ಟಾಮ್–ಟೇಲರ್ ಸಾಹಸದಿಂದ ಕಿವೀಸ್‌ಗೆ ಜಯ: ಬೃಹತ್ ಮೊತ್ತ ರಕ್ಷಿಸಿಕೊಳ್ಳದ ಕೊಹ್ಲಿ ಪಡೆ

ಹ್ಯಾಮಿಲ್ಟನ್: ಭಾರತ ನೀಡಿದ ಬೃಹತ್ ಮೊತ್ತದೆದುರು ದಿಟ್ಟ ಆಟವಾಡಿದ ಕಿವೀಸ್ ಬ್ಯಾಟ್ಸ್‌ಮನ್‌ಗಳು ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.
ಇಲ್ಲಿನ ಸೆಡನ್ ಪಾರ್ಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (103) ಶತಕ ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ (51) ಹಾಗೂ ಕೆ.ಎಲ್. ರಾಹುಲ್ (ಅಜೇಯ 88) ಅರ್ಧಶತಕ ಬಾರಿಸಿ ಮಿಂಚಿದ್ದರು. ಇವರ ಆಟದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಕಲೆಹಾಕಿತ್ತು.
ಈ ಮೊತ್ತದೆದುರು ಉತ್ತಮ ಇನಿಂಗ್ಸ್ ಆರಂಭಿಸಿದ ಕಿವೀಸ್‌ಗೆ ಮಾರ್ಟಿನ್ ಗಪ್ಟಿಲ್ (32) ಮತ್ತು ಹೆನ್ರಿ ನಿಕೋಲಸ್ ಉತ್ತಮ ಆರಂಭ ನೀಡಿದರು. 15.4 ಓವರ್ ವರೆಗೆ ಆಡಿದ ಈ ಜೊಡಿ ಮೊದಲ ವಿಕೆಟ್‌ಗೆ 85 ರನ್ ಕೂಡಿಸಿತು. ಬಳಿಕ ಬಂದ ಟಾಮ್ ಬ್ಲಂಡೆಲ್ (9) ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಹೆನ್ರಿ ಜೊತೆ ಸೇರಿದ ಅನುಭವಿ ರಾಸ್ ಟೇಲರ್ ಮೂರನೇ ವಿಕೆಟ್‌ಗೆ 62 ರನ್ ಕೂಡಿಸಿದರು. 82 ಎಸೆತಗಳಲ್ಲಿ 78 ರನ್ ಗಳಿಸಿ ಆಡುತ್ತಿದ್ದ ಬ್ಲಂಡೆಲ್ ಅವರನ್ನು ನಾಯಕ ಕೊಹ್ಲಿ ರನೌಟ್ ಮಾಡಿದರು.
ಗೆಲುವಿನಿ ಇನಿಂಗ್ಸ್ ಕಟ್ಟಿದ ರಾಸ್–ಟಾಮ್
ಬ್ಲಂಡೆಲ್ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಂತೆ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ಟಾಮ್ ಲಾಥನ್, ಟೇಲರ್ ಜೊತೆ ಸೇರಿ ಗೆಲುವಿನ ಇನಿಂಗ್ಸ್ ಕಟ್ಟಿದರು. ಈ ಜೋಡಿ ಐದನೇ ವಿಕೆಟ್‌ಗೆ ಈ ಜೋಡಿ 138 ರನ್ ಸೇರಿಸಿತು.
48 ಎಸೆತಗಳನ್ನು ಆಡಿದ ಟಾಮ್ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 69 ರನ್ ಚಚ್ಚಿದರು. ಟಾಮ್ ನಿರ್ಗಮನದ ಬಳಿಕವೂ ಬೇರೂರಿ ಆಡಿದ ಟೇಲರ್ ಕೊನೆವರೆಗೂ ಆಡಿ ಗೆಲುವು ತಂದುಕೊಟ್ಟರು. ಒಟ್ಟು 84 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 109ರನ್ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಟೇಲರ್ ಅವರಿಗೆ ಇದು 21ನೇ ಶತಕ.
ಅಂತಿಮವಾಗಿ ಕಿವೀಸ್ ಪಡೆ 48.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಹೀಗಾಗಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿ ಆತ್ಮ ವಿಶ್ವಾಸದಲ್ಲಿದ್ದ ಕೊಹ್ಲಿ ಪಡೆಗೆ ‘ಬ್ಲಾಕ್ ಕ್ಯಾಪ್ಸ್’ ಆಘಾತ ನೀಡಿದರು.
ದುಬಾರಿಯಾದ ಠಾಕೂರ್–ಯಾದವ್
ರನ್ ಹೊಳೆ ಹರಿದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಚೈನಾಮನ್ ಕುಲದೀಪ್ ಯಾದವ್ ದುಬಾರಿಯಾದರು. 10 ಓವರ್ ಎಸೆದ ಯಾದವ್ 2 ವಿಕೆಟ್ ಪಡೆದರಾದರೂ 84 ರನ್ ಬಿಟ್ಟುಕೊಟ್ಟರು. 9 ಓವರ್ ಬೌಲ್ ಮಾಡಿದ ಠಾಕೂರ್ ಕೇವಲ ಒಂದು ವಿಕೆಟ್ ಪಡೆದು 80 ರನ್ ಬಿಟ್ಟುಕೊಟ್ಟರು.
ವೇಗಿ ಜಸ್‌ಪ್ರೀಸ್ ಬೂಮ್ರಾ ಹೊರತು ಪಡಿಸಿ ಉಳಿದೆಲ್ಲ ಬೌಲರ್‌ಗಳು 6ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು. ಹೀಗಾಗಿ ಬೃಹತ್ ಮೊತ್ತವಿದ್ದರೂ ಕೊಹ್ಲಿ ಪಡೆಗೆ ಗೆಲುವು ಸಾಧ್ಯವಾಗಲಿಲ್ಲ. ಮಾತ್ರವಲ್ಲದೆ ಈ ಪಂದ್ಯದಲ್ಲಿ ಭಾತದ ಬೌಲರ್‌ಗಳು ಒಟ್ಟು 24 ವೈಡ್‌ಗಳನ್ನು ಎಸೆದರು.
ಕಿವೀಸ್‌ಗೆ ದಾಖಲೆ ಜಯ: ಭಾರತಕ್ಕೆ ದೊಡ್ಡ ಸೋಲು
ನ್ಯೂಜಿಲೆಂಡ್ ತಂಡ ಬೆನ್ನಟ್ಟಿ ಗೆದ್ದ ಬೃಹತ್ ಜಯ ಇದಾಗಿದೆ. 2007ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 347 ರನ್ ಗುರಿ ಎದುರು ಗೆದ್ದದ್ದು ಈ ವರೆಗೆನ ದಾಖಲೆಯಾಗಿತ್ತು. ಅದೇ ವರ್ಷ ಆಸ್ಟ್ರೇಲಿಯಾ ವಿರುದ್ಧವೇ 337 ರನ್ ಬೆನ್ನಟ್ಟಿ ಗೆದ್ದದ್ದು, ಮೂರನೇ ದೊಡ್ಡ ಗೆಲುವಾಗಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದರೂ ಎದುರಾದ ಎರಡನೇ ದೊಡ್ಡ ಸೋಲು ಇದಾಗಿದೆ. 2019ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 359ರನ್ ಬೆನ್ನಟ್ಟಿ ಗೆದ್ದಿದ್ದು ಮೊದಲ ಸ್ಥಾನದಲ್ಲಿದೆ.
Birthday boy Mitchell Santner holds his nerve to win it for New Zealand!
The hosts chase down 348 for a four-wicket win and 1-0 lead in the series. #NZvIND pic.twitter.com/xaQlgeAw9x
— ICC (@ICC) February 5, 2020
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 347
ಶ್ರೇಯಸ್ ಅಯ್ಯರ್ 103ರನ್
ಕೆ.ಎಲ್.ರಾಹುಲ್ 88 ರನ್
ವಿರಾಟ್ ಕೊಹ್ಲಿ 51 ರನ್
ಟಿಮ್ ಸೌಥಿ 85ಕ್ಕೆ 2 ವಿಕೆಟ್
ಕಾಲಿನ್ ಡಿ ಗ್ರಾಂಡ್ ಹೋಮ್ 71ಕ್ಕೆ 1 ವಿಕೆಟ್
ಈಶ್ ಸೋಧಿ 27ಕ್ಕೆ 1 ವಿಕೆಟ್
ನ್ಯೂಜಿಲೆಂಡ್: 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 348
ಹೆನ್ರಿ ನಿಕೋಲಸ್ 78 ರನ್
ಟಾಮ್ ಲಾಥನ್ 69 ರನ್
ರಾಸ್ ಟೇಲರ್ ಅಜೇಯ 107 ರನ್
ಕುಲದೀಪ್ ಯಾದವ್ 84ಕ್ಕೆ 2 ವಿಕೆಟ್
ಮೊಹಮದ್ ಶಮಿ 63ಕ್ಕೆ 1 ವಿಕೆಟ್
ಶಾರ್ದೂಲ್ ಠಾಕೂರ್ 80ಕ್ಕೆ 1 ವಿಕೆಟ್
ಫಲಿತಾಂಶ: ನ್ಯೂಜಿಲೆಂಡ್‌ಗೆ 4 ವಿಕೆಟ್ ಜಯ
ಪಂದ್ಯ ಶ್ರೇಷ್ಠ: ರಾಸ್ ಟೇಲರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.