ಸೋಮವಾರ, ನವೆಂಬರ್ 30, 2020
24 °C

IPL-2020 | ರೋಹಿತ್ ಶರ್ಮಾ ನಾಯಕತ್ವ ಧೋನಿ–ಗಂಗೂಲಿ ಅವರ ಮಿಶ್ರಣ: ಇರ್ಫಾನ್ ಪಠಾಣ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಸೌರವ್‌ ಗಂಗೂಲಿ ಹಾಗೂ ಎಂಎಸ್‌ ಧೋನಿ ಅವರೊಂದಿಗೆ ಹೋಲಿಸಿದ್ದಾರೆ.

ಐಪಿಎಲ್‌–2020 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದ್ದವು. ನವೆಂಬರ್‌ 10ರಂದು ನಡೆದ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ರೋಹಿತ್ ಪಡೆ, ಐದನೇ ಬಾರಿಗೆ ಐಪಿಎಲ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಇನ್ಯಾವ ತಂಡವೂ ಇಷ್ಟು ಸಲ ಪ್ರಶಸ್ತಿ ಗೆದ್ದಿಲ್ಲ.

ರೋಹಿತ್ ನಾಯಕತ್ವದ ಬಗ್ಗೆ ಮಾತನಾಡಿರುವ ಪಠಾಣ್‌, ‘ಆತ ಧೋನಿ ಮತ್ತು ಗಂಗೂಲಿ ಅವರ ಮಿಶ್ರಣ. ಗಂಗೂಲಿ ತಮ್ಮ ಬೌಲರ್‌ಗಳ ಮೇಲೆ ವಿಶ್ವಾಸವಿಟ್ಟು ಮುನ್ನಡೆಯುತ್ತಿದ್ದರು. ಧೋನಿ ಅವರೂ ತಮ್ಮ ಬೌಲರ್‌ಗಳ ಮೇಲೆ ವಿಶ್ವಾಸವಿಟ್ಟಿದ್ದರು. ಆದರೆ, ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು’ ಎಂದಿದ್ದಾರೆ. ಮುಂದುವರಿದು ರೋಹಿತ್ ಬೌಲರ್‌ಗಳನ್ನು ಅಗತ್ಯಾನುಸಾರ ಬಳಸಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.

‘ಪಂದ್ಯವೊಂದು ನಿಕಟ ಪೈಪೋಟಿಯಿಂದ ಸಾಗಿತ್ತು. ಆಗ ರೋಹಿತ್‌, ಬೂಮ್ರಾ (ಜಸ್‌ಪ್ರೀತ್‌ ಬೂಮ್ರಾ) ಅವರಿಗೆ 17ನೇ ಓವರ್‌ನಲ್ಲಿ ಬೌಲಿಂಗ್‌ ನೀಡಿದರು. ಬೂಮ್ರಾ ವಿಕೆಟ್‌ ಪಡೆದು ಪಂದ್ಯವನ್ನು ತಮ್ಮ ತಂಡದ ಕಡೆಗೆ ವಾಲಿಸಿದ್ದರು. ಸಾಮಾನ್ಯವಾಗಿ 18ನೇ ಓವರ್‌ನಲ್ಲಿ ಬೂಮ್ರಾಗೆ ಬಾಲ್‌ ನೀಡಲಾಗುತ್ತಿತ್ತು’

‘ಟೂರ್ನಿಯಲ್ಲಿ ಕೀರನ್‌ ಪೊಲಾರ್ಡ್ ಅವರನ್ನು ಬಳಸಿಕೊಂಡ ರೀತಿಯನ್ನೂ ಗಮನಿಸಿ. ಆರಂಭದಲ್ಲಿ ಅವರಿಂದ ಬೌಲಿಂಗ್‌ ಮಾಡಿಸಿರಲಿಲ್ಲ. ಆದರೆ, ವೇಗದ ಪಿಚ್‌ಗಳಲ್ಲಿ ಅವರನ್ನು ಬಳಸಿಕೊಂಡರು’ ಎಂದು ವಿಶ್ಲೇಷಿಸಿದ್ದಾರೆ.

ಮುಂಬೈ ಪಡೆ ರೋಹಿತ್ ನಾಯಕತ್ವದಲ್ಲಿ 2013, 2015, 2017, 2019 ಮತ್ತು 2020ರಲ್ಲಿ ಪ್ರಶಸ್ತಿ ಜಯಿಸಿದೆ. ಹೀಗಾಗಿ ಕ್ರಿಕೆಟ್ ವಿಶ್ಲೇಷಕರು ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ವಿರಾಟ್‌ ಕೊಹ್ಲಿ ಬದಲು ಮುನ್ನಡೆಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು