ಸೋಮವಾರ, ಆಗಸ್ಟ್ 15, 2022
22 °C
ಇಲ್ಲಿ ಆಟಗಾರರದ್ದು ಮಿಶ್ರಫಲ!

PV Web Exclusive | ರಾಜಕಾರಣದ ಪಿಚ್‌ನಲ್ಲಿ ಆಡಿದ ಕ್ರಿಕೆಟಿಗರು

ನಾಗೇಶ್ ಶೆಣೈ ಪಿ. Updated:

ಅಕ್ಷರ ಗಾತ್ರ : | |

ಎಂ.ಎಸ್‌.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸುಮಾರು ಒಂದು ತಿಂಗಳು ಕಳೆದಿದೆ. ಅವರು ನಿವೃತ್ತಿ ನಂತರ ರಾಜಕೀಯಕ್ಕೆ ಬರುವ ಮಾತುಗಳು ಅದಕ್ಕೆ ಮೊದಲೇ  ಕೇಳಿಬಂದಿದ್ದವು. ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಸುದ್ದಿಯೂ ಹರಡಿತ್ತು. ಆದರೆ ರಾಜಕೀಯಕ್ಕೆ ಸೇರುವ ಬಗ್ಗೆ ಧೋನಿ ಇದುವರೆಗೂ ಗುಟ್ಟುಬಿಟ್ಟುಕೊಟ್ಟಿಲ್ಲ. ಈಗ ಐಪಿಎಲ್‌ ಕಡೆಗೇ ಅವರ ಲಕ್ಷ್ಯ. ದೇಶದಿಂದ ಆಚೆ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅವರ ನಿರ್ವಹಣೆ ಹೇಗಿರಬಹುದೆಂಬ ಕುತೂಹಲದಲ್ಲಿ ಕ್ರಿಕೆಟ್‌ ಪ್ರೇಮಿಗಳದ್ದು.

ಧೋನಿ ಕ್ರಿಕೆಟ್‌ ಜನಪ್ರಿಯತೆ ಬಳಸಿಕೊಳ್ಳಲು ಬಿಜೆಪಿ ಕೂಡ ಮುಂದಾಗಿರುವುದು ಗುಟ್ಟೇನಲ್ಲ. ಐಪಿಎಲ್‌ ನಂತರದ ದಿನಗಳಲ್ಲಿ ಅವರ ನಡೆ ಪ್ರಕಟವಾಗಬಹುದು. ಈ ಹಿಂದೆ ಭಾರತದ ಕೆಲವು ಮಾಜಿ ಅಂತರರಾಷ್ಟ್ರೀಯ ಆಟಗಾರರು ಚುನಾವಣಾ ಕಣಕ್ಕಿಳಿದಿದ್ದಾರೆ. ಕೆಲವರು ಈಗಲೂ ಸಕ್ರಿಯ. ಆದರೆ ಇತಿಹಾಸ ಕೆದಕಿ ನೋಡಿದರೆ ರಾಜಕಾರಣದ ಪಿಚ್‌ನಲ್ಲಿ ಕ್ರಿಕೆಟಿಗರದ್ದು ಮಿಶ್ರಫಲ. ಇಲ್ಲಿ ಅಂತಹ ಕೆಲವು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.

ನವಾಬ್‌ ಪಟೌಡಿ

ಕ್ರಿಕೆಟ್‌ ಅಂಕಣದಿಂದ ಚುನಾವಣಾ ಕಣಕ್ಕೆ ಇಳಿದ ಮೊದಲ ಆಟಗಾರ ನವಾಬ್‌ ಮನ್ಸೂರ್‌ ಅಲಿ ಖಾನ್‌ ಪಟೌಡಿ (1941-2011). ಸುಮಾರು 15 ವರ್ಷಗಳ (1961 ರಿಂದ 1975) ಕ್ರಿಕೆಟ್‌ ಜೀವನದಲ್ಲಿ ಅವರು ಆಡಿದ್ದು 46 ಟೆಸ್ಟ್‌ಗಳಲ್ಲಿ. ಇದರಲ್ಲಿ 40 ಟೆಸ್ಟ್‌ಗಳಿಗೆ ನಾಯಕರಾಗಿದ್ದರು ಎಂಬುದೇ ವಿಶೇಷ. ಭಾರತೀಯ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎನ್ನುವ ಹಿರಿಮೆಯೂ ಅವರದ್ದು.

ರಾಜಮನೆತನಕ್ಕೆ ನೀಡುತ್ತಿದ್ದ ರಾಜಧನ (ಪ್ರೀವಿ ಪರ್ಸ್‌) ನಿಲ್ಲಿಸಿದ್ದನ್ನು ಪ್ರತಿಭಟಿಸಲೊ ಎಂಬಂತೆ ಅವರು, 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಡಗಾಂವ್‌ ಕ್ಷೇತ್ರದಿಂದ ವಿಶಾಲ ಹರಿಯಾಣ ಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ ಮತದಾರರ ಮನಗೆಲ್ಲಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಎದುರು ದಯನೀಯ ಸೋಲು ಕಾಣಬೇಕಾಯಿತು.

ಪಟೌಡಿ, 20 ವರ್ಷಗಳ ನಂತರ ಮತ್ತೊಮ್ಮೆ ಕಣಕ್ಕಿಳಿದರು. ಈ ಬಾರಿ (1991ರಲ್ಲಿ)  ಭೋಪಾಲ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ.‌ ಆದರೆ ಎರಡನೇ ಯತ್ನದಲ್ಲೂ ಯಶಸ್ಸು ಗಳಿಸಲಿಲ್ಲ.

ಕಳೆದ ತಿಂಗಳು (ಆಗಸ್ಟ್‌ 16ರಂದು) ಕೋವಿಡ್‌ನಿಂದ ಮೃತಪಟ್ಟ ಚೇತನ್‌ ಚೌಹಾನ್‌ ಅವರು ಸುನೀಲ್‌ ಗಾವಸ್ಕರ್‌ ಅವರ ದೀರ್ಘಕಾಲದ ಆರಂಭದ ಜೊತೆಯಾಟಗಾರ ಎಂದು ಹೆಸರು ಮಾಡಿದವರು. ಉತ್ತರ ಪ್ರದೇಶದ ಅಮ್ರೋಹ ಕ್ಷೇತ್ರದಿಂದ ಎರಡು ಬಾರಿ (1991, 1998) ಲೋಕಸಭೆಗೆ ಆಯ್ಕೆಯಾಗಿದ್ದರು. ಇದೇ ಕ್ಷೇತ್ರದಲ್ಲಿ ಎರಡು ಬಾರಿ (1996, 1999) ಸೋಲನ್ನೂ

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಅವರು ಕ್ರೀಡಾ ಸಚಿವರಾಗಿದ್ದರು. ನಂತರ ಸೈನಿಕ ಕಲ್ಯಾಣ, ನಾಗರಿಕ ಸುರಕ್ಷತಾ ಖಾತೆ ವಹಿಸಿಕೊಡಲಾಗಿತ್ತು. ಸಚಿವರಾಗಿದ್ದಾಗಲೇ ಕೋವಿಡ್‌ನಿಂದ ಮೃತಪಟ್ಟ ದೇಶದ ಎರಡನೆಯವರು ಎನಿಸಿದರು.

ರಾಜಕಾರಣಿ ಪುತ್ರ ಕೀರ್ತಿ

1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ಬ್ಯಾಟ್ಸ್‌ಮನ್‌ ಕೀರ್ತಿ ಆಜಾದ್‌ ಅವರು ರಾಜಕೀಯದಲ್ಲೂ ಸೋಲು ಗೆಲುವಿನ ರುಚಿ ಕಂಡವರು. ಅವರ ತಂದೆ, ಕಾಂಗ್ರೆಸ್‌ ನಾಯಕ ಭಗವತ್‌ ಝಾ ಆಜಾದ್‌ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದವರು.

ದರ್ಬಾಂಗಾ ಕ್ಷೇತ್ರದಿಂದ ಕೀರ್ತಿ ಆಜಾದ್‌ 2004ರಲ್ಲಿ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದ್ದರು. ಆದರೆ 2009 ಮತ್ತು 2014ರಲ್ಲಿ ಸತತ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ಶ್ರೇಯಸ್ಸು ಆಜಾದ್‌ ಅವರದು. ಬಿಜೆಪಿಯ ಪ್ರಭಾವಿ ಸಚಿವ, ದೆಹಲಿ ಕ್ರಿಕೆಟ್‌ ಸಂಸ್ಥೆ ಮುಖ್ಯಸ್ಥರಾಗಿದ್ದ ಅರುಣ್‌ ಜೇಟ್ಲಿ ಅವರನ್ನು ಅಲ್ಲಿನ ಸಂಸ್ಥೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಎದುರುಹಾಕಿಕೊಂಡಿದ್ದು ಅವರಿಗೆ ಸಮಸ್ಯೆ ತಂದೊಡ್ಡಿತ್ತು. 2019ರ ಚುನಾವಣೆಗೆ ಮೊದಲು  ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾಂಗ್ರೆಸ್‌ ಅವರಿಗೆ ದರ್ಬಾಂಗಾ ಬದಲು ಧನಬಾದ್‌ ಕ್ಷೇತ್ರದ ಟಿಕೆಟ್‌ ನೀಡಿತ್ತು. ಆದರೆ ಅವರು ಬಿಜೆಪಿ ಅಭ್ಯರ್ಥಿ ಎದುರು ಸೋಲನುಭವಿಸಬೇಕಾಯಿತು.

ನವಜೋತ್ ಸಿಂಗ್‌ ಸಿಧು

ಭಾರತ ತಂಡದ ಇನ್ನೊಬ್ಬ ಆರಂಭ ಆಟಗಾರರಾಗಿದ್ದ ನವಜೋತ್ ಸಿಂಗ್‌ ಸಿಧು ಅವರು 2004ರ ಚುನಾವಣೆಗೆ ಮೊದಲು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಎರಡು ಬಾರಿ ಅಮೃತಸರ ಕ್ಷೇತ್ರದಿಂದ ವಿಜಯಿಯಾಗಿದ್ದರು. 2016ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ಆದರೆ ಬಿಜೆಪಿ ನಾಯಕತ್ವದ ಜೊತೆ ಸರಿಬರದ ಕಾರಣ ಕಾಂಗ್ರೆಸ್‌ ಸೇರ್ಪಡೆಯಾದರು. 2017ರ ಪಂಜಾಬ್‌ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ನಿರೀಕ್ಷೆಯಂತೆ ಸಚಿವರೂ ಆದರು.

ಆದರೆ ಸಿಧು ಅವರದು ಕ್ರಿಕೆಟ್‌ನಂತೆ ಇಲ್ಲೂ ಬಂಡಾಯ ಮನೋಭಾವ. ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್ ಸಿಂಗ್‌ ಜೊತೆ ಭಿನ್ನಮತ. ಅವರ ಬಳಿಯಿದ್ದ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಕಿತ್ತುಕೊಂಡರು. ಹೀಗಾಗಿ ಕಳೆದ ವರ್ಷದ ಜುಲೈನಲ್ಲಿ ಅವರು ರಾಜೀನಾಮೆ ನೀಡಿದ್ದರು. ಸಿಧು,  ಸದನದಲ್ಲಿ ಕಾಣಿಸಿಕೊಂಡಿದ್ದ‌ಕ್ಕಿಂತ ಹೆಚ್ಚು ಕಾಣಿಸಿಕೊಂಡಿದ್ದು ರಿಯಾಲಿಟಿ ಷೊಗಳಲ್ಲಿ ಎಂಬ ಟೀಕೆಗಳನ್ನೂ ಎದುರಿಸಬೇಕಾಯಿತು.

ಮಹಮ್ಮದ್‌ ಅಜರುದ್ದೀನ್

ಭಾರತ ತಂಡದ ನಾಯಕರಾಗಿದ್ದ ಮಹಮ್ಮದ್‌ ಅಜರುದ್ದೀನ್‌ ಅವರ ಕ್ರಿಕೆಟ್‌ ಜೀವನ, ಮ್ಯಾಚ್‌ ಫಿಕ್ಸಿಂಗ್‌ ಹಗರಣದಿಂದ ಸ್ವಲ್ಪ ಬೇಗ ಮೊಟಕುಗೊಂಡಿತ್ತು, ನಂತರ ಅವರು ರಾಜಕೀಯ ಪ್ರವೇಶಿಸಿದರು. ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಅವರು 2009ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಸ್ಪರ್ಧಿಸಿದ್ದರು. ಕ್ರಿಕೆಟ್‌ ಜನಪ್ರಿಯತೆಯೂ ಬೆನ್ನಿಗಿದ್ದ ಕಾರಣ ಗೆಲುವು ಒಲಿಯಿತು. ಆದರೆ ಆ ಜನಪ್ರಿಯತೆ ಉಳಿಸಿಕೊಳ್ಳಲಾಗಲಿಲ್ಲ. 2014ರ ಚುನಾವಣೆಯಲ್ಲಿ ಅವರು ರಾಜಸ್ತಾನದ ಟೊಂಕ್‌ ಸವಾಯಿ ಮಾಧೋಪುರ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2019ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಸಿಗಲಿಲ್ಲ.

ಮಹಮ್ಮದ್‌ ಕೈಫ್

ಜವಾಹರಲಾಲ್‌ ನೆಹರೂ, ವಿಜಯಲಕ್ಷ್ಮಿ ಪಂಡಿತ್‌, ವಿ.ಪಿ.ಸಿಂಗ್‌ ಮೊದಲಾದ ಗಣ್ಯ ರಾಜಕಾರಣಿಗಳು ಪ್ರತಿನಿಧಿಸಿದ್ದ ಪೂಲ್‌ಪುರ, ಉತ್ತರಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರ. ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದ ಮಹಮ್ಮದ್‌ ಕೈಫ್‌ ಅವರು ಈ ಕ್ಷೇತ್ರದಿಂದ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆದರೆ ನಾಲ್ಕನೇ ಸ್ಥಾನಕ್ಕಿಳಿಯಬೇಕಾಯಿತು.

‘ರಾಜಕೀಯ ಸಮುದಾಯಗಳ ಮಧ್ಯೆ ವಿಭಜನೆ ಉಂಟುಮಾಡುತ್ತಿದೆ. ಜನ, ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಒಂದೇ ಕಾರಣದಿಂದ ನಾನು ಚುನಾವಣಾ ಕಣಕ್ಕಿಳಿದಿದ್ದೆ’ ಎಂದು ಕೈಫ್‌ ಹೇಳಿದ್ದರು.

ಗೌತಮ್‌ ಗಂಭೀರ್

ಭಾರತ ತಂಡದ ಮತ್ತೊಬ್ಬ ತಾರೆ, ಆರಂಭ ಆಟಗಾರ ಗೌತಮ್‌ ಗಂಭೀರ್‌, ಕ್ರಿಕೆಟ್‌ ಜೀವನ ಮುಗಿದ ಕೆಲ ಸಮಯದಲ್ಲೇ ಬಿಜೆಪಿ ಸೇರ್ಪಡೆಗೊಂಡರು. ಮಾತ್ರವಲ್ಲ, ಎಲ್ಲರ ನಿರೀಕ್ಷೆ ಮೀರಿ ಪ್ರತಿಷ್ಠಿತ ಪೂರ್ವದೆಹಲಿ ಕ್ಷೇತ್ರದಿಂದ ಆಗಿನ ಹಾಲಿ ಸಂಸದರ ಬದಲು ಟಿಕೆಟ್ ಗಿಟ್ಟಿಸಿಕೊಂಡರು. ಮೋದಿ ಅಲೆಯಿಂದಾಗಿ ಗೆಲ್ಲಲು ಕಷ್ಟಪಡಲಿಲ್ಲ.

ಶ್ರೀಶಾಂತ್‌ ನಾಯರ್

ಮಧ್ಯಮ ವೇಗಿ ಎಸ್‌.ಶ್ರೀಶಾಂತ್‌ ನಾಯರ್ ಅವರು ಕ್ರಿಕೆಟ್‌ ಕಳಂಕದಿಂದ ನಿಷೇಧಕ್ಕೆ ಒಳಗಾದ ನಂತರ  ರಾಜಕೀಯದತ್ತ ಮುಖಮಾಡಿದರು. ಕೇರಳದಲ್ಲಿ ಖಾತೆ ತೆರೆಯುವ ಛಲದಲ್ಲಿದ್ದ ಬಿಜೆಪಿ ಅವರನ್ನು ಪಕ್ಷಕ್ಕೆ ಸೆಳೆದಿತ್ತು. ಆದರೆ 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರ ನಗರ ವ್ಯಾಪ್ತಿಯ ಕ್ಷೇತ್ರವೊಂದರಿಂದ ಸ್ಪರ್ಧಿಸಿ ಪರಾಭವ ಕಂಡರು.

ಭಾರತದಲ್ಲಿ ಕ್ರಿಕೆಟ್‌ ಜನಪ್ರಿಯವಾಗಿರುವುದರಿಂದ ಸಿನಿಮಾ ತಾರೆಯರ ರೀತಿ ಕ್ರಿಕೆಟಿಗರೂ ರಾಜಕೀಯದಲ್ಲಿ ಬೇಡಿಕೆಯಿದೆ. ಹೀಗಾಗಿ ಈ ಟ್ರೆಂಡ್‌ ಮುಂದುವರಿಯುವ ಸಾಧ್ಯತೆಯೇ ಹೆಚ್ಚು. ಇದೆಲ್ಲದರ ಹಿನ್ನೆಲೆಯಲ್ಲೇ ಮಹೇಂದ್ರ ಸಿಂಗ್‌ ಧೋನಿ ಅವರ ಮುಂದಿನ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಉನ್ನತ ಸ್ಥಾನಕ್ಕೇರಿದ ಇಮ್ರಾನ್‌

ವಿಶ್ವದ ಖ್ಯಾತ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಪಾಕಿಸ್ತಾನದ ಇಮ್ರಾನ್‌ ಖಾನ್‌ ನಿಯಾಜಿ ತಮ್ಮದೇ ಪಕ್ಷ (ಪಾಕಿಸ್ತಾನ್‌ ತೆಹ್ರೀಕ್‌ ಇ– ಇನ್ಸಾಫ್‌) ಕಟ್ಟಿಕೊಂಡರು. ಕೆಲವು ವರ್ಷಗಳ ಹೋರಾಟದ ನಂತರ, ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಎರಡು ವರ್ಷಗಳಿಂದ ಆ ದೇಶದ ಪ್ರಧಾನಿಯೂ ಆಗಿದ್ದಾರೆ.

1992ರ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದ ತಂಡದ ನಾಯಕರೂ ಆಗಿದ್ದ ಅವರು ಪಾಕ್‌ ಕಂಡ ಕೆಚ್ಚೆದೆಯ ‘ಪಠಾಣ್‌’ ಆಟಗಾರ.

1996ರಲ್ಲಿ ಶ್ರೀಲಂಕಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದಾಗ ನಾಯಕರಾಗಿದ್ದವರು ಅರ್ಜುನ ರಣತುಂಗ. ಮಾಜಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಕಟ್ಟಾ ಅನುಯಾಯಿ. ಶ್ರೀಲಂಕಾ ಫ್ರೀಡಂ ಪಾರ್ಟಿ ಅಧಿಕಾರದಲ್ಲಿದ್ದಾಗ ಅವರು ಎರಡು ಬಾರಿ ಕೇಂದ್ರ ಸಚಿವರಾಗಿದ್ದರು. ಅಧಿಕಾರ ಕಳೆದುಕೊಳ್ಳುವ ಮೊದಲು ಅವರು ಪೆಟ್ರೋಲಿಯಂ ಸಚಿವರಾಗಿದ್ದರು.

ಸ್ಫೋಟಕ ಬ್ಯಾಟಿಂಗ್‌ನಿಂದ ಶ್ರೀಲಂಕಾದ ಹಲವು ವಿಜಯಗಳ ರೂವಾರಿ ಎನಿಸಿದವರು ಸನತ್‌ ಜಯಸೂರ್ಯ. 445 ಏಕದಿನ ಪಂದ್ಯಗಳನ್ನಾಡಿದ್ದ ಅವರು ನಿವೃತ್ತಿಯಾಗುವ ಮೊದಲೇ, 2010ರಲ್ಲಿ ಸಂಸತ್‌ ಸದಸ್ಯರಾಗಿದ್ದರು. ಅವರೂ ಸಹಾಯಕ ಸಚಿವ ಸ್ಥಾನ ಪಡೆದರು. ಮೊದಲ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದರೂ 2015ರಲ್ಲಿ ಅವರು ಸ್ಪರ್ಧಿಸಬಯಸಲಿಲ್ಲ.

ಇಂಗ್ಲೆಂಡ್‌ನ ಮಾಜಿ ಆಟಗಾರ ಟೆಡ್‌ ಡೆಕ್ಸ್‌ಟರ್‌ ಅವರು ಹಿಂದೊಮ್ಮೆ ಅಲ್ಲಿನ ಸಂಸದೀಯ ಚುನಾವಣೆಯಲ್ಲಿ ಕಾರ್ಡಿಫ್‌ ಈಶಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಲೇಬರ್‌ ಪಕ್ಷದ ಅಭ್ಯರ್ಥಿ ಎದುರು ಸೋಲನುಭವಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು