ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಭಾರತದ ತಿರುಗೇಟಿಗೆ ಸುಸ್ತಾದ ಇಂಗ್ಲೆಂಡ್

ಧರ್ಮಶಾಲಾದಲ್ಲಿ ಐದನೇ ಟೆಸ್ಟ್‌: ರೋಹಿತ್– ಗಿಲ್ ಶತಕ l ಮಿಂಚಿದ ಸರ್ಫರಾಜ್, ಪಡಿಕ್ಕಲ್
Published 8 ಮಾರ್ಚ್ 2024, 8:58 IST
Last Updated 8 ಮಾರ್ಚ್ 2024, 19:24 IST
ಅಕ್ಷರ ಗಾತ್ರ

ಧರ್ಮಶಾಲಾ: ಹಿಮಾಲಯದ ಮಡಿಲಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರ ದುರ್ಬಲ ಕ್ಷೇತ್ರರಕ್ಷಣೆಯು ಅವರ ನೈತಿಕ ಬಲ ಕುಸಿದಿರುವುದರ ಸಂಕೇತದಂತೆ ಕಂಡಿತು. 

ಇಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನ ಬ್ಯಾಟರ್‌ಗಳ ಸ್ನೇಹಿಯಾಗಿರುವ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳು ಮಿಂಚಿದರು. ಇಂಗ್ಲೆಂಡ್ ತಂಡದ  ಮಿಸ್‌ಫೀಲ್ಡಿಂಗ್  ಮತ್ತು  ಸಂಯೋಜನೆಯ ಕೊರತೆಗಳು ಎದ್ದುಕಂಡವು.  ಆದರೂ ಈ ಲೋಪಗಳ ಪರಿಹಾರವೆಂಬಂತೆ ದಿನದಾಟದ ಕೊನೆಯ ಅವಧಿಯಲ್ಲಿ ಸ್ಪಿನ್ನರ್‌ಗಳಾದ ಶೋಯಬ್ ಬಷೀರ್ (170ಕ್ಕೆ4)ಮತ್ತು ಟಾಮ್‌ ಹಾರ್ಟ್ಲಿ (126ಕ್ಕೆ2) ಸೇರಿ ಐದು ವಿಕೆಟ್‌ಗಳನ್ನು ಕಿತ್ತರು. ಆದರೆ ಅಷ್ಟೊತ್ತಿಗೆ ಇಂಗ್ಲೆಂಡ್ ತಂಡಕ್ಕೆ ಹಾನಿಯಾಗಿದ್ದಂತೂ ಹೌದು. 

ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 218 ರನ್‌ಗಳಿಗೆ ಉತ್ತರವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು  8 ವಿಕೆಟ್‌ಗಳಿಗೆ 473 ರನ್ ಗಳಿಸಿದೆ. 255 ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ (103, 162ಎಸೆತ, 4X13, 6X3) ಮತ್ತು ಶುಭಮನ್ ಗಿಲ್ (110, 150 ಎಸೆತ, 4X12, 6X5) ಅವರಿಬ್ಬರೂ ಈ ಸರಣಿಯಲ್ಲಿ ಎರಡನೇ ಶತಕ ದಾಖಲಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 174 ರನ್ (244 ಎಸೆತ) ಸೇರಿಸಿದರು.  ಈ ಪಂದ್ಯದಲ್ಲಿ 1 ರಿಂದ 5ನೇ ಕ್ರಮಾಂಕದವರೆಗಿನ ಬ್ಯಾಟರ್‌ಗಳು ತಲಾ 50 ರನ್‌ಗಳಿಗಿಂತ ಹೆಚ್ಚು ಗಳಿಸಿದ್ದು ವಿಶೇಷ. 

ಗುರುವಾರ ದಿನದಾಟದ ಅಂತ್ಯಕ್ಕೆ ಭಾರತ ತಂಡವು 1 ವಿಕೆಟ್‌ಗೆ 135 ರನ್ ಗಳಿಸಿತ್ತು. ಶುಕ್ರವಾರ ಬೆಳಿಗ್ಗೆ ಆಟ ಮುಂದುವರಿಸಿದ ಶರ್ಮಾ ಮತ್ತು ಗಿಲ್ ಅವರ ಬ್ಯಾಟಿಂಗ್ ನೋಡುಗರ ಕಣ್ಮನ ತಣಿಸಿದವು. ಇಬ್ಬರ ಸ್ಟೋಕ್‌ಗಳಲ್ಲಿಯೂ ಸಮತೋಲಿನ ಶಕ್ತಿಪ್ರಯೋಗ, ಗ್ಯಾಪ್‌ಗಳ ಗುರುತಿಸುವಿಕೆಯಲ್ಲಿ ನಿಖರತೆ ಮತ್ತು ಏಕಾಗ್ರತೆಗಳು ಮೇಳೈಸಿದ್ದವು. ಊಟದ ವಿರಾಮಕ್ಕೂ ಮುನ್ನವೇ ಇಬ್ಬರೂ ಶತಕ ಪೂರೈಸಿದರು. 

ವಿರಾಮದ ನಂತರದ ಎರಡು ಓವರ್‌ಗಳಲ್ಲಿ ರೋಹಿತ್ ಮತ್ತು ಗಿಲ್ ಔಟಾದರು. ಸ್ಟೋಕ್ಸ್ ಹಾಕಿದ ‘ಮ್ಯಾಜಿಕ್ ಎಸೆತ’ಕ್ಕೆ ರೋಹಿತ್ ನಿರ್ಗಮಿಸಿದರೆ, ಗಿಲ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 699ನೇ ವಿಕೆಟ್ ಗಳಿಸಿದರು.  

ದೇವದತ್ತ– ಸರ್ಫರಾಜ್ ಜೊತೆಯಾಟ:
ಪದಾರ್ಪಣೆಯ ಪಂದ್ಯವಾಡುತ್ತಿರುವ ಕನ್ನಡಿಗ ದೇವದತ್ತ ಪಡಿಕ್ಕಲ್ (65; 103ಎ, 4X10, 6X1) ಮತ್ತು ಸರ್ಫರಾಜ್ ಖಾನ್ ಅವರ (56; 60ಎ) ಜೊತೆಯಾಟವೂ ತಂಡದ ಮುನ್ನಡೆಯನ್ನು ಹೆಚ್ಚಿಸಿತು. ಇವರಿಬ್ಬರ ಪ್ರಹಾರದ ಮುಂದೆ ಬೌಲರ್‌ಗಳು ಸುಸ್ತಾದರು. 

ಆತ್ಮವಿಶ್ವಾಸದಿಂದ ಆಡುತ್ತಿದ್ದ ಇಬ್ಬರೂ ದೊಡ್ಡ ಮೊತ್ತ ಗಳಿಸುವ ಭರವಸೆ ಮೂಡಿತ್ತು. ಸರ್ಫರಾಜ್ ಅವರ ಅಪ್ಪರ್ ಕಟ್ ಹೊಡೆತವೂ ಆಕರ್ಷಕವಾಗಿತ್ತು. ಆದರೆ ಸ್ಪಿನ್ನರ್‌ಗಳ ಮುಂದೆ ಇಬ್ಬರೂ ವಿಕೆಟ್ ಚೆಲ್ಲಿದರು. ಜಡೇಜ ಮತ್ತು ಧ್ರುವ ಜುರೇಲ್ ತಲಾ 15 ರನ್ ಗಳಿಸಿದರೆ, ಅಶ್ವಿನ್ ಖಾತೆ ತೆರೆಯದೇ ನಿರ್ಗಮಿಸಿದರು. 

ಈ ಹಂತದಲ್ಲಿ ಎರಡನೇ ಇನಿಂಗ್ಸ್‌ ಆರಂಭಿಸುವ ಯೋಚನೆಯಲ್ಲಿದ್ದ ಪ್ರವಾಸಿ ಬಳಗಕ್ಕೆ ಕುಲದೀಪ್ ಯಾದವ್ (ಬ್ಯಾಟಿಂಗ್ 27) ಮತ್ತು ಜಸ್‌ಪ್ರೀತ್ ಬೂಮ್ರಾ (ಬ್ಯಾಟಿಂಗ್ 19) ನಿರಾಸೆ ಮೂಡಿಸಿದರು. ಮುರಿಯದ ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. ಸ್ಪಿನ್ನರ್ ಮತ್ತು ವೇಗಿ ಗಳಿಬ್ಬರನ್ನೂ ದಿಟ್ಟತನದಿಂದ ಎದುರಿಸಿದರು. 

ಚೊಚ್ಚಲ ಇನಿಂಗ್ಸ್‌ನಲ್ಲಿ ದೇವದತ್ತ ಹೆಜ್ಜೆಗುರುತು

ಕರ್ನಾಟಕದ ಎಡಗೈ ಬ್ಯಾಟರ್ದೇ ವದತ್ತ ಪಡಿಕ್ಕಲ್ ತಮ್ಮ ಚೊಚ್ಚಲ ಟೆಸ್ಟ್ ಇನಿಂಗ್ಸ್‌ನಲ್ಲಿ ಗಮನ ಸೆಳೆದರು. 

ಹೋದ ವರ್ಷ ಅನಾರೋಗ್ಯಕ್ಕಾಗಿ ದೀರ್ಘ ಸಮಯ ಕ್ರಿಕೆಟ್‌ನಿಂದ ದೂರವಿದ್ದ ದೇವದತ್ತ ಮತ್ತೆ ಕಣಕ್ಕೆ ಮರಳಿದ್ದರು. ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಮತ್ತು ಭಾರತ ಎ ತಂಡದಲ್ಲಿ ರನ್‌ಗಳ ಹೊಳೆ ಹರಿಸಿದ್ದರು. ಅದರಿಂದಾಗಿ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದರು. 

ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಅವರು ಇಂಗ್ಲೆಂಡ್‌ ಫೀಲ್ಡರ್‌ಗಳನ್ನು ಒತ್ತಡಕ್ಕೆ ತಳ್ಳಿದರು. ಆಕರ್ಷಕ ಡ್ರೈವ್, ಚುರುಕಾದ ಫ್ಲಿಕ್‌ಗಳ ಮೂಲಕ ಮಾರ್ಕ್‌ ವುಡ್, ಅನುಭವಿ ಜಿಮ್ಮಿ ಆ್ಯಂಡರ್ಸನ್ ಎಸೆತಗಳನ್ನೂ ಬೌಂಡರಿಗೆರೆ ದಾಟಿಸಿದರು. 

ಬಷೀರ್ ಬೌಲಿಂಗ್‌ನಲ್ಲಿ ಸಿಕ್ಸರ್‌ ಗೆತ್ತುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊಟ್ಟಮೊದಲ ಅರ್ಧಶತಕದ ಗಡಿ ದಾಟಿದರು. 

ಪಡಿಕ್ಕಲ್ ಅವರು ಸರ್ಫರಾಜ್ ಖಾನ್ ಜೊತೆಗೆ 97 ರನ್‌ ಸೇರಿಸಿದರು.  ಅದಕ್ಕಾಗಿ ಇಬ್ಬರು ಸೇರಿ ಒಟ್ಟು172 ಎಸೆತಗಳನ್ನು ಎದುರಿಸಿದರು. 

ಮೊದಲ ಎಸೆತದಲ್ಲಿ ವಿಕೆಟ್!

ಇಂಗ್ಲೆಂಡ್ ತಂಡದ ನಾಯಕ ಎಂಟು ತಿಂಗಳ ನಂತರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡಲು ಕಣಕ್ಕಿಳಿದು ಜಾದೂ ಮಾಡಿದರು.

ಧರ್ಮಶಾಲಾದ ಅಂಗಳದಲ್ಲಿ ಶುಕ್ರವಾರ ಅವರು ಹಾಕಿದ ತಮ್ಮ ಮೊದಲ ಎಸೆತದಲ್ಲಿಯೇ ರೋಹಿತ್ ಶರ್ಮಾ ಅವರ ವಿಕೆಟ್ ಉರುಳಿಸಿದರು. ಮೊಣಕಾಲಿನೆತ್ತರಕ್ಕೆ ಪುಟಿದ ಚೆಂಡು ತಿರುವು ಪಡೆದು ಒಳನುಗ್ಗಿ ಸ್ಟಂಪ್ ಎಗರಿಸಿತು. ಶತಕ ಗಳಿಸಿ ಆಡುತ್ತಿದ್ದ ರೋಹಿತ್ ಅವರಿಗೂ ಈ ಎಸೆತ ಅಚ್ಚರಿ ತಂದಿತು. ಟಿ.ವಿ. ಕಾಮೆಂಟೆಟರ್‌ಗಳು ಇದನ್ನು ‘ಮ್ಯಾಜಿಕ್ ಬಾಲ್‘ ಎಂದು ಬಣ್ಣಿಸಿದರು.

ಹೋದ ವರ್ಷದ ಜೂನ್‌ನಲ್ಲಿ ಬೆನ್ ಸ್ಟೋಕ್ಸ್ ಅವರು ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು. ಅದರ ನಂತರ ಅವರು ಮಂಡಿನೋವಿನಿಂದ ಬಳಲಿದ್ದರು. ಶಸ್ತ್ರಚಿಕಿತ್ಸೆ ಕೂಡ ಪಡೆದಿದ್ದರು. ಪ್ರಸ್ತುತ ಕ್ರಿಕೆಟ್‌ನಲ್ಲಿ ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಸ್ಟೋಕ್ಸ್ ಮತ್ತೆ ಬೌಲಿಂಗ್ ಮರಳಿ ಉತ್ತಮ ಆರಂಭ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT