ಶುಕ್ರವಾರ, ಡಿಸೆಂಬರ್ 3, 2021
24 °C
ಕ್ರಿಕೆಟ್: ಕಾನ್ಪುರದಲ್ಲಿ ಇಂದು ಭಾರತ–ನ್ಯೂಜಿಲೆಂಡ್ ಹಣಾಹಣಿ; ಕೇನ್ ವಿಲಿಯಮ್ಸನ್‌–ರಹಾನೆ ಮುಖಾಮುಖಿ

IND vs NZ 1st Test: ರಾಹುಲ್ ದ್ರಾವಿಡ್‌ಗೆ ಮೊದಲ ‘ಟೆಸ್ಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್ಪುರ: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮೊಟ್ಟಮೊದಲ ಟೆಸ್ಟ್ ಪಂದ್ಯ ಆಡಲು ಭಾರತ ತಂಡ ಸಿದ್ಧವಾಗಿದೆ.

ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡವು ‘ವಿಶ್ವ ಟೆಸ್ಟ್ ಚಾಂಪಿಯನ್’ ನ್ಯೂಜಿಲೆಂಡ್‌ ಸವಾಲು ಎದುರಿಸಲಿದೆ. ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಕ್ಲೀನ್‌ಸ್ವೀಪ್ ಮಾಡಲು ಮಾರ್ಗದರ್ಶನ ಮಾಡಿ ಯಶಸ್ವಿಯಾಗಿರುವ ದ್ರಾವಿಡ್, ಈಗ ‘ಟೆಸ್ಟ್‌’ಗೆ ಸಿದ್ಧವಾಗಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಗಾಯಗೊಂಡಿರುವ ಕೆ.ಎಲ್. ರಾಹುಲ್ ಅವರಿಲ್ಲದೇ ಕಣಕ್ಕಿಳಿಯುತ್ತಿರುವ ತಂಡದಲ್ಲಿ ಯುವ ಆಟಗಾರರಿಗೆ ಮಿಂಚಲು ಅವಕಾಶ ಲಭಿಸಿದೆ.  ಕನ್ನಡಿಗ ಮಯಂಕ್ ಅಗರವಾಲ್  ಇನಿಂಗ್ಸ್‌ ಆರಂಭಿಸಲಿದ್ದು, ಅವರೊಂದಿಗೆ ಪಂಜಾಬಿ ಹುಡುಗ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವರು. ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಸೂರ್ಯಕುಮಾರ್ ಅಥವಾ ಶ್ರೇಯಸ್ ಅಯ್ಯರ್ ಆಡುವ ಸಾಧ್ಯತೆ ಹೆಚ್ಚಾಗಿದೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕ್ರೀಸ್‌ಗೆ ಬರುವುದು ಖಚಿತ. ಸುಮಾರು ಒಂದು ವರ್ಷದಿಂದ ಶತಕದ ಬರ ಎದುರಿಸುತ್ತಿರುವ ಪೂಜಾರ ಇಲ್ಲಿ ಮತ್ತೆ ಲಯಕ್ಕೆ ಮರಳುವ ನಿರೀಕ್ಷೆ ಇದೆ.

ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು ಯುವ ಆಟಗಾರ ಕೆ.ಎಸ್. ಭರತ್ ತಂಡದಲ್ಲಿದ್ದಾರೆ. ಸಹಾ ಅವರೇ ಕೀಪಿಂಗ್ ಹೊಣೆ ನಿಭಾಯಿಸುವುದು ಬಹುತೇಕ ಖಚಿತ. ಗ್ರೀನ್ ಪಾರ್ಕ್‌ ಕ್ರೀಡಾಂಗಣದ ಹೊರಾಂಗಣ ಮತ್ತು ಪಿಚ್‌ ಬಸವಳಿದಂತೆ ಕಾಣುತ್ತಿವೆ. ಈ ಬಗ್ಗೆ ಕಿವೀಸ್ ತಂಡದ ಕೋಚ್ ಗ್ಯಾರಿ ಸ್ಟೇಡ್ ಕೂಡ ಮೈದಾನದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಭರಪೂರ ನೆರವು ಸಿಗುವ ಸಾಧ್ಯತೆ ಹೆಚ್ಚಿದೆ. ಅನುಭವಿ ಆರ್. ಆಶ್ವಿನ್, ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಮೋಡಿ ರಂಗೇರಲು ಎಲ್ಲ ಅವಕಾಶಗಳೂ ಇಲ್ಲಿವೆ. 2016ರಲ್ಲಿ ಇಲ್ಲಿ ಭಾರತ ತಂಡದ ಎದುರು ಟೆಸ್ಟ್ ಆಡಿದ್ದ ಕೇನ್ ವಿಲಿಯಮ್ಸನ್ ಬಳಗವು ಸೋಲನುಭವಿಸಿತ್ತು. ಆದರೆ ಕಳೆದೈದು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. 2019ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಕಿವೀಸ್, ಹೋದ ಜೂನ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಅಷ್ಟೇ ಅಲ್ಲ. ಈಚೆಗಷ್ಟೇ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ರನ್ನರ್ಸ್ ಅಪ್ ಆಗಿತ್ತು.

ನಾಲ್ಕು ದಿನಗಳ ಹಿಂದೆ ಮುಕ್ತಾಯವಾದ ಟಿ20 ಸರಣಿಯಲ್ಲಿ ಭಾರತವು 3–0ಯಿಂದ ನ್ಯೂಜಿಲೆಂಡ್ ವಿರುದ್ಧ ಗೆದ್ದಿದೆ. ಆದರೆ, ಚುಟುಕು ಕ್ರಿಕೆಟ್ ಸರಣಿಯಲ್ಲಿ ಕೇನ್ ವಿಶ್ರಾಂತಿ ಪಡೆದಿದ್ದರು. ಕೇನ್, ಟಾಮ್ ಲಥಾಮ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್‌ ಮತ್ತು ಟಾಮ್ ಬ್ಲಂಡೆಲ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಗ್ರಿನ್ ಪಾರ್ಕ್ ಪಿಚ್‌ ಅವಲೋಕಿಸಿರುವ ಕೋಚ್ ಗ್ಯಾರಿ,  ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟನರ್, ಎಜಾಜ್ ಪಟೇಲ್ ಮತ್ತು ವಿಲ್ ಸೊಮರ್ ವಿಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ತಂಡಗಳು:

ಭಾರತ: ಅಜಿಂಕ್ಯ ರಹಾನೆ (ನಾಯಕ), ಸೂರ್ಯಕುಮಾರ್ ಯಾದವ್, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಕೆ.ಎಸ್. ಭರತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ. ರಾಹುಲ್ ದ್ರಾವಿಡ್ (ಮುಖ್ಯ ಕೋಚ್)

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್‌ಕೀಪರ್), ಕೈಲ್ ಜೆಮಿಸನ್, ಟಾಮ್ ಲಥಾಮ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಎಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟನರ್, ವಿಲ್ ಸೊಮರ್‌ವಿಲ್, ಟಿಮ್ ಸೌಥಿ, ರಾಸ್ ಟೇಲರ್, ವಿಲ್ ಯಂಗ್, ನೀಲ್ ವಾಗ್ನರ್, ಗ್ಯಾರಿ ಸ್ಟೆಡ್ (ಕೋಚ್)

ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು