ಗುರುವಾರ , ಅಕ್ಟೋಬರ್ 1, 2020
26 °C

ಐಪಿಎಲ್‌ | ಯುಎಇಗೆ ಹೊರಡಲು ಸಜ್ಜಾಗಿದೆ ಕನ್ನಡಿಗರ ದಂಡು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ಗೆ ಸಿದ್ಧತೆಗಳು ಆರಂಭವಾಗಿವೆ. ಇದರಲ್ಲಿ ಕರ್ನಾಟಕದ 12 ಆಟಗಾರರು ಮತ್ತು ಒಬ್ಬ ಕೋಚ್ ಕೂಡ ಇದ್ದಾರೆ. ಯುಎಇಯಲ್ಲಿ ಕನ್ನಡಿಗರ ತಾಕತ್ತು ತೋರಿಸಲು ಸಿದ್ಧರಾಗಿದ್ಧಾರೆ. ಕೊರೊನಾ ಕಾಲದ ಐತಿಹಾಸಿಕ ಟೂರ್ನಿಯಲ್ಲಿ ಛಾಪು ಮೂಡಿಸಲು ತೆರಳುತ್ತಿದ್ದಾರೆ.

ಕರ್ನಾಟಕದ ಒಂದು ಡಜನ್ ಕ್ರಿಕೆಟಿಗರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟೂರ್ನಿಯಲ್ಲಿ ಹೆಜ್ಜೆಗುರುತು ಮೂಡಿಸಲು ಸಿದ್ಧರಾಗಿದ್ದಾರೆ.

ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುತ್ತಿರುವ ಈ ಆಟಗಾರರು ತಮ್ಮ ಛಾಪು ಮೂಡಿಸುವತ್ತ ಚಿತ್ತ ನೆಟ್ಟಿದ್ದಾರೆ. ಅದರಲ್ಲಿ ಕೆ.ಎಲ್.ರಾಹುಲ್ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕತ್ವ ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಈ ಅವಕಾಶ ಲಭಿಸಿದೆ. ಇದೇ ತಂಡಕ್ಕೆ ದಿಗ್ಗಜ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ. ಈ ಬಳಗದಲ್ಲಿ ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಕೆಲವು ವರ್ಷಗಳಿಂದ ಇದ್ದಾರೆ. ಈಗ ಅವರೊಂದಿಗೆ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಮತ್ತು ಮೈಸೂರಿನ ಜೆ. ಸುಚಿತ್ ಕೂಡ ಸೇರಿಕೊಂಡಿದ್ದಾರೆ.

ಗೌತಮ್ ಹೋದ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಿಂಚಿದ್ದರು. ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಅವರು ಪಂಜಾಬ್ ತಂಡಕ್ಕೆ ಜಿಗಿದಿದ್ದಾರೆ. ಸುಚಿತ್ ಈ ಮೊದಲಿನ ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿದ್ದರು. ಇದರಿಂದಾಗಿ ನೆಸ್ ವಾಡಿಯಾ ಮಾಲೀಕತ್ವದ ತಂಡದಲ್ಲಿ ಈಗ ಕನ್ನಡಿಗರದ್ದೇ ಸಿಂಹಪಾಲು.

ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅವರು ಈ ಬಾರಿ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಲಿದ್ದಾರೆ. ಈ ಮೊದಲು ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡಿದ್ದರು. ಅವರೊಂದಿಗೆ ತಂಡದಲ್ಲಿ ಲೆಗ್‌ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಇದ್ದಾರೆ. ಹೋದ ಸಲ ಕೆಲವು ಪಂದ್ಯಗಳಲ್ಲಿ ’ಮ್ಯಾಚ್‌ ವಿನ್ನರ್‘ ಆಗಿದ್ದ ಶ್ರೇಯಸ್ ಈ ಬಾರಿಯೂ ಕೈಚಳಕ ತೋರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಮನೀಷ್ ಪಾಂಡೆ ಮತ್ತು ಕೋಲ್ಕತ್ತ ತಂಡದಲ್ಲಿ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಇದ್ದಾರೆ.

ಐಪಿಎಲ್‌ನಲ್ಲಿ ಒಂದು ಪ್ರತ್ಯೇಕ ತಂಡವಾಗಿ ಇಳಿಯುವಷ್ಟು ಪ್ರತಿಭಾವಂತರು ಕರ್ನಾಟಕದಲ್ಲಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ರಾಜ್ಯದ ಪ್ರಮುಖ ಆಟಗಾರರಿಗೆ ಮಣೆ ಹಾಕುತ್ತಿಲ್ಲ. ಅದರಲ್ಲೂ ಕಳೆದ ಮೂರು ವರ್ಷಗಳಿಂದ ಪವನ್ ದೇಶಪಾಂಡೆ, ಅನಿರುದ್ಧ ಜೋಶಿ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಿತ್ತು. ಇದರಿಂದಾಗಿ ಪ್ರತಿವರ್ಷವೂ ಆರ್‌ಸಿಬಿಯು ಟೀಕೆಗೊಳಗಾಗುತ್ತಿದೆ. ಈ ಸಲವಾದರೂ ತಂಡದಲ್ಲಿರುವ ದೇವದತ್ತ ಪಡಿಕ್ಕಲ್ ಅಥವಾ ಪವನ್ ದೇಶಪಾಂಡೆಗೆ ಪದಾರ್ಪಣೆಯ ಅವಕಾಶ ನೀಡುವುದೇ ಎಂಬುದನ್ನು ಕಾದು ನೋಡಬೇಕು. ಗದುಗಿನ ಅನಿರುದ್ಧ ಜೋಶಿ ಈ ಬಾರಿ ರಾಜಸ್ಥಾನ ತಂಡದಲ್ಲಿದ್ದಾರೆ. ಅವರೂ ತಮ್ಮ ಆಟ ತೋರಿಸಲು ಕಾತುರರಾಗಿದ್ದಾರೆ. ಅವಕಾಶ ಸಿಗಬೇಕಷ್ಟೇ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು