ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಅಲೆ ನಡುವೆ ಸ್ಪಿನ್‌ ಬಲೆ

Last Updated 31 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದ ನಂತರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್‌ ಬಗ್ಗೆ ಬ್ಯಾಟ್ಸ್‌ಮನ್‌ಗಳು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್‌ ಕ್ರಿಕೆಟ್ ಎಂದರೆ ಬ್ಯಾಟ್ಸ್‌ಮನ್‌ಗಳ ಆಟ ಮಾತ್ರವೇ ಎಂದು ಪ್ರಶ್ನಿಸಿದ್ದರು.

ಹೌದು, ಕ್ರಿಕೆಟ್‌ನಲ್ಲಿ ಪ್ರೇಕ್ಷಕರ ಗಮನವಿರುವುದೆಲ್ಲ ಬ್ಯಾಟ್ಸ್‌ಮನ್‌ಗಳ ಮೇಲೆ. ಬೌಲರ್‌ಗಳು ಪಂದ್ಯದ ಕೊನೆಯ ಓವರ್‌ಗಳಲ್ಲಿ ತಿರುವು ನೀಡುವ ಅವಕಾಶವಿದ್ದರೆ ಮಾತ್ರ ಗಮನ ಸೆಳೆಯುತ್ತಾರೆ. ಅಲ್ಲೂ ವೇಗಿಗಳ ಕಾರುಬಾರು ಹೆಚ್ಚು; ಸ್ಪಿನ್ನರ್‌ಗಳು ನಗಣ್ಯ.

ಆದರೆ ಐಪಿಎಲ್‌ ಟೂರ್ನಿಯಲ್ಲಿ ಸ್ಪಿನ್ನರ್‌ಗಳು ಪಾರಮ್ಯ ಮೆರೆಯುತ್ತಿದ್ದಾರೆ. ಈ ವರೆಗಿನ ಎಲ್ಲ ಆವೃತ್ತಿಗಳಲ್ಲೂ ಸ್ಪಿನ್ ಬೌಲರ್‌ಗಳನ್ನು ಹೆಚ್ಚಿನ ತಂಡಗಳು ‘ಟ್ರಂಪ್‌ ಕಾರ್ಡ್‌’ ಆಗಿ ಬಳಸಿದ್ದಾರೆ. ಟೂರ್ನಿಯಲ್ಲಿ ಈ ವರೆಗೆ ಸಾಧನೆ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ನರ್‌ಗಳೇ ಹೆಚ್ಚು ಇದ್ದಾರೆ. ಈ ಬಾರಿಯೂ ಸ್ಪಿನ್‌ ಬೌಲಿಂಗ್ ಮುಂಪಕ್ತಿಯಲ್ಲಿ ನಿಂತಿದೆ.

ಮೊದಲ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ಆರು ಮಂದಿ ಬೌಲರ್‌ಗಳನ್ನು ಬಳಸಿತ್ತು. ಇವರ ಪೈಕಿ ನಾಲ್ಕು ಮಂದಿ ಸ್ಪಿನ್ನರ್‌ಗಳು. ಬೌಲಿಂಗ್ ಆರಂಭಿಸಿದ್ದು ಮಧ್ಯಮ ವೇಗಿ ದೀಪಕ್‌ ಚಾಹರ್‌ ಆಗಿದ್ದರೂ ಸ್ಪಿನ್ನರ್‌ಗಳಾದ ಹರಭಜನ್ ಸಿಂಗ್, ಸುರೇಶ್‌ ರೈನಾ, ಇಮ್ರಾನ್ ತಾಹಿರ್‌ ಮತ್ತು ರವೀಂದ್ರ ಜಡೇಜ ದಾಳಿ ಮುಂದುವರಿಸಿದ್ದರು. ಹರಭಜನ್ ಮತ್ತು ತಾಹಿರ್ ತಲಾ ಮೂರು, ಜಡೇಜ ಎರಡು ವಿಕೆಟ್ ಉರುಳಿಸಿದ್ದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೂ ಆರು ಬೌಲರ್‌ಗಳ ಮೂಲಕ ದಾಳಿ ನಡೆಸಿತ್ತು. ತಂಡದ ಬೌಲಿಂಗ್ ಆರಂಭಿಸಿದ್ದು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್‌. ಸ್ಪಿನ್ನರ್‌ಗಳ ಬಲದಿಂದ ಸಿಎಸ್‌ಕೆ ಪಂದ್ಯ ಗೆದ್ದಿತ್ತು.

ಎರಡನೇ ಪಂದ್ಯ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೂ ಬಲ ತುಂಬಿದ್ದು ಸ್ಪಿನ್ನರ್‌ಗಳಾದ ಪೀಯೂಷ್ ಚಾವ್ಲಾ, ಸುನಿಲ್ ನಾರಾಯಣ್‌ ಮತ್ತು ಕುಲದೀಪ್ ಯಾದವ್‌. ರಾಜಸ್ಥಾನ್ ರಾಯಲ್ಸ್‌ ಎದುರು ನಾಟಕೀಯ ಜಯ ಸಾಧಿಸಲು ಕಿಂಗ್ಸ್ ಇಲೆವನ್‌ಗೆ ನೆರವಾದದ್ದೂ ಸ್ಪಿನ್ನರ್‌ಗಳಾದ ಮುಜೀಬ್ ಉರ್ ರೆಹಮಾನ್‌ ಮತ್ತು ರವಿಚಂದ್ರನ್ ಅಶ್ವಿನ್‌. ಮೊದಲ ಆರು ದಿನ ನಡೆದ ಒಟ್ಟು ಏಳು ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಹೆಚ್ಚು ಮಿಂಚಿದ್ದರು. ಈ ಪಂದ್ಯಗಳಲ್ಲಿ ದಾಖಲಾದ ಒಟ್ಟು ನಾಲ್ಕು ಮೇಡನ್ ಓವರ್‌ಗಳಲ್ಲಿ ಮೂರು ಸ್ಪಿನ್ ಬೌಲರ್‌ಗಳದ್ದಾಗಿತ್ತು. ವಿಕೆಟ್‌ ಗಳಿಕೆಯಲ್ಲಿ ಅಗ್ರ 10 ಸ್ಥಾನಗಳಲ್ಲಿದ್ದವರ ಪೈಕಿ ಐದು ಮಂದಿ ಸ್ಪಿನ್ನರ್‌ಗಳಾಗಿದ್ದರು.

ಟ್ವೆಂಟಿ–20 ಮತ್ತು ಸ್ಪಿನ್‌ ಬೌಲಿಂಗ್‌
ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ತಡವಾಗಿ ರಂಗ ಪ್ರವೇಶ ಮಾಡುತ್ತಾರೆ. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಪಿಚ್ ಎಂದು ಖಾತರಿಯಾದರೆ ಏಕದಿನ ಕ್ರಿಕೆಟ್‌ನಲ್ಲಿ ಸ್ವಲ್ಪ ಬೇಗ, ಕೆಲವೊಮ್ಮೆ ಮೊದಲ ಓವರ್‌ನಿಂದಲೇ ಅವರ ಕೈಗೆ ನಾಯಕ ಚೆಂಡು ನೀಡುತ್ತಾರೆ. ಮಿರ ಮಿರ ಹೊಳೆಯುವ ಚೆಂಡಿನ ಸೀಮ್‌ ಬಳಸಿ ಸ್ವಿಂಗ್‌ ನೀಡುವುದು ವೇಗಿಗಳಿಗೆ ಸುಲಭ. ಹೊಳಪು ಕಳೆದುಕೊಳ್ಳದ ಚೆಂಡಿನಲ್ಲಿ ತಿರುವು ಲಭಿಸಬೇಕಾದರೆ ಸ್ಪಿನ್ನರ್‌ ತಿಣುಕಾಡಬೇಕಾಗುತ್ತದೆ. ಈ ಕಾರಣದಿಂದ ಕನಿಷ್ಠ 10 ಓವರ್‌ಗಳ ನಂತರವೇ ಅವರನ್ನು ದಾಳಿಗೆ ಇಳಿಸಬೇಕಾಗುತ್ತದೆ. ಬ್ಯಾಟ್ಸ್‌ಮನ್‌ಗಳೇ ‘ಮುಖ್ಯ ಪಾತ್ರ’ದಲ್ಲಿ ಮಿಂಚುವ ಐಪಿಎಲ್‌ನಂಥ ಟೂರ್ನಿಗಳಲ್ಲಂತೂ ಸ್ಪಿನ್ನರ್‌ಗಳಿಗೆ ಇನ್ನೂ ಕಷ್ಟ ಎಂಬುದು ಕ್ರಿಕೆಟ್ ತಜ್ಞರ ಅಭಿಪ್ರಾಯ. ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾದ ‘ಫ್ಲ್ಯಾಟ್‌’ ಪಿಚ್‌ಗಳನ್ನು ಇಲ್ಲಿ ಸಿದ್ಧಪಡಿಸಿರುತ್ತಾರೆ. ಆದರೂ ಮೊದಲ ಓವರ್‌ನಿಂದಲೇ ಸ್ಪಿನ್ನರ್‌ಗಳು ಬೌಲಿಂಗ್ ಮಾಡುವುದು ಮತ್ತು ಯಶಸ್ಸು ಗಳಿಸುತ್ತಿರುವುದು ವಿಶೇಷ. ಅಂಕಿ ಸಂಕಿಗಳ ಪ್ರಕಾರ ಐಪಿಎಲ್‌ನಲ್ಲಿ ವೇಗಿಗಳು ಓವರೊಂದಕ್ಕೆ ಸರಾಸರಿ 8.14 ರನ್ ನೀಡುತ್ತಿದ್ದರೆ ಸ್ಪಿನ್ನರ್‌ಗಳು ಸರಾಸರಿ 7.50 ರನ್ ನೀಡುತ್ತಿದ್ದಾರೆ.

ಇಕಾನಮಿ, ಸ್ಟ್ರೈಕ್‌ ರೇಟ್‌, ರನ್ ಬಿಟ್ಟುಕೊಟ್ಟ ಪ್ರಮಾಣ, ಡಾಟ್ ಬಾಲ್‌ಗಳ ಸಂಖ್ಯೆ ಮುಂತಾದ ಎಲ್ಲ ಲೆಕ್ಕಾಚಾರದಲ್ಲೂ ಸ್ಪಿನ್ನರ್‌ಗಳು ಮುಂದಿದ್ದಾರೆ ಅಥವಾ ವೇಗಿಗಳಿಗೆ ಸಮನಾಗಿ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ಸ್ಪಿನ್‌ ಬೌಲರ್‌ಗಳ ಬೇಡಿಕೆ ಹೆಚ್ಚುತ್ತಿದೆ. ಇದು ಸ್ಪಿನ್‌ ಕಲೆಗೆ ಹೊಸ ಆಯಾಮ ನೀಡುವ ಭರವಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT