ಬುಧವಾರ, ನವೆಂಬರ್ 25, 2020
21 °C

IPL-2020 | ಸೋಲುಗಳು ಎದುರಾಗುತ್ತವೆ ಅದಕ್ಕೆ ಆತಂಕಪಡುವ ಅಗತ್ಯವಿಲ್ಲ: ರಬಾಡ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮತ್ತು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮಂಗಳವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ 5 ವಿಕೆಟ್‌ ಅಂತರದ ಸೋಲು ಅನುಭವಿಸಿತ್ತು. ಆಡಿದ್ದ 9 ಪಂದ್ಯಗಳಲ್ಲಿ ಕೇವಲ 3 ಜಯ ಸಾಧಿಸಿ 6 ಪಂದ್ಯಗಳಲ್ಲಿ ಸೋಲು ಕಂಡಿದ್ದ ಕಿಂಗ್ಸ್‌ ವಿರುದ್ಧ ಡೆಲ್ಲಿ ಸೋಲು ಕಂಡದ್ದು ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿರುವ ಕ್ಯಾಪಿಟಲ್ಸ್‌ನ ಪ್ರಮುಖ ವೇಗಿ ಕಗಿಸೊ ರಬಾಡ, ಈ ಸೋಲಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕಿಂಗ್ಸ್ ವಿರುದ್ಧದ ಸೋಲನ್ನು ಎಚ್ಚರಿಕೆಯ ಕರೆ ಎಂದು ಭಾವಿಸಬೇಕೇ ಎಂಬುದು ತಿಳಿದಿಲ್ಲ. ಸೋಲು ಮತ್ತು ಗೆಲುವು ಎದುರಾಗುತ್ತಿರುತ್ತವೆ. ಹಾಗಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ನಾವು ಎಲ್ಲಿ ಎಡವಿದೆವು ಎಂಬುದನ್ನು ಪರಿಶೀಲಿಸಬೇಕಿದೆ. ಅದನ್ನು ಈಗಾಗಲೇ ಮಾಡಿದ್ದೇವೆ. ನಾವು ಆ ಪಂದ್ಯದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎಲ್ಲಿ ಸುಧಾರಣೆ ಮಾಡಿಕೊಳ್ಳಬೇಕಿದೆ ಎಂದು ಚರ್ಚಿಸಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು, ಆ ಪಂದ್ಯದ ಉತ್ತಮ ಅಂಶಗಳನ್ನು ಅರಿತುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಸೋಲುಗಳು ಎದುರಾಗುತ್ತವೆ. ಅದರಿಂದ ವಾಪಸ್ ಆಗಬೇಕು ಮತ್ತು ಮುಂದಿನ ಪಂದ್ಯಗಳಿಗೆ ಸಿದ್ಧರಾಗಬೇಕು. ನಾವು ಏನು ತಪ್ಪು ಮಾಡಿದ್ದೇವೆ, ಏನು ಸರಿಯಾಗಿ ಮಾಡಿದ್ದೇವೆ ಎಂಬುದನ್ನು ಗುರುತಿಸಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ಈ ವೇಗಿ ಈ ಬಾರಿಯ ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಬೌಲರ್ ಎನಿಸಿದ್ದಾರೆ. ತಮ್ಮ ಪ್ರದರ್ಶನದ ನೆರವಿನಿಂದ ಡೆಲ್ಲಿಗೆ ಕಪ್‌ ಗೆಲ್ಲಲು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಇದನ್ನು ಸಾಮೂಹಿಕ ದೃಷ್ಟಿಯಿಂದ ನೋಡಬೇಕು ಎಂದು ಭಾವಿಸುತ್ತೇನೆ. ನೋಡಿ, ನಾವು ಆಡಿರುವ 10 ಪಂದ್ಯಗಳಲ್ಲಿ 7 ಮಂದಿ ಬೇರೆಬೇರೆ ಪಂದ್ಯಶ್ರೇಷ್ಠರನ್ನು ಕಂಡಿದ್ದೇವೆ. ಪಂದ್ಯ ಗೆದ್ದುಕೊಡಬಲ್ಲ ಸಾಕಷ್ಟು ಆಟಗಾರರು ತಂಡದಲ್ಲಿದ್ದಾರೆ. ಇದು ನಮ್ಮಲ್ಲಿರುವ ಗೆಲುವಿನ ಹಸಿವನ್ನು ತೊರಿಸುತ್ತದೆ’ ಎಂದು ಹೇಳಿದ್ದಾರೆ.

‘ನಾನು ವಿಕೆಟ್‌ಗಳನ್ನು ಪಡೆಯುವ ಅದೃಷ್ಠಶಾಲಿ. ಆದರೆ, ಎಲ್ಲರೂ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಎಲ್ಲ ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಮತ್ತು ಫೀಲ್ಡರ್‌ಗಳೂ ತಂಡದ ಉತ್ತಮ ಪ್ರದರ್ಶನಕ್ಕೆ ನೆರವಾಗುತ್ತಿದ್ದಾರೆ. ಕೈ ಜೋಡಿಸುವ ಆಟಗಾರರು ನಮ್ಮಲ್ಲಿದ್ದಾರೆ. ಹಾಗಾಗಿ ಇದು ಯಾವಾಗಲೂ ತಂಡದ ಸಂಘಟಿತ ಪ್ರದರ್ಶನವಾಗಲಿದೆ’ ಎಂದಿದ್ದಾರೆ.

ಡೆಲ್ಲಿ ತಂಡ ನಾಳೆ (ಅ.24) ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ಆಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು