ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಋತುವಿನಲ್ಲಿ ಮಿಂಚಿದಾಕ್ಷಣ ನಾನು ಶ್ರೇಷ್ಠ ಬ್ಯಾಟ್ಸ್‌ಮನ್ ಅಲ್ಲ: ಮಾರ್ನಸ್

2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಆಸ್ಟ್ರೇಲಿಯಾ ಕ್ರಿಕೆಟಿಗ
Last Updated 8 ಜನವರಿ 2020, 10:49 IST
ಅಕ್ಷರ ಗಾತ್ರ

ಸಿಡ್ನಿ: 2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿರುವ ಆಸ್ಟ್ರೇಲಿಯಾದ ಮಾರ್ನಸ್‌ ಲಾಬುಶೇನ್‌, ಕೇವಲ ಒಂದು ಋತುವಿನಲ್ಲಿ ಉತ್ತಮ ಆಟ ಆಡಿದ ಮಾತ್ರಕ್ಕೆ ನಾನು ಶ್ರೇಷ್ಠ ಬ್ಯಾಟ್ಸ್‌ಮನ್‌ ಅಲ್ಲ ಎಂದು ಹೇಳಿದ್ದಾರೆ.

ಇದೇ ತಿಂಗಳು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ಅವರು ಆಸಿಸ್‌ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾಗಿ ನಿಗದಿತ ಓವರ್‌ಗಳ ಪಂದ್ಯದಲ್ಲಿ ಆಡಲು ಪುಳಕಗೊಂಡಿರುವುದಾಗಿ ತಿಳಿಸಿರುವ ಅವರು, ಭಾರತವನ್ನು ಪ್ರಬಲ ಎದುರಾಳಿ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭಾರತವು ಪ್ರಬಲ ತಂಡವಾಗಿದ್ದು, ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಒಳಗೊಂಡಿದೆ. ಹಾಗಾಗಿ ಸರಣಿಯು ಪೈಪೋಟಿಯಿಂದ ಕೂಡಿರಲಿದೆ. ಆದಾಗ್ಯೂ ಒಬ್ಬ ಆಟಗಾರನಾಗಿ ಕಠಿಣ ಪರಿಸ್ಥಿತಿಯಲ್ಲಿ ಬಲಿಷ್ಠ ಎದುರಾಳಿ ಎದುರು ಸಾಮರ್ಥ್ಯ ಪರೀಕ್ಷೆಗೆ ಒಳಗಾಗಲು ಬಯಸುತ್ತೇನೆ. ತವರಿನಲ್ಲಿ ಭಾರತಕ್ಕಿಂತ ಪ್ರಬಲ ಎದುರಾಳಿ ಇಲ್ಲ’

‘ಆದರೆ, ಕಳೆದ ಐದು–ಆರು ವರ್ಷಗಳಿಂದ ಐಪಿಎಲ್‌ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ಸಲುವಾಗಿ ಭಾರತ ಪ್ರವಾಸ ಕೈಗೊಂಡಿರುವ ಅನುಭವಿಗಳು ತಂಡದಲ್ಲಿರುವುದರಿಂದ ಕಲಿಯುವುದು ಸಾಕಷ್ಟಿದೆ’ ಎಂದು ತಿಳಿಸಿದ್ದಾರೆ.

ಹಿರಿಯ ಅನುಭವಿಗಳಾದ ಆ್ಯರನ್‌ ಫಿಂಚ್‌, ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಅವರು ತಂಡದಲ್ಲಿರುವುದರಿಂದ ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಕಾರಿಯಾಗಲಿ ಎಂದೂ ಹೇಳಿಕೊಂಡಿದ್ದಾರೆ.

2019ರಲ್ಲಿ 11 ಪಂದ್ಯಗಳ 17 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದ ಮಾರ್ನಸ್‌, ಬರೋಬ್ಬರಿ 1104 ರನ್ ಗಳಿಸಿದ್ದರು. ಅದರೊಂದಿಗೆ ಕಳೆದ ವರ್ಷ ಟೆಸ್ಟ್‌ನಲ್ಲಿ ಸಾವಿರ ರನ್ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯವೂ ಅವರದ್ದಾಗಿತ್ತು.

ಆ ಕುರಿತು ಮಾತನಾಡಿರುವ ಅವರು,‘ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌ ಮತ್ತು ಸ್ಟೀವ್‌ ಸ್ಮಿತ್‌ ಅವರು ಹಿಂದಿನ ಆರೇಳು ವರ್ಷಗಳಿಂದ ಸ್ಥಿರ ಸಾಮರ್ಥ್ಯ ತೋರುತ್ತಾ ಬಂದಿದ್ದಾರೆ. ಹೀಗಾಗಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆನಿಸಿದ್ದಾರೆ. ಈ ಋತುವಿನಲ್ಲಿ ಅಮೋಘವಾಗಿ ಆಡಿದಾಕ್ಷಣ ನಾನು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿಬಿಡುವುದಿಲ್ಲ. ಮುಂಬರುವ ಟೂರ್ನಿಗಳಲ್ಲೂ ಸ್ಥಿರ ಸಾಮರ್ಥ್ಯ ತೋರಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾದ ಸವಾಲು ಎದುರಿಗಿದೆ. ಅದನ್ನು ಮೀರಿನಿಲ್ಲಬೇಕು’ ಎಂದಿದ್ದಾರೆ.

ಮಂಗಳವಾರ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ ಮೂರು ಪಂದ್ಯಗಳ ಆರು ಇನಿಂಗ್ಸ್‌ಗಳಿಂದ ಮಾರ್ನಸ್‌ 549 ರನ್ ಪೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT