ಬುಧವಾರ, ನವೆಂಬರ್ 25, 2020
19 °C

PV Web Exclusive | ಐಪಿಎಲ್‌: ಸೊನ್ನೆ ಸುತ್ತಿದವರ ‘ಅಪ್ರಿಯ’ ದಾಖಲೆ!

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆದ್ದು ದಾಖಲೆಯ ಆರನೇ ಸಲ ಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ‘ಅಪ್ರಿಯ’ ದಾಖಲೆಯೊಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಹೆಸರಿಗೆ ಸೇರಿತು. ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯ ಮೊದಲ ನಾಲ್ಕು ಮಂದಿಯಲ್ಲಿ ಅವರೂ ಒಬ್ಬರಾದರು.

ಐಪಿಎಲ್‌ನಲ್ಲಿ 13 ಬಾರಿ ‘ಶೂನ್ಯ ಸಂಪಾದನೆ‘ ಮಾಡಿದ ನಾಲ್ವರು ಆಟಗಾರರಿದ್ದಾರೆ. ಖಾತೆ ತೆರೆಯದೆ ಆರು ಬಾರಿ ವಿಕೆಟ್ ಕಳೆದುಕೊಂಡ 14 ಮಂದಿಯ ವರೆಗೂ ಈ ಪಟ್ಟಿ ಮುಂದುವರಿಯುತ್ತದೆ. ಐಪಿಎಲ್‌ನಲ್ಲಿ ಶೂನ್ಯ ‘ಗಳಿಕೆ’ ಮಾಡಿದವರ ಸಂಖ್ಯೆ ದೊಡ್ಡದಿದೆ. ಈ ಪೈಕಿ ವಿದೇಶಿಯರು 20ರಷ್ಟೂ ಇಲ್ಲ. ಭಾರತದ ಆಟಗಾರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ರೋಹಿತ್ ಶರ್ಮಾ ಮಾತ್ರವಲ್ಲ, ಕ್ರಿಸ್ ಗೇಲ್‌, ಎಬಿ ಡಿವಿಲಿಯರ್ಸ್‌, ಬ್ರೆಂಡನ್ ಮೆಕ್ಲಂ, ಆ್ಯರನ್ ಫಿಂಚ್, ಜಾಕ್ ಕಾಲಿಸ್, ಆ್ಯಡಂ ಗಿಲ್‌ ಕ್ರಿಸ್ಟ್, ವಿರಾಟ್ ಕೊಹ್ಲಿ ಅವರಂಥ ಪ್ರಖ್ಯಾತ ಬ್ಯಾಟ್ಸ್‌ಮನ್‌ಗಳು ಕೂಡ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯ ‘ಪ್ರಮುಖ’ ಸ್ಥಾನಗಳಲ್ಲಿ ಇದ್ದಾರೆ. ಆಗೊಮ್ಮೆ ಈಗೊಮ್ಮೆ ಕೆಲವು ಆಲ್‌ರೌಂಡರ್‌ಗಳು ಮತ್ತು ಬೌಲರ್‌ಗಳೂ ಇದರಲ್ಲಿ ಕಾಣಸಿಗುತ್ತಾರೆ.

13 ಬಾರಿ ರನ್ ಗಳಿಸದೇ ಔಟಾದ ನಾಲ್ವರೂ ಭಾರತೀಯರು. ಈ ಪೈಕಿ ಮೊದಲ ಸ್ಥಾನದಲ್ಲಿರುವವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿರುವ ಹರಭಜನ್ ಸಿಂಗ್. ಈ ಆಫ್‌ಸ್ಪಿನ್ನರ್ ಬ್ಯಾಟಿಂಗ್‌ನಲ್ಲಿ ಮಿಂಚದೇ ಇರುವ ಬಾಲಂಗೋಚಿ ಏನೂ ಅಲ್ಲ. 88 ಇನಿಂಗ್ಸ್‌ಗಳಲ್ಲಿ 829 ರನ್ ಕಲೆ ಹಾಕಿರುವ ಇವರು ಒಂದು ಅರ್ಧಶತಕವನ್ನೂ ಗಳಿಸಿದ್ದಾರೆ. 42 ಸಿಕ್ಸರ್‌ ಸಿಡಿಸಿರುವ ಈ ಆಟಗಾರನ ಸ್ಟ್ರೈಕ್ ರೇಟ್ 138.16. ಆದರೂ ಶೂನ್ಯ ಗಳಿಕೆಯ ’ಬೇಡವಾದ‘ ದಾಖಲೆ ಅವರ ಹೆಸರಿನಲ್ಲಿದೆ. ಐಪಿಎಲ್‌ನ 137 ಇನಿಂಗ್ಸ್‌ಗಳಲ್ಲಿ 2,848 ರನ್ ಕಲೆ ಹಾಕಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಟೂರ್ನಿಯಲ್ಲಿ ಆರು ತಂಡಗಳ ಪರವಾಗಿ ಆಡಿದ್ದಾರೆ. 13 ಅರ್ಧಶತಕ ಗಳಿಸಿದ ಅವರನ್ನು ಕೂಡ ಸೊನ್ನೆ ಕಾಟ ಬಿಡಲಿಲ್ಲ.

ನಾಲ್ಕು ತಂಡಗಳಿಗಾಗಿ ಒಟ್ಟು 39 ಇನಿಂಗ್ಸ್ ಆಡಿರುವ ಅಜಿಂಕ್ಯ ರಹಾನೆ 3,931 ರನ್ ಗಳಿಸಿದ್ದಾರೆ. ಎರಡು ಶತಕ ಹಾಗೂ 28 ಅರ್ಧಶತಕ ಗಳಿಸಿರುವ ಅವರೂ ರನ್ ಗಳಿಸದೇ 13 ಬಾರಿ ಹೊರನಡೆದಿದ್ದಾರೆ. ರೋಹಿತ್ ಶರ್ಮಾ ಈ ಬಾರಿಯ ಕ್ವಾಲಿಫೈಯರ್‌ನಲ್ಲಿ ಆಡಿದ್ದು 194ನೇ ಇನಿಂಗ್ಸ್‌. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಅವರು ’ಗೋಲ್ಡನ್ ಡಕ್‘ (ಮೊದಲ ಎಸೆತದಲ್ಲೇ ಔಟಾಗುವುದು) ಆದರು. ಒಂದು ಶತಕ, 38 ಅರ್ಧಶತಕ, 209 ಸಿಕ್ಸರ್‌ ಒಳಗೊಂಡಂತೆ 5162 ರನ್ ಗಳಿಸಿರುವ ಅವರು ಶೂನ್ಯ ಸಂಪಾದನೆಯ ’ಅಪರೂಪದ‘ ದಾಖಲೆಗೆ ಪಾತ್ರರಾದದ್ದು ಅಚ್ಚರಿ ಮೂಡಿಸಿತ್ತು.

ಪಟ್ಟಿಯಲ್ಲಿ ಮನೀಷ್ ಪಾಂಡೆ, ಗೌತಮ್ ಗಂಭೀರ್

ಪೀಯೂಷ್ ಚಾವ್ಲಾ, ಮನದೀಪ್ ಸಿಂಗ್, ಮನೀಷ್ ಪಾಂಡೆ, ಅಂಬಟಿ ರಾಯುಡು ಮತ್ತು ಗೌತಮ್ ಗಂಭೀರ್ 12 ಬಾರಿ ‘ಡಕ್‌‘ ಆಗಿದ್ದಾರೆ. 11 ಬಾರಿ ಈ ಬಗೆಯಲ್ಲಿ ವಿಕೆಟ್ ಕೊಟ್ಟವರು ದಿನೇಶ್ ಕಾರ್ತಿಕ್ ಒಬ್ಬರೆ. ಅಮಿತ್ ಮಿಶ್ರಾ ಮತ್ತು ಶಿಖರ್ ಧವನ್ 10 ಬಾರಿ, ವಿರಾಟ್ ಕೊಹ್ಲಿ ಆರು ಬಾರಿ ಸೊನ್ನೆ ಸುತ್ತಿದ್ದಾರೆ.

ವಿದೇಶಿಯರ ಪೈಕಿ ಅತಿ ಹೆಚ್ಚು ಬಾರಿ ಡಕ್‌ ಔಟ್ ಆದವರು ಆಸ್ಟ್ರೇಲಿಯಾದ ಅಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್. ಅವರು ಈ ಪಟ್ಟಿಯಲ್ಲಿ ಎರಡಂಕಿ (10) ಮೊತ್ತ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ ಕಾಲಿಸ್ ಮತ್ತು ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ತಲಾ ಒಂಬತ್ತು ಬಾರಿ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್ ಹಾಗೂ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡ್ವೇನ್ ಸ್ಮಿತ್ ತಲಾ ಎಂಟು ಸಲ, ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆ್ಯಡಂ ಗಿಲ್‌ ಕ್ರಿಸ್ಟ್, ಡೇವಿಡ್ ವಾರ್ನರ್, ಶೇನ್ ವಾಟ್ಸನ್ ಮತ್ತು ವೆಸ್ಟ್ಇಂಡೀಸ್‌ನ ಕ್ರಿಸ್ ಗೇಲ್ ತಲಾ ಏಳು ಬಾರಿ, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಂ ತಲಾ ಆರು ಬಾರಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.

ಮನೀಷ್ ಪಾಂಡೆ ಹೊರತುಪಡಿಸಿದರೆ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಇರುವ ಕನ್ನಡಿಗ ರಾಬಿನ್ ಉತ್ತಪ್ಪ ಒಬ್ಬರೆ. ಅವರು ಏಳು ಬಾರಿ ರನ್‌ ಗಳಿಸದೇ ಕ್ರೀಸ್ ತೊರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು