ಬುಧವಾರ, ಅಕ್ಟೋಬರ್ 5, 2022
27 °C
ಇಂದ್ರಜಿತ್‌ ಶತಕ; ಪಾಂಡೆ, ಗೌತಮ್‌ ಆಸರೆ

ದುಲೀಪ್‌ ಟ್ರೋಫಿ: ದಕ್ಷಿಣ ವಲಯಕ್ಕೆ ಇನಿಂಗ್ಸ್‌ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಯಮತ್ತೂರು: ಬಾಬಾ ಇಂದ್ರಜಿತ್‌ ಗಳಿಸಿದ ಶತಕ (118) ಮತ್ತು ಕರ್ನಾಟಕದ ಆಟಗಾರರಾದ ಮನೀಷ್‌ ಪಾಂಡೆ ಹಾಗೂ ಕೆ.ಗೌತಮ್‌ ಅವರ ಉಪಯುಕ್ತ ಆಟದ ನೆರವಿನಿಂದ ದಕ್ಷಿಣ ವಲಯ ತಂಡ, ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಪಶ್ಚಿಮ ವಲಯ ವಿರುದ್ಧ ಇನಿಂಗ್ಸ್‌ ಮುನ್ನಡೆ ಪಡೆದಿದೆ.

ಪಶ್ಚಿಮ ವಲಯ ತಂಡ ಗುರುವಾರ ತನ್ನ ಮೊದಲ ಇನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಆಲೌಟಾಯಿತು. ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ 7 ವಿಕೆಟ್‌ಗೆ 318 ರನ್‌ ಗಳಿಸಿದೆ. ಹನುಮ ವಿಹಾರಿ ನೇತೃತ್ವದ ತಂಡ ಒಟ್ಟು 48 ರನ್‌ಗಳಿಂದ ಮುನ್ನಡೆಯಲ್ಲಿದೆ.

ದಕ್ಷಿಣ ವಲಯ ತಂಡ ಆರಂಭಿಕ ಬ್ಯಾಟರ್‌ಗಳಾದ ರೋಹನ್‌ ಕುನ್ನುಮಲ್‌ (31) ಮತ್ತು ಮಯಂಕ್‌ ಅಗರವಾಲ್‌ (9) ಅವರನ್ನು ಬೇಗನೇ ಕಳೆದುಕೊಂಡಿತು. ಇಂದ್ರಜಿತ್‌ ಅವರು ಸೊಗಸಾದ ಆಟದ ಮೂಲಕ ತಂಡದ ನೆರವಿಗೆ ನಿಂತರು. ಎದುರಾಳಿ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ವೇಗವಾಗಿ ರನ್‌ ಕಲೆಹಾಕಿದ ಅವರು 125 ಎಸೆತಗಳನ್ನು ಎದುರಿಸಿ, 14 ಬೌಂಡರಿ ಗಳಿಸಿದರು.

ಮನೀಷ್‌ ಪಾಂಡೆ (48 ರನ್‌, 69 ಎ., 4X4, 6X2) ಮತ್ತು ಇಂದ್ರಜಿತ್‌ ನಾಲ್ಕನೇ ವಿಕೆಟ್‌ಗೆ 105 ರನ್‌ ಸೇರಿಸಿದರು. ಇವರು ಬೆನ್ನುಬೆನ್ನಿಗೆ ಔಟಾದಾಗ ದಕ್ಷಿಣ ವಲಯ 243 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು.

ಆದರೆ ಆಲ್‌ರೌಂಡರ್‌ಗಳಾದ ಗೌತಮ್‌ (43 ರನ್‌, 55 ಎ., 4X3, 6X3) ಮತ್ತು ರವಿ ತೇಜ (ಬ್ಯಾಟಿಂಗ್‌ 26) ಅವರು ಏಳನೇ ವಿಕೆಟ್‌ಗೆ 16.2 ಓವರ್‌ಗಳಲ್ಲಿ 63 ರನ್‌ ಸೇರಿಸಿ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದಿತ್ತರು.

ಪಶ್ಚಿಮ ವಲಯ ತಂಡದ ಜಯದೇವ್‌ ಉನದ್ಕತ್‌ (52ಕ್ಕೆ 3) ಮತ್ತು ಅತಿಥ್‌ ಶೇಟ್‌ (51ಕ್ಕೆ 3) ಪ್ರಭಾವಿ ಎನಿಸಿದರು. ಅತ್ಯುತ್ತಮ ಫಾರ್ಮ್‌ನಲ್ಲಿರುವ ಸ್ಪಿನ್ನರ್‌ ಶಮ್ಸ್‌ ಮುಲಾನಿ ಅವರಿಗೆ ವಿಕೆಟ್‌ ದಕ್ಕಲಿಲ್ಲ. 14 ಓವರ್‌ಗಳಲ್ಲಿ 73 ರನ್‌ ಬಿಟ್ಟುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 96.3 ಓವರ್‌ಗಳಲ್ಲಿ 270. ದಕ್ಷಿಣ ವಲಯ: 81 ಓವರ್‌ಗಳಲ್ಲಿ 7 ವಿಕೆಟ್‌ಗೆ 318 (ರೋಹನ್‌ ಕುನ್ನುಮಲ್‌ 31, ಹನುಮ ವಿಹಾರ 25, ಬಾಬಾ ಇಂದ್ರಜಿತ್‌ 118, ಮನೀಷ್‌ ಪಾಂಡೆ 48, ಕೆ.ಗೌತಮ್‌ 43, ಜಯದೇವ್‌ ಉನದ್ಕತ್‌ 52ಕ್ಕೆ 3, ಅತಿಥ್‌ ಶೇಟ್‌ 51ಕ್ಕೆ 3)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು