ಮೆಲ್ಬರ್ನ್: ಜಸ್ಪ್ರೀತ್ ಬೂಮ್ರಾ ಬಿರುಗಾಳಿ ಮತ್ತು ಆರ್. ಅಶ್ವಿನ್ ಸ್ಪಿನ್ ದಾಳಿಯ ಹದವಾದ ಮಿಶ್ರಣದ ಮುಂದೆ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆ ದೂಳೀಪಟವಾಯಿತು.

ಶನಿವಾರ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಳಗವು 72.3 ಓವರ್ಗಳಲ್ಲಿ 195 ರನ್ಗಳಿಗೆ ಆಲೌಟ್ ಆಯಿತು. ಬೂಮ್ರಾ (56ಕ್ಕೆ4) ಮತ್ತು ಅಶ್ವಿನ್ (35ಕ್ಕೆ3) ಬ್ಯಾಟಿಂಗ್ ಬೆನ್ನಲುಬನ್ನು ಮುರಿದರು. ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ ಕೂಡ ಮಿಂಚಿದರು. ಭರವಸೆಯ ಬ್ಯಾಟ್ಸ್ಮನ್ ಮಾರ್ನಸ್ ಲಾಬುಷೇನ್ ಮತ್ತು ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಪಡೆದ ಸಿರಾಜ್ ಹೋದ ತಿಂಗಳು ನಿಧನರಾಗಿದ್ದ ತಮ್ಮ ತಂದೆಗೆ ಅರ್ಪಿಸಿದರು.

ಪಿತೃತ್ವ ರಜೆಯ ಮೇಲೆ ತೆರಳಿರುವ ವಿರಾಟ್ ಕೊಹ್ಲಿ ಬದಲು ನಾಯಕತ್ವ ವಹಿಸಿರುವ ಅಜಿಂಕ್ಯ ರಹಾನೆ ಬಳಗವು ದಿನದಾಟದ ಅಂತ್ಯಕ್ಕೆ 11 ಓವರ್ಗಳಲ್ಲಿ 1 ವಿಕೆಟ್ಗೆ 36 ರನ್ ಗಳಿಸಿತು. ತಮ್ಮ ಚೊಚ್ಚಲ ಟೆಸ್ಟ್ ಆಡುತ್ತಿರುವ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ (ಬ್ಯಾಟಿಂಗ್ 28; 38ಎ) ಮತ್ತು ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 7; 23ಎ) ಕ್ರೀಸ್ನಲ್ಲಿದ್ದಾರೆ. ಮಯಂಕ್ ಅಗರವಾಲ್ ಮೊದಲ ಓವರ್ನ ಕೊನೆ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಖಾತೆ ತೆರೆಯದೇ ಮರಳಿದರು. ಈ ಹಂತದಲ್ಲಿ ಗಿಲ್ ಮತ್ತು ಪೂಜಾರ ಹೆಚ್ಚಿನ ಪತನವಾಗದಂತೆ ತಡೆದರು.

ಬೂಮ್ರಾ–ಅಶ್ವಿನ್ ಜೊತೆಯಾಟ: ಅನುಭವಿ ಬೌಲರ್ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗದ ಸಂಪೂರ್ಣ ಹೊಣೆ ನಿಭಾಯಿಸಿದ ಜಸ್ಪ್ರೀತ್ ಬೂಮ್ರಾ ಆಸ್ಟ್ರೇಲಿಯಾ ಬ್ಯಾಟಿಂಗ್ನ ತಲೆ ಮತ್ತು ಬಾಲ ಕತ್ತರಿಸಿದರು.

ಟಾಸ್ ಗೆದ್ದು ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಐದನೇ ಓವರ್ನಲ್ಲಿ ಪೆಟ್ಟುಕೊಟ್ಟ ಬೂಮ್ರಾ, ಜೋ ಬರ್ನ್ಸ್ ವಿಕೆಟ್ ಕಬಳಿಸಿದರು. ಅವರಿಗೆ ತಕ್ಕ ಜೊತೆ ನೀಡಿದ ಅಶ್ವಿನ್ 13ನೇ ಓವರ್ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಉರುಳಿಸಿದರು. ತಮ್ಮ ನಂತರದ ಓವರ್ನಲ್ಲಿ ಸ್ಟೀವನ್ ಸ್ಮಿತ್ಗೆ ಖಾತೆ ತೆರೆಯಲು ಬಿಡದ ಅಶ್ವಿನ್ ಕೇಕೆ ಹಾಕಿದರು. ಸ್ಮಿತ್ ಇದೇ ಮೊದಲ ಸಲ ಭಾರತದ ಎದುರು ಸೊನ್ನೆ ಸುತ್ತಿದರು. ಇದರಿಂದಾಗಿ ಊಟಕ್ಕೂ ಮುನ್ನವೇ ಮೂರು ವಿಕೆಟ್ಗಳು ಪತನವಾದವು.

ವಿರಾಮದ ನಂತರ ಟ್ರಾವಿಸ್ ಹೆಡ್ (38; 92ಎ) ವಿಕೆಟ್ ಕಬಳಿಸಿದ ಬೂಮ್ರಾ ಮತ್ತೆ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಇನ್ನೊಂದೆಡೆ ಗಟ್ಟಿಯಾಗಿ ನಿಂತು ಆಡುತ್ತಿದ್ದ ಲಾಬುಷೇನ್ (48; 132ಎ) ಅರ್ಧಶತಕದ ಹೊಸ್ತಿಲಲ್ಲಿದ್ದಾಗ ಸಿರಾಜ್ ತಮ್ಮ ಮೊದಲ ಬೇಟೆಯಾಡಿದರು.

ನಾಯಕ ಟಿಮ್ ಪೇನ್ಗೂ ಪೆವಿಲಿಯನ್ ದಾರಿ ತೋರಿಸಿದ ಅಶ್ವಿನ್ ಸಂಭ್ರಮಿಸಿದರು. ಪ್ಯಾಟ್ ಕಮಿನ್ಸ್ ಅವರನ್ನು ರವೀಂದ್ರ ಜಡೇಜ ಔಟ್ ಮಾಡಿದರೆ, ಮಿಚೆಲ್ ಸ್ಟಾರ್ಕ್ ಮತ್ತು ನೇಥನ್ ಲಯನ್ (20 ರನ್) ವಿಕೆಟ್ಗಳನ್ನು ಬೂಮ್ರಾ ಕಬಳಿಸಿದರು.

ಭಾನುವಾರ ಮೊದಲ ಅವಧಿಯಲ್ಲಿ ವಿಕೆಟ್ ಪತನವಾಗದಂತೆ ತಡೆದು ಆಡಿದರೆ ಭಾರತಕ್ಕೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯ ಜೊತೆಗೆ ದೊಡ್ಡ ಮೊತ್ತ ಗಳಿಸುವ ಅವಕಾಶ ಇದೆ.

ರಹಾನೆ ನಾಯಕತ್ವಕ್ಕೆ ಶಹಭಾಸಗಿರಿ
ಸೂಕ್ತ ಸಮಯಕ್ಕೆ ಬೌಲಿಂಗ್ನಲ್ಲಿ ಬದಲಾವಣೆಗಳನ್ನು ಮಾಡುವ ಚಾಕಚಕ್ಯತೆಯನ್ನು ಅಜಿಂಕ್ಯ ರಹಾನೆ ತೋರಿದರು. ಅದರಿಂದಾಗಿ ಬೂಮ್ರಾ, ಅಶ್ವಿನ್ ಮತ್ತು ಸಿರಾಜ್ ಶ್ರೇಷ್ಠ ಬೌಲಿಂಗ್ ಮಾಡಿದರು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರಹಾನೆ ನಾಯಕತ್ವದ ಕೌಶಲದ ಕುರಿತು ಹಿರಿಯ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

’ಅಡಿಲೇಡ್ನಲ್ಲಿ ಹೀನಾಯ ಸೋಲು ಅನುಭವಿಸಿದ ತಂಡವನ್ನು ಹುರಿದುಂಬಿಸಿ ಕಣಕ್ಕಿಳಿಸುವುದು ಸವಾಲಿನ ಕೆಲಸ. ಮೊದಲ ದಿನದಾಟದಲ್ಲಿ ಅಜಿಂಕ್ಯ ಈ ವಿಷಯದಲ್ಲಿ ಮೇಲುಗೈ ಸಾಧಿಸಿದ್ದಾರೆ‘ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ವೆಬ್ಸೈಟ್ಗೆ ತಿಳಿಸಿದ್ದಾರೆ.

ಮಾಜಿ ಲೆಗ್ಸ್ಪಿನ್ನರ್ ಶೇನ್ ವಾರ್ನ್ ಮತ್ತು ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರೂ ಅಜಿಂಕ್ಯ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

‘ರಹಾನೆಯನ್ನು ಶ್ಲಾಘಿಸಿದರೆ ಟೀಕಿಸುತ್ತಾರೆ’: ಅಜಿಂಕ್ಯ ರಹಾನೆಯ ನಾಯಕತ್ವ ಅಮೋಘವಾಗಿತ್ತೆಂದು ಶ್ಲಾಘಿಸಿದರೆ ತಮ್ಮನ್ನು ಮುಂಬೈನವರ ಪರ ಎಂದು ಕೆಲವರು ಟೀಕಿಸುತ್ತಾರೆಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಇಷ್ಟು ಬೇಗ ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಅಜಿಂಕ್ಯ ಈ ದಿನದಾಟದಲ್ಲಿ ಮಾಡಿದ ಫೀಲ್ಡಿಂಗ್ ಸಂಯೋಜನೆಯು ಚೆನ್ನಾಗಿತ್ತು. ಬೌಲರ್ಗಳನ್ನು ಸೂಕ್ತವಾಗಿ ದುಡಿಸಿಕೊಂಡರು. ಆದ್ದರಿಂದ ಬೇಗ ಯಶಸ್ಸು ಲಭಿಸಿತು. ಈ ಹಿಂದೆ ಅವರು ನಾಯಕರಾಗಿದ್ದ ಎರಡು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನೂ ನಾನು ಗಮನಿಸಿದ್ದೇನೆ. ಫೀಲ್ಡಿಂಗ್ ನಿಯೋಜನೆಯ ಬಗ್ಗೆ ಅವರಿಗೆ ವಿಶೇಷ ಕೌಶಲ ಇದೆ‘ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.