ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC WTC FINAL IND vs AUS | ಐಪಿಎಲ್‌ ಆಡಿದ ಬೌಲರ್‌ಗಳ ಮುಂದಿದೆ ಸವಾಲು

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌: ಪೂರ್ವ ಸಿದ್ಧತೆ ಯೋಜನೆ
Published 31 ಮೇ 2023, 13:13 IST
Last Updated 31 ಮೇ 2023, 13:13 IST
ಅಕ್ಷರ ಗಾತ್ರ

ಪೋರ್ಟ್ಸ್‌ಮೌತ್: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಬೌಲರ್‌ಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಸುವ ಕುರಿತು ಭಾರತ ತಂಡದ ವ್ಯವಸ್ಥಾಪನ ಮಂಡಳಿಯು ಕಾರ್ಯೊತ್ತಡ ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಿದೆ.

ಇದೇ 7ರಿಂದ ಆರಂಭವಾಗಲಿರುವ ಫೈನಲ್‌ನಲ್ಲಿ ಆಡಲಿರುವ ಬೌಲರ್‌ಗಳು ಕಳೆದ ಒಂದೂವರೆ ತಿಂಗಳು ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದರು. ಅದರಿಂದಾಗಿ ಅವರನ್ನು ದೀರ್ಘ ಮಾದರಿಗೆ ಹೊಂದಿಕೊಳ್ಳಲು ಸಿದ್ಧಗೊಳಿಸುವ ಸವಾಲು ತಂಡಕ್ಕೆ ಇದೆ. ಐಪಿಎಲ್‌ನಿಂದ ಇಲ್ಲಿಗೆ ಬಂದಿರುವ ಆಟಗಾರರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳನ್ನು ಒರೆಗೆ ಹಚ್ಚಿ ಸಿದ್ಧತೆಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆ ಪ್ರಕಾರವೇ ಆಟಗಾರರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಉಮೇಶ್ ಯಾದವ್ ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡಿದ್ದರು. ಇವರೆಲ್ಲರೂ ನಾಲ್ಕು ದಿನಗಳ ಹಿಂದೆಯೇ ಇಂಗ್ಲೆಂಡ್ ತಲುಪಿದ ಮೊದಲ ತಂಡದಲ್ಲಿದ್ದರು. ಆದರೆ ಮೊಹಮ್ಮದ್ ಶಮಿ ಅವರು ಸೋಮವಾರ ನಡೆದ ಫೈನಲ್‌ ನಂತರ ಇಂಗ್ಲೆಂಡ್‌ಗೆ ತೆರಳಿದ್ದರು.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಮೊದಲ ಬ್ಯಾಚ್‌ನಲ್ಲಿಯೇ ವಿರಾಟ್ ಕೊಹ್ಲಿ ಕೂಡ ತೆರಳಿದ್ದರು. ಚೇತೇಶ್ವರ್ ಪೂಜಾರ ಅವರು  ಈ ಮೊದಲೇ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಿದ್ದರು. ಅವರು ಅಲ್ಲಿಯೇ ಸೋಮವಾರ ಭಾರತ ತಂಡವನ್ನು ಸೇರಿಕೊಂಡರು.

ಗುರುವಾರ ಪೂರ್ಣ ತಂಡವು ಅಭ್ಯಾಸ ಮಾಡಲು ಕಣಕ್ಕಿಳಿಯುವ ನಿರೀಕ್ಷೆ ಇದೆ. ಸಸೆಕ್ಸ್‌ನ ಅರುಂಡೆಲ್ ಕ್ಯಾಸ್ಟಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುವ ಸಾಧ್ಯತೆ ಇದೆ.

’ಇಲ್ಲಿಯವರೆಗೆ ಸಿದ್ಧತೆಗಳು ಉತ್ತಮವಾಗಿ ನಡೆದಿವೆ. ಕಳೆದ ಎರಡು ಅಭ್ಯಾಸ ಅವಧಿಗಳಲ್ಲಿ ಆಟಗಾರರು ಲವಲವಿಕೆಯಿಂದ ಭಾಗವಹಿಸಿದರು. ಅಲ್ಲದೇ ಇಲ್ಲಿಯ ಹವಾಮಾನವೂ ಉತ್ತಮವಾಗಿದೆ. ಎಲ್ಲ ವ್ಯವಸ್ಥೆಗಳೂ ಚೆನ್ನಾಗಿವೆ‘ ಎಂದು ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

’ಐಪಿಎಲ್ ಪಂದ್ಯಗಳಲ್ಲಿ ಆಡುವಾಗ ಮೈದಾನದಲ್ಲಿ ಫೀಲ್ಡಿಂಗ್ ಮಾಡಿದ ಬಗೆ, ಅವರು ಓಡಿದ ದೂರ, ಕ್ಯಾಚ್‌ಗಳನ್ನು ನಿರ್ವಹಿಸಿದ ರೀತಿ. ಅದರಲ್ಲೂ ಕ್ಲೋಸ್‌ ಇನ್ ಕ್ಯಾಚ್‌ಗಳನ್ನು ಪಡೆದ ಕುರಿತು ವಿಶ್ಲೇಷಣೆ ನಡೆಸಲಾಗಿದೆ. ಚುಟುಕು ಮಾದರಿಯ ಸಾಮರ್ಥ್ಯಕ್ಕೂ ಟೆಸ್ಟ್‌ ಆಟಕ್ಕೂ ಬಹಳ ವ್ಯತ್ಯಾಸವಿದೆ. ಬೌಂಡರಿಗೆರೆಯ ಅಂತರದಲ್ಲಿಯೂ ವ್ಯತ್ಯಾಸವಿರುತ್ತದೆ‘ ಎಂದು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಹೇಳಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹಾಗೂ ಬೌಲರ್ ಜಯದೇವ್ ಉನದ್ಕತ್ ಸಮಾಲೋಚನೆ  –ಪಿಟಿಐ ಚಿತ್ರ
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹಾಗೂ ಬೌಲರ್ ಜಯದೇವ್ ಉನದ್ಕತ್ ಸಮಾಲೋಚನೆ  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT