ ಉತ್ತಮ ಫಾರ್ಮ್ ಮುಂದುವರಿಸಿದ ಕೆಎಲ್ ರಾಹುಲ್, ವಿಕೆಟ್‌ನ ಮತ್ತೊಂದು ತುದಿಯಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಸಂಜು ಸ್ಯಾಮ್ಸನ್ ಸಾಥ್ ನೀಡಿದರು.

ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ರಾಹುಲ್-ಸಂಜು ಜೋಡಿ ಕ್ರೀಸಿನಲ್ಲಿದ್ದಾಗ ಉತ್ತಮ ಮೊತ್ತ ಪೇರಿಸುವ ಭರವಸೆ ಮೂಡಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಮೊಯಿಸೆಸ್ ಹೆನ್ರಿಕ್ಸ್ ಆಘಾತ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದರು. ಇದಾದ ಬೆನ್ನಲ್ಲೇ ಮನೀಷ್ ಪಾಂಡೆ (2) ಅವರಿಗೆ ಆ್ಯಡಂ ಜಂಪಾ ಪೆವಿಲಿಯನ್ ಹಾದಿ ತೋರಿಸಿದರು.

ಅತ್ತ ಉತ್ತಮವಾಗಿ ಆಡುತ್ತಿದ್ದ ರಾಹುಲ್ ಪತನದೊಂದಿಗೆ 13.5 ಓವರ್‌ಗಳಲ್ಲೇ 92 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. 40 ಎಸೆತಗಳನ್ನು ಎದುರಿಸಿದ ರಾಹುಲ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಇಲ್ಲಿಂದ ಬಳಿಕವೂ ಭಾರತ ಚೇತರಿಸಿಕೊಳ್ಳಲಿಲ್ಲ. ಮೊಯಿಸೆಸ್ ಹೆನ್ರಿಕ್ಸ್ ಭಾರತವನ್ನು ಮಾರಕವಾಗಿ ಕಾಡಿದರು. ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ಬಳಿಕ ಹಾರ್ದಿಕ್ ಪಾಂಡ್ಯ ಹೊರದಬ್ಬುವ ಮೂಲಕ ಭಾರತದ ಓಟಕ್ಕೆ ಬ್ರೇಕ್ ಹಾಕಿದರು. 15 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ ಔಟಾದರು.

ಜಡ್ಡು ಅಬ್ಬರ...
ಕೊನೆಯ ಹಂತದಲ್ಲಿ ರವೀಂದ್ರ ಜಡೇಜ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭಾರತವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಜೋಶ್ ಹ್ಯಾಜಲ್‌ವುಡ್ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 23 ರನ್ ಕಬಳಿಸಿದ ಜಡೇಜ ಗಮನ ಸೆಳೆದರು.

ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತು. 23 ಎಸೆತಗಳನ್ನು ಎದುರಿಸಿದ ಜಡೇಜ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 7 ರನ್ ಗಳಿಸಿದರು.

ಆಸೀಸ್ ಪರ ಮೊಯಿಸೆಸ್ ಹೆನ್ರಿಕ್ಸ್ ಮೂರು ಮತ್ತು ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಜಡೇಜ ಬದಲಿಗೆ ಚಹಲ್...
ಭಾರತ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬಡಿಯಿತು. ಪರಿಣಾಮ concussion substitute ನಿಯಮದನ್ವಯ ರವೀಂದ್ರ ಜಡೇಜ ಬದಲಿಗೆ ಯಜುವೇಂದ್ರ ಚಹಲ್ ಅವರನ್ನು ಸೇರ್ಪಡೆಗೊಳಿಸಲಾಯಿತು. ಇದು ಆಸೀಸ್ ತಂಡದ ಅಸಮಾಧಾನಕ್ಕೂ ಕಾರಣವಾಯಿತು.

ದ್ವಿತಿಯಾರ್ಧದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುವ ರವೀಂದ್ರ ಜಡೇಜ ಸೇವೆಯಿಂದ ಭಾರತ ವಂಚಿತವಾಯಿತು.

ಆಸೀಸ್ ಬಿರುಸಿದ ಆರಂಭ...
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ ಹಾಗೂ ಡಾರ್ಸಿ ಶಾಟ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಪರಿಣಾಮ 5.5 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. ಈ ಸಂದರ್ಭದಲ್ಲಿ ಭಾರತೀಯ ಪಾಳೇಯದಲ್ಲಿ ಆತಂಕ ಮಡುಗಟ್ಟಿತ್ತು.

ಈ ನಡುವೆ ರವೀಂದ್ರ ಜಡೇಜಾ ಬದಲಿ ಆಟಗಾರನ ರೂಪದಲ್ಲಿ ಕಣಕ್ಕಿಳಿದ ಯಜುವೇಂದ್ರ ಚಹಲ್ ಅಪಾಯಕಾರಿ ಫಿಂಚ್ ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದರು. ಆ ವೇಳೆಯಾಗುವಾಗ ಡಾರ್ಸಿ ಶಾರ್ಟ್ ಜೊತೆ ಸೇರಿದ್ದ ಫಿಂಚ್ 7.4 ಓವರ್‌ಗಳಲ್ಲಿ 56 ರನ್‌ಗಳ ಜೊತೆಯಾಟ ನೀಡಿದರು. 26 ಎಸೆತಗಳನ್ನು ಎದುರಿಸಿದ ಆ್ಯರನ್ ಫಿಂಚ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದರು.

ಚಹಲ್ ಡಬಲ್ ಆಘಾತ...
ಮೊದಲು ಆ್ಯರನ್ ಫಿಂಚ್ ಹೊರದಬ್ಬಿದ ಯಜುವೇಂದ್ರ ಚಹಲ್, ಇನ್ ಫಾರ್ಮ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರಿಗೂ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಡಬಲ್ ಆಘಾತ ನೀಡಿದರು. ಚಹಲ್ ದಾಳಿಯಲ್ಲಿ ಸಂಜು ಸ್ಯಾಮ್ಸನ್ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು. 9 ಎಸೆತಗಳನ್ನು ಎದುರಿಸಿದ ಸ್ಮಿತ್ ಸಿಕ್ಸರ್ ನೆರವಿನಿಂದ 12 ರನ್ ಗಳಿಸಿದರು.

ನಟರಾಜನ್ ಚೊಚ್ಚಲ ವಿಕೆಟ್...
ಇತ್ತೀಚೆಗಷ್ಟೇ ಏಕದಿನ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಖಾತೆ ತೆರೆದಿರುವ ಎಡಗೈ ವೇಗಿ ಟಿ ನಟರಾಜನ್, ಪದಾರ್ಪಣೆಯ ಟಿ20 ಪಂದ್ಯದಲ್ಲೇ ಚೊಚ್ಚಲ ವಿಕೆಟ್ ಪಡೆಯುವ ಮೂಲಕ ಪರಿಣಾಮಕಾರಿ ಎನಿಸಿಕೊಂಡರು. ಅತ್ಯಂತ ಅಪಾಯಕಾರಿ ಗ್ಲೆನ್ ಮ್ಯಾಕ್ಸ್‌ವೆಲ್ (2) ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಸಿಲುಕಿಸಿದ ನಟರಾಜನ್, ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ನೆರವಾದರು.

ಉತ್ತಮವಾಗಿ ಆಡುತ್ತಿದ್ದ ಡಾರ್ಸಿ ಶಾರ್ಟ್ ವಿಕೆಟ್ ಕಬಳಿಸುವ ಮೂಲಕ ನಟರಾಜನ್ ಮಗದೊಮ್ಮೆ ಟೀಮ್ ಇಂಡಿಯಾ ಪಾಳೇಯದಲ್ಲಿ ಮಂದಹಾಸ ಮೂಡಿಸಿದರು. 38 ಎಸೆತಗಳನ್ನು ಎದುರಿಸಿದ ಶಾರ್ಟ್ ಮೂರು ಬೌಂಡರಿಗಳಿಂದ 34 ರನ್ ಗಳಿಸಿದರು.

ಅಂತಿಮ ಐದು ಓವರ್‌ಗಳಲ್ಲಿ ಆಸೀಸ್ ಗೆಲುವಿಗೆ 49 ರನ್‌ಗಳ ಅವಶ್ಯಕತೆಯಿತ್ತು. ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ (7) ಹೊರದಬ್ಬಿದ ಚಹಲ್ ಪಂದ್ಯದಲ್ಲಿ ಮೂರನೇ ವಿಕೆಟ್ ಪಡೆದರು. ಅಲ್ಲದೆ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 25 ರನ್ ಮಾತ್ರ ಬಿಟ್ಟುಕೊಟ್ಟರು.

ಈ ನಡುವೆ ಮೊಯಿಸೆಸ್ ಹೆನ್ರಿಕ್ಸ್ ಬ್ಯಾಟಿಂಗ್‌ನಲ್ಲೂ ಭಾರತವನ್ನು ಕಾಡಿದರು. 20 ಎಸೆತಗಳನ್ನು ಎದುರಿಸಿದ ಹೆನ್ರಿಕ್ಸ್ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 30 ರನ್ ಗಳಿಸಿ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಇವರನ್ನು ದೀಪಕ್ ಚಹರ್ ಹೊರದಬ್ಬುವುದರೊಂದಿಗೆ ಭಾರತ ಗೆಲುವು ಖಚಿತಪಡಿಸಿಕೊಂಡಿತು.

ಇನ್ನುಳಿದಂತೆ ಸೀನ್ ಅಬಾಟ್ ಹಾಗೂ ಮಿಚೆಲ್ ಸ್ವೆಪ್ಸನ್ ಅಜೇಯ ತಲಾ 12 ರನ್ ಗಳಿಸಿದರೂ ಪಂದ್ಯವನ್ನು ಗೆಲ್ಲಿಸಲಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ಏಳು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 11 ರನ್ ಅಂತರದ ರೋಚಕ ಗೆಲುವು ಬಾರಿಸಿತು.

ಭಾರತದ ಪರ ಯಜುವೇಂದ್ರ ಚಹಲ್ ಹಾಗೂ ಟಿ ನಟರಾಜನ್ ತಲಾ ಮೂರು ವಿಕೆಟ್ ಕಬಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಲ್ಲದೆ ಚಹಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನವಾದರು.

ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ಕೆ; ನಟರಾಜನ್ ಡೆಬ್ಯು...

ಈ ಮೊದಲು ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು.

ಏಕದಿನ ಸರಣಿ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಯುವ ಎಡಗೈ ವೇಗದ ಬೌಲರ್ ಟಿ. ನಟರಾಜನ್ ಟಿ20 ಕ್ರಿಕೆಟ್‌ಗೂ ಡೆಬ್ಯು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬುಮ್ರಾಗೆ ವಿಶ್ರಾಂತಿ; ಸಂಜು, ಚಹರ್ ಇನ್
ಪ್ರಮುಖವಾಗಿ ಮುಂಬರುವ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಈ ಮಧ್ಯೆ ಏಕದಿನ ಸರಣಿ ವೇಳೆ ಅವಕಾಶ ವಂಚಿತವಾಗಿರುವ ಕೇರಳ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಟಿ20 ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಆಡುವ ಬಳಗ ಇಂತಿದೆ:
ಭಾರತ: ಶಿಖರ್ ಧವನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ನಾಯಕ), ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಟಿ ನಟರಾಜನ್

ಆಸ್ಟ್ರೇಲಿಯಾ: ಡಾರ್ಸಿ ಶಾರ್ಟ್, ಆ್ಯರನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಯಿಸಿಸ್ ಹೆನ್ರಿಕ್ಸ್, ಮಿಚ್ ಸ್ವೆಪ್‌ಸನ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT