ಮೊಹಾಲಿ: ಶ್ರೀಲಂಕಾ ವಿರುದ್ಧ ಇಂದು (ಮಾ.04) ಆರಂಭವಾಗಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 85 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು.
ಇನಿಂಗ್ಸ್ ಆರಂಭಿಸಿದ ಕನ್ನಡಿಗ ಮಯಂಕ್ ಅಗರವಾಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 52 ರನ್ ಕಲೆಹಾಕಿದರು. 29 ರನ್ ಗಳಿಸಿದ್ದರೋಹಿತ್ ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರೆ,33 ರನ್ ಗಳಿಸಿದ್ದ ಮಯಂಕ್ ತಂಡದ ಮೊತ್ತ 80 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು.
ಬಳಿಕಮೂರನೇ ವಿಕೆಟ್‌ಗೆ ಜೊತೆಯಾದ ಹನುಮ ವಿಹಾರಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ 90 ರನ್‌ಗಳ ಜೊತೆಯಾಟ ಆಡಿದರು.
ಕೊಹ್ಲಿ ಪಾಲಿಗೆ ಇದು ನೂರನೇ ಟೆಸ್ಟ್ ಪಂದ್ಯ. ಎರಡು ವರ್ಷಗಳಿಂದ ಶತಕದ ಬರ ಅನುಭವಿಸುತ್ತಿರುವ ಅವರು, ಇಲ್ಲಿಯೂ ಮೂರಂಕಿ ಮೊತ್ತ ಕಲೆಹಾಕಲು ವಿಫಲರಾದರು.76 ಎಸೆತಗಳಲ್ಲಿ45 ರನ್ ಗಳಿಸಿ ಆಡುತ್ತಿದ್ದ ಕೊಹ್ಲಿ, ಲಸಿತ್ ಎಂಬುಲ್ಡೆನಿಯೊ ಎಸೆತದಲ್ಲಿ ಔಟಾದರು.ಅವರ ಹಿಂದೆಯೇ ವಿಹಾರಿ ಕೂಡ ವಿಕೆಟ್ ಕೈಚೆಲ್ಲಿದರು.
ತಾಳ್ಮೆಯಿಂದ ಆಡಿದ ವಿಹಾರಿ,128 ಎಸೆತಗಳಲ್ಲಿ 58 ರನ್ ಗಳಿಸಿದರು.
ಬಳಿಕ ರಿಷಭ್ ಪಂತ್, ಎಂದಿನಂತೆ ಬೀಸಾಟದ ಮೂಲಕ ಗಮನ ಸೆಳೆದರು. ಶತಕಕ್ಕೆ ಕೇವಲ ನಾಲ್ಕು ರನ್ ಬೇಕಿದ್ದಾಗ ಔಟಾಗಿ ನಿರಾಸೆ ಅನುಭವಿಸಿದರು. 97 ಎಸೆತಗಳನ್ನು ಎದುರಿಸಿದ ಪಂತ್, 9 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 96 ರನ್ ಬಾರಿಸಿದರು.
45 ರನ್ ಬಾರಿಸಿರುವ ರವೀಂದ್ರ ಜಡೇಜಾ ಮತ್ತು 10 ರನ್ ಗಳಿಸಿರುವ ಆರ್.ಅಶ್ವಿನ್ ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಪರ ಲಸಿತ್ ಎರಡು ವಿಕೆಟ್ ಪಡೆದರೆ, ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಹಿರು ಕುಮಾರ ಮತ್ತು ಧನಂಜಯ ಡಿ ಸಿಲ್ವಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.