ಕೊಲಂಬೊ: ಭಾರತ ತಂಡ ಭಾನುವಾರ ಇಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಆಡಲಿದ್ದು, ಮಂದಗತಿಯ ಪಿಚ್ ಮತ್ತು ಅದರಲ್ಲಿ ಆತಿಥೇಯ ತಂಡದ ನಿಧಾನಗತಿಯ ಬೌಲರ್‌ಗಳನ್ನು ನಿಭಾಯಿಸಲು ತಂತ್ರಗಾರಿಕೆ ರೂಪಿಸುವತ್ತ ಚಿತ್ತಹರಿಸಲಿದೆ.
ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗೆ 130 ರನ್ ಗಳಿಸಿ ಗೆಲುವಿನತ್ತ ದಾಪುಗಾಲು ಹಾಕುವಂತೆ ಕಾಣುತ್ತಿದ್ದ ಭಾರತ ನಂತರ, ಲಂಕಾದ ಸ್ಪಿನ್ನರ್‌ಗಳೆದುರು ಪರದಾಡಿತು. 231 ರನ್‌ಗಳ ಗುರಿ ಎದುರಿಸಿದ್ದ ಪ್ರವಾಸಿ ತಂಡ ಅಂತಿಮವಾಗಿ 230 ರನ್ ಗಳಿಸಿದ್ದರಿಂದ ಪಂದ್ಯ ರೋಚಕ ಟೈ ಆಯಿತು.
ನಾಯಕ ರೋಹಿತ್ ಶರ್ಮಾ ಅವರ ಅಬ್ಬರದ ಆಟ ಅಂತ್ಯಗೊಂಡ ನಂತರ ಲಂಕಾ ತನ್ನ ಯೋಜನೆಗೆ ತಕ್ಕಂತೆ ಭಾರತದ ಬ್ಯಾಟರ್‌ಗಳನ್ನು ಜಾಣ್ಮೆಯಿಂದ ಕಟ್ಟಿಹಾಕಿತು. ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅಂಥ ಅನುಭವಿ ಬ್ಯಾಟರ್‌ಗಳೇ ನಿಖರವಾಗಿ ಬೌಲ್ ಮಾಡುತ್ತಿದ್ದ ಸ್ಪಿನ್ನರ್‌ಗಳನ್ನು ನಿಭಾಯಿಸಲು ಪರದಾಡಿದರು.
ವೆಲ್ಲಾಳಗೆ ಅವರು ವಿರಾಟ್ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಿಲ್ಲ. ಹಸರಂಗ ಅಂತಿಮವಾಗಿ ಅವರ ವಿಕೆಟ್ ಪಡೆದರು. ಅಯ್ಯರ್ ಅವರೊಬ್ಬರೇ ವೇಗದ ಬೌಲರ್‌ಗೆ (ಅಲಿಸತ್ ಫೆರ್ನಾಂಡೊ) ವಿಕೆಟ್ ಒಪ್ಪಿಸಿದ್ದು. ಲಂಕಾದ ನಾಯಕ ಚರಿತ್ ಅಸಲಂಕ ಅವರು ನಾಯಕತ್ವದ ವಿಷಯದಲ್ಲಿ ಪೂರ್ಣ ಅಂಕ ಗಳಿಸಿದರು. ಸ್ಪಿನ್ ಚೆನ್ನಾಗಿ ಆಡುವ ಕೆ.ಎಲ್.ರಾಹುಲ್ ಸಹ ಹಸರಂಗ ಅವರ ಮೋಡಿಗೆ ವಿಕೆಟ್ ನೀಡಬೇಕಾಯಿತು.
ಲಂಕಾ ಕಡೆ ಪಥುಮ್ ನಿಸಾಂಕ ಮತ್ತು ವೆಲ್ಲಾಳಗೆ ಅರ್ಧ ಶತಕಗಳನ್ನು ಬಾರಿಸಿದರು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ ವೆಲ್ಲಾಳಗೆ ಅವರು ಕುಲದೀಪ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಪರಿಣಾಮಕಾರಿಯಾಗಿ ಆಡಿದರು. ಸ್ಕೂಪ್, ರಿವರ್ಸ್ ಸ್ವೀಪ್‌ಗಳನ್ನು ಆಡಲು ಅವರು ಹಿಂಜರಿಯಲಿಲ್ಲ. ಒಂದೆಡೆ ಶುಭಮನ್ ಗಿಲ್ ಸೇರಿ ನಾಲ್ವರು ಸ್ಪಿನ್ನರ್‌ಗಳು 30 ಓವರುಗಳಲ್ಲಿ 126 ರನ್ ತೆತ್ತು 4 ವಿಕೆಟ್ ಪಡೆದರು. ಇನ್ನೊಂದೆಡೆ ಲಂಕನ್ನರು 37.5 ಓವರುಗಳಲ್ಲಿ 167 ರನ್ ನೀಡಿ 9 ವಿಕೆಟ್ ಪಡೆದಿದ್ದು ಗಮನಾರ್ಹ.
‘ಇನಿಂಗ್ಸ್‌ನ ಕೆಲವು ಹಂತಗಳಲ್ಲಿ ಮಾತ್ರ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ಜೊತೆಯಾಟಗಳು ಬರಬೇಕಾಗಿದ್ದವು’ ಎಂದು ಬೌಲಿಂಗ್ ಕೋಚ್ ಸಾಯಿರಾಜ ಬಹುತುಳೆ ಅಭಿಪ್ರಾಯಪಟ್ಟರು.
ಮೊದಲ ಪಂದ್ಯದ ‘ಟೈ’ ಮಾಡಿಕೊಂಡ ಲಂಕಾ ತಂಡ ಈಗ ಎರಡನೇ ಪಂದ್ಯವನ್ನು ಹೆಚ್ಚು ವಿಶ್ವಾಸದಿಂದ ಆಡಲಿಳಿಯಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.