ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ವೆಸ್ಟ್ ಇಂಡೀಸ್ ಮೊದಲ ಹಣಾಹಣಿ ಇಂದು: ಪೃಥ್ವಿ ಶಾ ಪದಾರ್ಪಣೆಯ ‘ಟೆಸ್ಟ್’

ಮಯಂಕ್‌ಗೆ ಇಲ್ಲ ಅವಕಾಶ
Last Updated 3 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ರಾಜ್‌ಕೋಟ್: ಮುಂಬೈನ ಪೃಥ್ವಿ ಶಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಗುರುವಾರ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪೃಥ್ವಿ ಅವರು ಕೆ.ಎಲ್. ರಾಹುಲ್ ಜೊತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

ಆದರೆ, ಇದೇ ಮೊದಲ ಬಾರಿ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮಯಂಕ್ ಅಗರವಾಲ್ ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ. ಹೋದ ತಿಂಗಳು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿದ್ದ ಆಂಧ್ರದ ಹನುಮವಿಹಾರಿ ಕೂಡ ಬೆಂಚ್ ಕಾಯಬೇಕಿದೆ.

18 ವರ್ಷದ ಪೃಥ್ವಿ ಶಾ ಅವರು ಹೋದ ವರ್ಷ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಜೂನಿಯರ್ ಹಂತದಲ್ಲಿ ಅವರು ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಪಳಗಿದ್ದಾರೆ.

ಇಂಗ್ಲೆಂಡ್ ಸರಣಿಯ ನಾಲ್ಕನೇ ಪಂದ್ಯದ ಸಂದರ್ಭದಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣ ಪೃಥ್ವಿ ಆಡುವುದು ಖಚಿತವಾಗಿದೆ.

ದುಬೈ–ಅಬುಧಾಬಿಯಲ್ಲಿ ಈಚೆಗೆ ನಡೆದಿದ್ದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಆಫ್‌ಸ್ಪಿನ್ನರ್ ಆರ್. ಆಶ್ವಿನ್ ಕೂಡ ಕಣಕ್ಕಿಳಿಯಲಿದ್ದಾರೆ. ಅವರಿಗೆ ಜೊತೆ ನೀಡಲು ಚೈನಾಮೆನ್ ಬೌಲರ್ ಕುಲದೀಪ್ ಯಾದವ್, ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ಸಿದ್ಧರಾಗಿದ್ದಾರೆ. ವೇಗದ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರು ತಮ್ಮ ಜವಾಬ್ದಾರಿ ನಿರ್ವಹಿಸುವುದು ಬಹುತೇಕ ಖಚಿತ. ಒಂದೊಮ್ಮೆ ಮೂವರು ಮಧ್ಯಮವೇಗಿಗಳನ್ನು ಕಣಕ್ಕಿಳಿಸಿದರೆ, ಶಾರ್ದೂಲ್ ಠಾಕೂರ್ ಸ್ಥಾನ ಪಡೆಯಬಹುದು. ಅವರಿಗಾಗಿ ಸ್ಪಿನ್ನರ್ ಕುಲದೀಪ್ ಯಾದವ್ ಸ್ಥಾನ ತೆರವು ಮಾಡಿಕೊಡಬೇಕಾಗಬಹುದು.

ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ವಿರಾಟ್ ಕೊಹ್ಲಿ ಇಲ್ಲಿಯೂ ತಮ್ಮ ಆಟ ಮುಂದುವರಿಸುವ ನಿರೀಕ್ಷೆ ಇದೆ. ‘ರಾಜ್‌ಕೋಟ್ ಹೀರೊ’ ಚೇತೇಶ್ವರ್ ಪೂಜಾರ ತಮ್ಮ ತವರಿನ ಅಂಗಳದಲ್ಲಿ ಮಿಂಚುವ ತವಕದಲ್ಲಿದ್ದಾರೆ. ಅನುಭವಿ ಅಜಿಂಕ್ಯ ರಹಾನೆ, ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಪಂತ್ ಮಧ್ಯಮಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇಂಗ್ಲೆಂಡ್‌ ಎದುರಿನ ಕೊನೆಯ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಪೃಥ್ವಿ ವಿಕೆಟ್‌ಕೀಪಿಂಗ್‌ನಲ್ಲಿಯೂ ದಾಖಲೆ ಬರೆದಿದ್ದರು.

ವಿಂಡೀಸ್‌ಗೆ ಸವಾಲು: ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸುವುದು ವಿಂಡೀಸ್‌ ತಂಡಕ್ಕೆ ಕಠಿಣ ಸವಾಲು 2002 ರಿಂದ ಇಲ್ಲಿಯವರೆಗೆ ನಡೆದ ಯಾವುದೇ ಸರಣಿಯಲ್ಲಿಯೂ ಕೆರಿಬಿಯನ್ ತಂಡವು ಭಾರತವನ್ನು ಮಣಿಸಿಲ್ಲ.

ಇದೇ ಮೊದಲ ಬಾರಿಗೆ ಜೇಸನ್ ಹೋಲ್ಡರ್ ಭಾರತದ ನೆಲದಲ್ಲಿ ನಾಯಕತ್ವ ವಹಿಸುತ್ತಿದ್ದಾರೆ. ಸೋಲಿನ ಸರಪಳಿಯನ್ನು ತುಂಡರಿಸುವತ್ತ ಚಿತ್ತ ನೆಟ್ಟಿದ್ದಾರೆ. ಎರಡು ತಿಂಗಳ ಹಿಂದೆ ಬಾಂಗ್ಲಾ ಎದುರಿನ ಸರಣಿಯಲ್ಲಿ ವಿಂಡೀಸ್ ತಂಡವು 2–0ಯಿಂದ ಗೆದ್ದಿತ್ತು. ಕ್ರೇಗ್ ಬ್ರೇಥ್‌ವೈಟ್, ಶಿಮೊನ್ ಹೇಟ್ಮೆಯರ್ ಅವರು ಉತ್ತಮ ಲಯದಲ್ಲಿದ್ದಾರೆ. ಇಬ್ಬರೂ ಸ್ಪೋಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಮಹತ್ವದ ಸವಾಲು ಆತಿಥೇಯ ಬೌಲರ್‌ಗಳ ಮುಂದಿದೆ.

ತಂಡಗಳು ಇಂತಿವೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ರವಿಶಾಸ್ತ್ರಿ (ಮುಖ್ಯ ಕೋಚ್).

ವೆಸ್ಟ್‌ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರೇಥ್‌ವೈಟ್, ಕೀರನ್ ಪೊವೆಲ್, ಶಾಯ್ ಹೋಪ್, ಶಿಮೊನ್ ಹೇಟ್ಮೆಯರ್, ರಾಸ್ಟನ್ ಚೇಸ್, ಶೇನ್ ಡೊರಿಚ್(ವಿಕೆಟ್‌ಕೀಪರ್), ದೇವೇಂದ್ರ ಬಿಷೂ, ಕೀಮೊ ಪಾಲ್, ಶೆರ್ಮನ್ ಲೂಯಿಸ್, ಜಾರ್ನೆಲ್ ವಾರಿಕಾನ್, ಶಾನನ್ ಗ್ಯಾಬ್ರಿಯಲ್. ಸ್ಟುವರ್ಟ್ ಲಾ (ಮುಖ್ಯ ಕೋಚ್).

ಅಂಪೈರ್‌: ಇಯಾನ್ ಗೌಲ್ಡ್‌(ಇಂಗ್ಲೆಂಡ್), ನಿಗೆಲ್ ಲಾಂಗ್(ಇಂಗ್ಲೆಂಡ್), ಟಿ.ವಿ. ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್(ಆಸ್ಟ್ರೇಲಿಯಾ), ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್).

ಉಭಯ ತಂಡಗಳ ಬಲಾಬಲ

ಒಟ್ಟು: 94

ಭಾರತದ ಜಯ: 18

ವೆಸ್ಟ್‌ ಇಂಡೀಸ್ ಜಯ: 30

ಡ್ರಾ: 46


ಭಾರತದಲ್ಲಿ ನಡೆದ ಪಂದ್ಯಗಳು

ಒಟ್ಟು: 45

ಭಾರತದ ಜಯ: 11

ವೆಸ್ಟ್‌ ಇಂಡೀಸ್ ಜಯ: 14

ಡ್ರಾ: 20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT