ಪೋರ್ಟ್ಸ್‌ಮೌತ್: ಅರುಂಡೆಲ್ ಮೈದಾನದಲ್ಲಿ ಶನಿವಾರ ಬೇರೆ ಬೇರೆ ಬಣ್ಣಗಳ ರಬ್ಬರ್ ಚೆಂಡುಗಳು ಗಮನ ಸೆಳೆದವು. ಇಲ್ಲಿ ನಡೆದ ಭಾರತ ತಂಡದ ಫೀಲ್ಡಿಂಗ್ ತಾಲೀಮಿನಲ್ಲಿ ಆಟಗಾರರು ಕ್ಯಾಚ್ ಅಭ್ಯಾಸಕ್ಕಾಗಿ ಬೇರೆಬೇರೆ ಬಣ್ಣಗಳ ಚೆಂಡುಗಳನ್ನು ಬಳಸಿದರು.
ಸುಮಾರು ಎರಡು ತಿಂಗಳುಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಬಿಳಿಚೆಂಡಿನಲ್ಲಿ ಆಡಿರುವ ಆಟಗಾರರನ್ನು ಕೆಂಪು ಚೆಂಡಿನ ಬಳಕೆಗೆ ಒಗ್ಗಿಸುವ ಹಾದಿಯಲ್ಲಿ ಇದೊಂದು ತಂತ್ರವಾಗಿದೆ.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಸೇರಿದಂತೆ ಆಟಗಾರರು ಹಸಿರುಬಣ್ಣದ ಚೆಂಡಿನಲ್ಲಿ ಕ್ಯಾಚ್ ಪಡೆಯುವ ಅಭ್ಯಾಸವನ್ನು ಹೆಚ್ಚು ಹೊತ್ತು ಮಾಡಿದರು.
ವಿಕೆಟ್ ಕೀಪರ್ ಹಾಗೂ ಕ್ಲೋಸ್ ಇನ್ ಫೀಲ್ಡಿಂಗ್ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಟ್ಟರು.
‘ವಿಶೇಷವಾಗಿ ತಯಾರು ಮಾಡಿದ ರಬ್ಬರ್ ಚೆಂಡುಗಳಿವು. ಗಲ್ಲಿ ಕ್ರಿಕೆಟ್‌ನಲ್ಲಿ ಬಳಸುವ ಚೆಂಡುಗಳು ಇವುಗಳಲ್ಲ. ಫೀಲ್ಡಿಂಗ್ ಅಭ್ಯಾಸಕ್ಕಾಗಿಯೇ ಸಿದ್ಧಗೊಂಡ ಚೆಂಡುಗಳಿವು. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಈ ಚೆಂಡುಗಳನ್ನು ಹೆಚ್ಚು ಬಳಸುತ್ತಾರೆ. ಈ ದೇಶಗಳಲ್ಲಿ ತಂಪು ವಾತಾವರಣ ಮತ್ತು ಕುಳಿರ್ಗಾಳಿಯ ಹೆಚ್ಚು. ಅದಕ್ಕಾಗಿ ಹೊಂದಿಕೊಳ್ಳಲು ಈ ಚೆಂಡುಗಳು ಸಹಕಾರಿ‘ ಎಂದು ಫೀಲ್ಡಿಂಗ್ ಕೋಚ್ ಹೇಳಿದರು.
’ಹಸಿರುಬಣ್ಣದ ಬಳಕೆಯ ಬಗ್ಗೆ ಯಾವುದೇ ವೈಜ್ಞಾನಿಕ ಅಥವಾ ಕ್ರಿಕೆಟ್ ಕಾರಣವಿಲ್ಲ. ಸ್ಲಿಪ್ ಫೀಲ್ಡಿಂಗ್ ಅಭ್ಯಾಸ ಮಾಡಲು ಸೂಕ್ತವಾಗಿವೆ‘ ಎಂದು ಶುಭಮನ್ ಗಿಲ್ ಹೇಳಿದರು.
ಗಾಳಿಯಲ್ಲಿ ವೇಗವಾಗಿ ಮತ್ತು ಒಂದಿಷ್ಟು ಒಲಾಡುವ ಚೆಂಡಿನ ಮೇಲೆ ಏಕಾಗ್ರತೆ ಸಾಧಿಸಿ ಹಿಡಿತಕ್ಕೆ ಪಡೆಯುವುದು ಕಠಿಣ. ಬೇರೆ ಚೆಂಡುಗಳಿಗಿಂತ ಇವು ಗಾಳಿಯಲ್ಲಿ ಹೆಚ್ಚು ತೊಯ್ದಾಡುತ್ತವೆ. ಹಗುರವಾಗಿಯೂ ಇರುವುದರಿಂದ ವೇಗ ಮತ್ತು ಸ್ವಿಂಗ್ ಆಗುವ ಪ್ರಮಾಣ ಹೆಚ್ಚು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.