ಮಂಗಳವಾರ, ಮಾರ್ಚ್ 28, 2023
23 °C

ನಮ್ಮ ಡ್ರೆಸಿಂಗ್ ರೂಮಲ್ಲಿ ಭಾರತ ತಂಡ, ‘ಅಮೂಲ್ಯ‘ ಕ್ಷಣ: ಕ್ರಿಕೆಟ್ ಸ್ಕಾಟ್ಲೆಂಡ್

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಟಿ–20 ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ನಂತರ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರು ಸ್ಕಾಟ್ಲೆಂಡ್ ಡ್ರೆಸಿಂಗ್ ಕೋಣೆಗೆ ಭೇಟಿ ನೀಡಿದ್ದು, ಇದೊಂದು ‘ಅಮೂಲ್ಯ’ ಕ್ಷಣ ಎಂದು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ಬಣ್ಣಿಸಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ, ಜಸ್‌ಪ್ರೀತ್ ಬೂಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಇತರ ಭಾರತೀಯ ಸ್ಟಾರ್ ಆಟಗಾರರು ಶುಕ್ರವಾರ ರಾತ್ರಿ ಪಂದ್ಯದ ನಂತರ ಸ್ಕಾಟ್ಲೆಂಡ್ ಆಟಗಾರರ ಡ್ರೆಸಿಂಗ್ ರೂಮ್‌ನಲ್ಲಿ ಸ್ಕಾಟಿಷ್ ಆಟಗಾರರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ. ಕ್ರಿಕೆಟ್ ಕುರಿತಂತೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.

‘ಡ್ರೆಸಿಂಗ್ ರೂಮಿನಲ್ಲಿ ಸಮಯ ಕಳೆದ ವಿರಾಟ್ ಕೊಹ್ಲಿ ಮತ್ತು ಅವರ ತಂಡಕ್ಕೆ ಅಭಿನಂದನೆಗಳು’ಎಂದು ಕ್ರಿಕೆಟ್ ಸ್ಕಾಟ್ಲೆಂಡ್ ಟ್ವೀಟ್ ಮಾಡಿದೆ.

‘ಇದು ಬೆಲೆಕಟ್ಟಲಾಗದ್ದು’ಎಂದು ಚಿತ್ರಗಳೊಂದಿಗೆ ಟ್ವೀಟ್‌ನಲ್ಲಿ ತಿಳಿಸಿದೆ.

ಸ್ಕಾಟ್ಲೆಂಡ್ ತಂಡವನ್ನು ಭಾರಿ ಅಂತರದಿಂದ ಸೋಲಿಸಿ ಸೆಮಿಫೈನಲ್ ಕನಸು ಜೀವಂತವಾಗಿರಿಸಲು ಭಾರತ ಸಂಪೂರ್ಣ ಪ್ರಯತ್ನಪಟ್ಟಿತ್ತು.

ಇಡೀ ಪಂದ್ಯ ಕೇವಲ 24.1 ಓವರ್‌ಗಳಿಗೆ ಮುಗಿದುಹೋಯಿತು. ಭಾರತವು 17.4 ಓವರ್‌ಗಳಲ್ಲಿ 85 ರನ್‌ಗಳಿಗೆ ಸ್ಕಾಟ್ಲೆಂಡ್ ತಂಡವನ್ನು ಆಲೌಟ್ ಮಾಡಿ, ಕೇವಲ 6.3 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು.

ಈ ಭರ್ಜರಿ ಗೆಲುವು ಭಾರತದ ನೆಟ್ ರನ್-ರೇಟ್ ಅನ್ನು +1.619ಗೆ ಏರಿಸಿದೆ. ಇದು ಬಿ ಗುಂಪಿನ ಆರು ತಂಡಗಳಲ್ಲಿ ಉತ್ತಮವಾದ ರನ್ ರೇಟ್ ಆಗಿದೆ. ಅಗ್ರ ಸ್ಥಾನದಲ್ಲಿರುವ ಪಾಕಿಸ್ತಾನಕ್ಕಿಂತ (+1.065) ಉತ್ತಮವಾಗಿದೆ.

ನಾಳೆ ನಡೆಯಲಿರುವ ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಜಯ ಗಳಿಸಿದರೆ ಭಾರತಕ್ಕೆ ಸೆಮಿಫೈಲ್‌ಗೇರುವ ಅವಕಾಶ ಸಿಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು