ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ | ಜಡೇಜ, ಕುಲದೀಪ್ ಕೈಚಳಕ; ವಿಂಡೀಸ್‌ ಎದುರು ಭಾರತಕ್ಕೆ 5 ವಿಕೆಟ್‌ ಜಯ

ಪದಾರ್ಪಣೆ ಮಾಡಿದ ಮುಕೇಶ್ ಕುಮಾರ್; ಶಾಯ್ ಹೋಪ್ ಏಕಾಂಗಿ ಹೋರಾಟ
Published 27 ಜುಲೈ 2023, 22:05 IST
Last Updated 27 ಜುಲೈ 2023, 22:05 IST
ಅಕ್ಷರ ಗಾತ್ರ

ಬ್ರಿಜ್‌ಟೌನ್, ಬಾರ್ಬೆಡೋಸ್: ಎಡಗೈ ಸ್ಪಿನ್ ಜೋಡಿ ರವೀಂದ್ರ ಜಡೇಜ ಹಾಗೂ ಕುಲದೀಪ್ ಯಾದವ್ ಅವರ ಮೋಡಿಯ ಮುಂದೆ ವೆಸ್ಟ್ ಇಂಡೀಸ್ ತಂಡವು ನೆಲಕಚ್ಚಿತು.

ಗುರುವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ ಐದು ವಿಕೆಟ್‌ಗಳಿಂದ ಗೆದ್ದುಕೊಂಡು, ಮೂರು ಪಂದ್ಯಗಳ ಸರಣಿಯಲ್ಲಿ 1–0 ರಿಂದ ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ, ಕುಲದೀಪ್ (6ಕ್ಕೆ4) ಹಾಗೂ ಜಡೇಜ (37ಕ್ಕೆ3) ಅವರ ಮಾರಕ ದಾಳಿಗೆ ನಲುಗಿ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟಾಯಿತು. ಅಲ್ಪ ಗುರಿ ಬೆನ್ನಟ್ಟುವಲ್ಲಿ ಐದು ವಿಕೆಟ್‌ ಕಳೆದುಕೊಂಡ ಭಾರತ, 22.5 ಓವರ್‌ಗಳಲ್ಲಿ 118 ರನ್ ಗಳಿಸಿತು.

ಆರಂಭಿಕ ಬ್ಯಾಟರ್‌ ಇಶಾನ್‌ ಕಿಶನ್ (52) ಅರ್ಧಶತಕ ಗಳಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಸುಲಭ ಗುರಿ ಭಾರತಕ್ಕೆ ಸವಾಲಾಗಲೇ ಇಲ್ಲ. ಆದರೂ ಎಡಗೈ ಸ್ಪಿನ್ನರ್‌ ಗುಡಕೇಶ್‌ ಮೋಟೀ (26ಕ್ಕೆ 2) ರೋಹಿತ್‌ ಶರ್ಮಾ ಬಳಗವನ್ನು ಅಲ್ಪ ಕಾಡುವಲ್ಲಿ ಯಶಸ್ವಿಯಾದರು.

ಭಾರತ ತಂಡ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಮಾಡಿತು. ರೋಹಿತ್‌ ಏಳನೆಯವರಾಗಿ ಕ್ರೀಸ್‌ಗೆ ಬಂದರು. ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಗೆ ಬರಲಿಲ್ಲ. ಶುಭಮನ್‌ ಗಿಲ್‌, ಸೂರ್ಯಕುಮಾರ್ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಬೇಗನೇ ಔಟಾದರು. ಜಡೇಜ ಮತ್ತು ರೋಹಿತ್‌ ತಂಡವನ್ನು ಜಯದತ್ತ ಕೊಂಡೊಯ್ದರು.

ವಿಂಡೀಸ್ ಅಲ್ಪ ಮೊತ್ತ: ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ತಂಡವು ತವರಿನಂಗಳದಲ್ಲಿ ಭಾರತದ  ಎದುರು ಅತಿ ಕಡಿಮೆ ಮೊತ್ತ ಗಳಿಸಿತು. 1997ರಲ್ಲಿ ಪೋರ್ಟ್ ಆಫ್‌ ಸ್ಪೇನ್‌ನಲ್ಲಿ ವಿಂಡೀಸ್, 121 ರನ್ ಗಳಿಸಿತ್ತು. ಕೆರೀಬಿಯನ್ ಪಡೆಯು 2004ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ  ಕೇಪ್‌ಟೌನ್‌ನಲ್ಲಿ ಗಳಿಸಿದ್ದ 54 ರನ್‌ಗಳು ಇದುವರೆಗಿನ ಕನಿಷ್ಠ ಮೊತ್ತವಾಗಿದೆ. ಜಡೇಜ ಮತ್ತು ಕುಲದೀಪ್‌ ಅವರ ಪರಿಣಾಮಕಾರಿ ದಾಳಿಗೆ ವಿಂಡೀಸ್‌ ಬ್ಯಾಟರ್‌ಗಳು ತಡಬಡಾಯಿಸಿದರು.

ಮೂರನೇ ಓವರ್‌ನಲ್ಲಿಯೇ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕೈಲ್ ಮೇಯರ್ಸ್ ಔಟಾದರು. ಐದು ಓವರ್‌ಗಳ ನಂತರ ಮುಕೇಶ್ ಕುಮಾರ್ ಎಸೆತದಲ್ಲಿ ಅಲಿಕ್ ಅಥನೇಝ್ ವಿಕೆಟ್ ಗಳಿಸಿದರು. ಮುಕೇಶ್ ಅವರಿಗೆ ಇದು ಪದಾರ್ಪಣೆಯ ಪಂದ್ಯವಾಗಿದ್ದು, ಚೊಚ್ಚಲ ವಿಕೆಟ್ ಗಳಿಸಿ ಸಂಭ್ರಮಿಸಿದರು.

ಈ ಹಂತದಲ್ಲಿ ನಾಯಕ ಶಾಯ್ ಹೋಪ್ ಏಕಾಂಗಿ ಹೋರಾಟ ಮಾಡಿದರು. 45 ಎಸೆತಗಳಲ್ಲಿ 43 ರನ್‌ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಭಾರತದ ಇಬ್ಬರೂ ಸ್ಪಿನ್ನರ್‌ಗಳ ದಾಳಿಗೆ ಬ್ಯಾಟರ್‌ಗಳು ಪೆವಿಲಿಯನ್‌ನತ್ತ ಮುಖ ಮಾಡಿದರು.

16ನೇ ಓವರ್‌ನಲ್ಲಿ ಜಡೇಜ ಶಿಮ್ರಾನ್ ಹೆಟ್ಮೆಯರ್ ವಿಕೆಟ್ ಉರುಳಿಸಿದರು. ಜಡೇಜ 18ನೇ ಓವರ್‌ ಒಂದರಲ್ಲಿಯೇ ರೊವ್ಮನ್ ಪೊವೆಲ್ ಮತ್ತು ರೊಮೆರಿಯೊ ಶೆಫರ್ಡ್ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು.

ತಂಡವು ನೂರು ರನ್‌ಗಳ ಮೊತ್ತದೊಳಗೆ ಕುಸಿಯುವುದನ್ನು ತಪ್ಪಿಸಿದ ಶಾಯ್ ಹೋಪ್ ಅವರನ್ನು ಕುಲದೀಪ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅದಕ್ಕೂ ಮುನ್ನ ಡಾಮ್ನಿಕ್ ಡ್ರೆಕ್ಸ್ ಮತ್ತು ಯಾನಿಕ್ ಕೈರ್ ವಿಕೆಟ್‌ಗಳನ್ನೂ ಕುಲದೀಪ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಕೊನೆಯದಾಗಿ ಜೇಡನ್ ಸೀಲ್ಸ್ ವಿಕೆಟ್ ಕೂಡ ಕುಲದೀಪ್ ಪಾಲಾಯಿತು.

ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ

ನವದೆಹಲಿ: ವೆಸ್ಟ್ ಇಂಡೀಸ್ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯಿಂದ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರು ತವರಿಗೆ ಮರಳಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಅನುಭವಿ ಮೊಹಮ್ಮದ್ ಶಮಿ ಗೈರುಹಾಜರಿಯಲ್ಲಿ ಸಿರಾಜ್, ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ್ದರು. ಐದು ವಿಕೆಟ್ ಗೊಂಚಲು ಕೂಡ ಗಳಿಸಿದ್ದರು. ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬ್ಯಾಟರ್ ಅಜಿಂಕ್ಯ ರಹಾನೆ, ವಿಕೆಟ್‌ಕೀಪರ್ ಕೆ.ಎಸ್. ಭರತ್ ಮತ್ತು ಬೌಲರ್ ನವದೀಪ್ ಸೈನಿ ಕೂಡ ಸ್ವದೇಶಕ್ಕೆ ಮರಳಿದ್ದಾರೆ.

‘ಸಿರಾಜ್ ಅವರ ಕಾಲಿನ ಕೀಲಿನಲ್ಲಿ ಉರಿಯೂತವಿದೆ. ಆದ್ದರಿಂದ ವೈದ್ಯಕೀಯ ತಂಡದ ಸಲಹೆಯಂತೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸಣ್ಣ ಗಾಯವು ಉಲ್ಬಣಿಸಿ ಗಂಭೀರವಾಗದಂತೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ‘ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿರಾಜ್ ಅನುಪಸ್ಥಿತಿಯಲ್ಲಿ ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಮುಕೇಶ್‌ ಕುಮಾರ್ ಅವರ ಮೇಲೆ ಬೌಲಿಂಗ್ ಹೊಣೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT