ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲೂ ಭಾರತ 110 ರನ್ ಅಂತರದ ಹೀನಾಯ ಸೋಲು ಕಂಡಿದೆ.
ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಪಂದ್ಯ 'ಟೈ' ಆಗಿತ್ತು.
ಇದರೊಂದಿಗೆ 27 ವರ್ಷಗಳಲ್ಲಿ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.
249 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 26.1 ಓವರ್‌ಗಳಲ್ಲಿ ರನ್‌ಗಳಿಗೆ 138 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶ್ರೀಲಂಕಾದ ಸ್ಪಿನ್ ಸವಾಲನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್‌ಗಳು ವೈಫಲ್ಯರಾದರು.
ನಾಯಕ ರೋಹಿತ್ ಶರ್ಮಾ ಗರಿಷ್ಠ 35 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ (30), ವಿರಾಟ್ ಕೊಹ್ಲಿ (20), ಶುಭಮನ್ ಗಿಲ್ (6), ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಅಕ್ಷರ್ ಪಟೇಲ್ (2), ರಿಯಾನ್ ಪರಾಗ್ (15), ಶಿವಂ ದುಬೆ (9) ವೈಫಲ್ಯ ಅನುಭವಿಸಿದರು.
ಶ್ರೀಲಂಕಾದ ಪರ ದುನಿತ್ ವೆಲ್ಲಾಳಗೆ 27 ರನ್‌ಗೆ ಐದು ವಿಕೆಟ್ ಕಿತ್ತು ಮಿಂಚಿದರು.
1997ರಲ್ಲಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ಕೈಲಿ, ಭಾರತ ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯನ್ನು 0–3 ರಿಂದ ಸೋತಿತ್ತು. ಆಗ ಸಚಿನ್ ತೆಂಡೂಲ್ಕರ್ ನಾಯಕರಾಗಿದ್ದರು.
🎉 HISTORY MADE! 🇱🇰 Sri Lanka defeats India by 110 runs, clinching the ODI series 2-0! This marks our first ODI series victory against India since 1997! 🦁 A phenomenal team effort. What a moment for Sri Lankan cricket! #SLvIND pic.twitter.com/UY842zKoTb
— Sri Lanka Cricket 🇱🇰 (@OfficialSLC) August 7, 2024
ಪದಾರ್ಪಣೆ ಪಂದ್ಯದಲ್ಲಿ ಪರಾಗ್‌ಗೆ 3 ವಿಕೆಟ್, ಭಾರತಕ್ಕೆ 249 ರನ್ ಗುರಿ...
ಈ ಮೊದಲು ಅವಿಷ್ಕ ಫೆರ್ನಾಂಡೊ (96) ಹಾಗೂ ಕುಸಾಲ್ ಮೆಂಡಿಸ್ (59) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 248 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಟಾಸ್ ಗೆದ್ದ ಶ್ರೀಲಂಕಾದ ನಾಯಕ ಚರಿತ ಅಸಲಂಕ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಪಥುಮ್ ನಿಸ್ಸಾಂಕ ಹಾಗೂ ಅವಿಷ್ಕ ಫೆರ್ನಾಂಡೊ ಉತ್ತಮ ಆರಂಭವೊದಗಿಸಿದರು.
ಲಂಕಾದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 89 ರನ್ ಪೇರಿಸಿತು. ಆ ಮೂಲಕ ಪಥುಮ್ ಹಾಗೂ ಫೆರ್ನಾಂಡೊ ಭದ್ರ ಅಡಿಪಾಯ ಹಾಕಿಕೊಟ್ಟರು. ಪಥುಮ್ 45 ರನ್ ಗಳಿಸಿ ಔಟ್ ಆದರು.
ಬಳಿಕ ಕುಸಾಲ್ ಮೆಂಡಿಸ್ ಅವರೊಂದಿಗೆ ಜೊತೆಗೂಡಿದ ಅವಿಷ್ಕ, 82 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಅವಿಷ್ಕ ಕೇವಲ 4 ರನ್ ಅಂತರದಿಂದ ಶತಕ ವಂಚಿತರಾದರು. 102 ಎಸೆತಗಳಲ್ಲಿ 96 ರನ್ (9 ಬೌಂಡರಿ, 2 ಸಿಕ್ಸರ್) ಗಳಿಸಿದರು.
ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ 59 ರನ್ ಗಳಿಸಿದರು. ಆದರೆ ಈ ಜೋಡಿಯ ಪತನದ ಬೆನ್ನಲ್ಲೇ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು.
ನಾಯಕ ಚರಿತ ಅಸಲಂಕ (10), ಸದೀರ ಸಮರವಿಕ್ರಮ (0), ಜನಿತ್ ಲಿಯನಗೆ (8), ದನಿತ್ ವೆಲ್ಲಾಳಗೆ (2) ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಕಮಿಂಡು ಮೆಂಡಿಸ್ ಅಜೇಯ 23 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಭಾರತದ ಪರ ಚೊಚ್ಚಲ ಪಂದ್ಯ ಆಡಿದ ರಿಯಾನ್ ಪರಾಗ್ ಮೂರು ವಿಕೆಟ್ ಗಳಿಸಿ ಮಿಂಚಿದರು.
ODI debut ✅
— BCCI (@BCCI) August 7, 2024
Wicket on ODI debut ✅
Riyan Parag strikes for #TeamIndia! 👏 👏
Follow the Match ▶️ https://t.co/Lu9YkAlPoM #SLvIND | @ParagRiyan pic.twitter.com/vGA38kteOQ
ಪರಾಗ್ ಪದಾರ್ಪಣೆ, ರಿಷಭ್‌ಗೆ ಅವಕಾಶ...
ಈ ಮೊದಲು ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತ ತಂಡದಲ್ಲಿ ಎರಡು ಬದಲಾವಣೆ ತರಲಾಗಿದೆ. ರಿಷಭ್ ಪಂತ್ ಮತ್ತು ರಿಯಾನ್ ಪರಾಗ್ ಅವರಿಗೆ ಅವಕಾಶ ಕೊಡಲಾಗಿದೆ.
ಇದರಿಂದಾಗಿ ಕೆ.ಎಲ್.ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನಷ್ಟವಾಗಿದೆ.
ಭಾರತ ತಂಡವು 27 ವರ್ಷಗಳಲ್ಲಿ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿದೆ. 0-1ರ ಅಂತರದ ಹಿನ್ನಡೆಯಲ್ಲಿರುವ ಭಾರತ ಸಮಬಲ ಸಾಧಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಮೊದಲ ಪಂದ್ಯ 'ಟೈ' ಆಗಿದ್ದರೆ ಎರಡನೇ ಪಂದ್ಯದಲ್ಲಿ ಭಾರತ 32 ರನ್ ಅಂತರದ ಸೋಲಿಗೆ ಶರಣಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.