ಶುಕ್ರವಾರ, ಫೆಬ್ರವರಿ 26, 2021
19 °C
ಅರ್ಧಶತಕ ಗಳಿಸಿದ ಶುಭಮನ್ ಗಿಲ್‌; ಶತಕದ ಜೊತೆಯಾಟವಾಡಿದ ಶಿಖರ್‌ – ರಿಷಭ್‌ ಪಂತ್‌

ಧವನ್‌ ಅಬ್ಬರ: ಕೆಕೆಆರ್‌ ತತ್ತರ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್ (ಅಜೇಯ 97; 63 ಎಸೆತ, 2 ಸಿಕ್ಸರ್‌, 11 ಬೌಂಡರಿ) ಮತ್ತು ನಾಲ್ಕನೇ ಕ್ರಮಾಂಕದ ರಿಷಭ್ ಪಂತ್‌ (46; 31 ಎ, 2 ಸಿ, 4 ಬೌಂ) ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಅಬ್ಬರಿಸಿದರು.

ಇವರಿಬ್ಬರ ಅಮೋಘ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಶುಭಮನ್ ಗಿಲ್ (65; 39 ಎ, 2 ಸಿ, 7 ಬೌಂ) ಮತ್ತು ಆ್ಯಂಡ್ರೆ ರಸೆಲ್‌ (45; 21 ಎ, 4 ಸಿ, 3 ಬೌಂ) ಅವರ ಉತ್ತಮ ಆಟದ ನೆರವಿನಿಂದ ನೈಟ್‌ ರೈಡರ್ಸ್‌ ಸವಾಲಿನ ಮೊತ್ತ ಕಲೆ ಹಾಕಿತ್ತು.

ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಧವನ್ ಮತ್ತು ಪಂತ್‌ ದಿಟ್ಟ ಆಟವಾಡಿ ಸುಲಭ ಜಯ ಗಳಿಸಿಕೊಟ್ಟರು.

ಮಿಂಚಿದ ಗಿಲ್‌, ರಸೆಲ್‌: ಯುವ ಪ್ರತಿಭೆ ಶುಭಮನ್ ಗಿಲ್  ಮತ್ತು ಸಿಡಿಲಮರಿ ಆ್ಯಂಡ್ರೆ ರಸೆಲ್ ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್‌ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೊದಲ ಎಸೆತದಲ್ಲಿಯೇ  ಫಲ ದೊರಕಿತು. ಇಶಾಂತ್ ಶರ್ಮಾ, ಜೋ ಡೆನ್ಲಿ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಇನ್ನೊಂದು ಬದಿಯಲ್ಲಿದ್ದ ಶುಭಮನ್ ಗಿಲ್ ಅವರೊಂದಿಗೆ ಸೇರಿದ ಕನ್ನಡಿಗ ರಾಬಿನ್ ಉತ್ತಪ್ಪ ದಿಟ್ಟ ಆಟವಾಡಿದರು.

ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿ ರನ್‌ಗಳನ್ನೂ ಗಳಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರು 63 ರನ್‌ ಸೇರಿಸಿದರು. ಒಂಬತ್ತನೇ ಓವರ್‌ನಲ್ಲಿ ರಾಬಿನ್ ಉತ್ತಪ್ಪ (28; 30ಎ, 4ಬೌಂಡರಿ, 1ಸಿಕ್ಸರ್) ಅವರು ಕಗಿಸೊ ರಬಾಡ ಎಸೆತದಲ್ಲಿ ರಿಷಭ್‌ ಪಂತ್‌ಗೆ ಕ್ಯಾಚಿತ್ತರು.

ನಿತೀಶ್ ರಾಣಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.

ಆದರೆ ಒಂದು ಆಕರ್ಷಕ ಸಿಕ್ಸರ್ ಸಿಡಿಸಿದರು. ಕ್ರಿಸ್ ಮಾರಿಸ್‌ ಎಸೆತದಲ್ಲಿ ಅವರು ಬೌಲ್ಡ್‌ ಆದರು.  ಈ ಪಂದ್ಯದಲ್ಲಿ ಕ್ರಮಾಂಕ ಬಡ್ತಿ ಪಡೆದು ಬಂದ ವಿಂಡೀಸ್ ದೈತ್ಯ ರಸೆಲ್ ಮತ್ತೊಮ್ಮೆ ತಮ್ಮ ಭುಜಬಲ ಪರಾಕ್ರಮ ಮೆರೆದರು.  ಕೇವಲ 21 ಎಸೆತಗಳಲ್ಲಿ 45 ರನ್‌ಗಳನ್ನು ಕೊಳ್ಳೆ ಹೊಡೆದರು. ಅದರಲ್ಲಿ ಮೂರು ಮಿಂಚಿನ ವೇಗದ ಬೌಂಡರಿಗಳು ಮತ್ತು ನಾಲ್ಕು ಸಿಡಿಲಬ್ಬರದ ಸಿಕ್ಸರ್‌ಗಳು ಇದ್ದವು. ಇದಕ್ಕೂ ಮುನ್ನ ಗಿಲ್ (65; 39ಎ, 7ಬೌಂ, 2ಸಿ) ಅರ್ಧಶತಕ ಗಳಿಸಿದ್ದರು. ಆದರೆ, 15ನೇ ಒವರ್‌ನಲ್ಲಿ ಕೀಮೊ ಪೌಲ್ ಬೌಲಿಂಗ್‌ನಲ್ಲಿ ಔಟಾದರು.

 ದಿನೇಶ್ ಕಾರ್ತಿಕ್ ಮತ್ತು ಕಾರ್ಲೋಸ್ ಬ್ರಾಥ್‌ವೇಟ್‌ ಮಿಂಚಲಿಲ್ಲ. ಆದರೆ, ಪಿಯೂಷ್ ಚಾವ್ಲಾ ಅವರು 14 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಮಾರ್ಗದರ್ಶಕ ಸೌರವ್ ಗಂಗೂಲಿ ಅವರು ‘ತವರಿನಲ್ಲಿ’ ತಂಡದ ಡಗ್‌ಔಟ್‌ನಲ್ಲಿ ಕುಳಿತಿದ್ದರು. ಗಂಗೂಲಿ ಅವರು  ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.

ನಿರಾಸೆ ಇಲ್ಲ: ಧವನ್‌
ಕೋಲ್ಕತ್ತ:
ಶತಕ ಗಳಿಸಲು ಸಾಧ್ಯವಾ ಗದ್ದಕ್ಕೆ ಬೇಸರವಿಲ್ಲ ಎಂದು ಶಿಖರ್ ಧವನ್ ಹೇಳಿದರು. ‘ಐಪಿಎಲ್‌ನಲ್ಲಿ ನನ್ನ ಮೊದಲ ಶತಕ ಗಳಿಸಲು ಅವಕಾಶವಿತ್ತು. ಆದರೆ ಅದಕ್ಕಿಂತ ತಂಡದ ಜಯ ಮುಖ್ಯವಾಗಿತ್ತು‘ ಎಂದು ಅವರು ಅಭಿಪ್ರಾಯಪಟ್ಟರು.


ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು