ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್‌ಗೆ ಅವಕಾಶ

ಭಾರತ–ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಸರಣಿ ಆರಂಭ ಇಂದು
Last Updated 7 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್, ಗಯಾನಾ (ಪಿಟಿಐ): ಟ್ವೆಂಟಿ–20 ಸರಣಿಯಲ್ಲಿ ‘ಕ್ಲೀನ್‌ಸ್ವೀಪ್’ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಈಗ ಅಪಾರ ಆತ್ಮವಿಶ್ವಾಸದೊಂದಿಗೆ ಏಕದಿನ ಸರಣಿಯನ್ನು ಆರಂಭಿಸಲಿದೆ.

ಗುರುವಾರ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಎದುರು ಮುಯ್ಯಿ ತೀರಿಸಿಕೊಳ್ಳಲು ಆತಿಥೇಯ ವೆಸ್ಟ್‌ ಇಂಡೀಸ್ ಹವಣಿಸುತ್ತಿದೆ. ಏಕದಿನ ಮಾದರಿಯಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಥಾನ ತುಂಬಲು ಭಾರತ ತಂಡವು ಇಲ್ಲಿ ಪ್ರಯೋಗ ಮಾಡುವ ಯೋಚನೆಯಲ್ಲಿದೆ.

ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರು ಇನಿಂಗ್ಸ್ ಆರಂಭಿಸುವುದು ಖಚಿತ. ವಿಶ್ವಕಪ್ ಟೂರ್ನಿಯಲ್ಲಿ ಒಂದು ಶತಕ ಹೊಡೆದಿದ್ದ ಶಿಖರ್ ಗಾಯದಿಂದಾಗಿ ಕೊನೆಯ ಹಂತದ ಪಂದ್ಯಗಳಲ್ಲಿ ಆಡಿರಲಿಲ್ಲ. ಆಗ ಕೆ.ಎಲ್. ರಾಹುಲ್ ಅವರು ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಿದ್ದರು. ಇಲ್ಲಿ ಶಿಖರ್ ಫಿಟ್ ಆಗಿದ್ದಾರೆ. ಆದ್ದರಿಂದ ಅವರೇ ಇನಿಂಗ್ಸ್‌ ಆರಂಭಿಸುವರು. ರಾಹುಲ್ ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಸಿಗಬಹುದು.

ಐದನೇ ಸ್ಥಾನಕ್ಕೆ ಮನೀಷ್ ಪಾಂಡೆ, ಕೇದಾರ್ ಜಾಧವ್ ಅಥವಾ ಶ್ರೇಯಸ್ ಅಯ್ಯರ್ ಆಡಬಹುದು. ಆರನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಕಣಕ್ಕಿಳಿಯಬಹುದು. ಆಲ್‌ರೌಂಡರ್ ರವೀಂದ್ರ ಜಡೇಜ ಸ್ಥಾನ ಪಡೆಯುವುದು ಬಹುತೇಕ ಖಚಿತ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಅಥವಾ ಯಜುವೇಂದ್ರ ಚಾಹಲ್ ಅವರಲ್ಲಿ ಯಾರು ಸ್ಥಾನ ಪಡೆಯುವರು ಕಾದು ನೋಡಬೇಕು. ಟಿ20 ಸರಣಿಯಲ್ಲಿ ಆಡದಿದ್ದ ಮೊಹಮ್ಮದ್ ಶಮಿ, ಭರವಸೆಯ ಬೌಲರ್ ನವದೀಪ್ ಸೈನಿ ಮತ್ತು ಭುವನೇಶ್ವರ್ ಕುಮಾರ್ ವೇಗದ ವಿಭಾಗದ ಹೊಣೆ ನಿಭಾಯಿಸುವ ಸಾಧ್ಯತೆ ಇದೆ.

ಪ್ರತಿಭಾನ್ವಿತ ಆಲ್‌ರೌಂಡರ್‌ಗಳು ಇರುವ ಆತಿಥೇಯ ಬಳಗವನ್ನು ಕಟ್ಟಿಹಾಕಲು ಭಾರತದ ಬೌಲಿಂಗ್ ಪಡೆಯು ವಿಶೇಷ ಯೋಜನೆಯನ್ನು ಹೆಣೆಯುವುದು ಅನಿವಾರ್ಯ.

ಜೇಸನ್ ಹೋಲ್ಡರ್ ನಾಯಕತ್ವದ ತಂಡವು ಏಕದಿನ ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಭರವಸೆಯ ಆಟವಾಡಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಸೋಲಿನ ಹಾದಿ ಹಿಡಿದು ಸೆಮಿಫೈನಲ್ ಕೂಡ ತಲುಪಲಿಲ್ಲ. ಟ್ವೆಂಟಿ–20 ಸರಣಿಯಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ನಾಯಕತ್ವ ವಹಿಸಿದ್ದರು. ಹೋಲ್ಡರ್ ಆಡಿರಲಿಲ್ಲ. ಈ ತಂಡದಲ್ಲಿ ಎವಿನ್ ಲೂಯಿಸ್, ನಿಕೊಲಸ್ ಪೂರನ್, ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಶಾಯ್ ಹೋಪ್ ಅವರ ಮೇಲೆಯೇ ತಂಡದ ಬ್ಯಾಟಿಂಗ್‌ ಅವಲಂಬಿತವಾಗಿದೆ.

ಬೌಲಿಂಗ್‌ ವಿಭಾಗದಲ್ಲಿ ಶೆಲ್ಡನ್ ಕಾಟ್ರೇಲ್, ಒಷೇನ್ ಥಾಮಸ್ ಮತ್ತು ಕೇಮರ್ ರೋಚ್ ಪ್ರಮುಖರಾಗಿದ್ದಾರೆ. ಹೋಲ್ಡರ್ ಕೂಡ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಂತಹ ಸಾಮರ್ಥ್ಯವಿರುವ ಬೌಲರ್ ಆಗಿದ್ದಾರೆ.

ಚುಟುಕು ಕ್ರಿಕೆಟ್ ಸರಣಿಯಲ್ಲಿ 0–3ರಿಂದ ಸೋತಿರುವ ಕೆರಿಬಿಯನ್ ಬಳಗವು ಮೂರುಏಕದಿನ ಪಂದ್ಯಗಳ ಸರಣಿಯಲ್ಲಿ ಚೇತರಿಸಿಕೊಳ್ಳುವುದೇ ಕಾದು ನೋಡಬೇಕು. ಸ್ಪೋಟಕ ಬ್ಯಾಟ್ಸ್‌ಮನ್ ಗೇಲ್ ಅವರ ವೃತ್ತಿಜೀವನದ ಕೊನೆಯ ಏಕದಿನ ಸರಣಿ ಇದಾಗುವ ಸಾಧ್ಯತೆಯೂ ಇದೆ.

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ನವದೀಪ್ ಸೈನಿ.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್, ನಿಕೊಲಸ್ ಪೂರನ್, ರಾಸ್ಟನ್ ಚೇಸ್, ಫ್ಯಾಬಿಯನ್ ಅಲೆನ್, ಕಾರ್ಲೋಸ್ ಬ್ರಾಥ್‌ವೇಟ್, ಕೀಮೊ ಪಾಲ್, ಶೆಲ್ಡನ್ ಕಾಟ್ರೆಲ್, ಒಷೆನ್ ಥಾಮಸ್, ಕೇಮರ್ ರೋಚ್.

ಪ್ರಾವಿಡೆನ್ಸ್‌ ಕ್ರೀಡಾಂಗಣ

ಇನಿಂಗ್ಸ್‌ ಗರಿಷ್ಠ ಸ್ಕೋರ್ ಮತ್ತು ರನ್‌ಚೇಸ್ ಗೆಲುವು: 6ಕ್ಕೆ309 (ತಂಡ: ವೆಸ್ಟ್‌ ಇಂಡೀಸ್.

ಎದುರಾಳಿ: ಪಾಕಿಸ್ತಾನ 2016–17

ಕನಿಷ್ಠ ಮೊತ್ತ: 98 (ವೆಸ್ಟ್‌ ಇಂಡೀಸ್ ಎದುರಾಳಿ ಪಾಕಿಸ್ತಾನ, 2013–14)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT